ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ಗೆ ಬಳಸುವ ಸರ್ವೆ ಪೋಲ್‌ಬಿದ್ದು ವಿದ್ಯಾರ್ಥಿನಿ ತೇಜಸ್ವಿನಿ ಸಾವು ಪ್ರಕರಣ ಸಂಬಂಧ ಎಂಜಿನಿಯರ್ ಚಂದ್ರಶೇಖರ್ ಎಂಬುವವ ರನ್ನು ವಿ.ವಿ.ಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆ ಸಂಬಂಧ ತೇಜಸ್ವಿನಿ ತಂದೆ ಸುಧಾಕರ್ ರಾವ್ ಅವರು ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲಿಕ, ಗುತ್ತಿಗೆದಾರ, ಎಂಜಿನಿಯರ್, ಬಿಬಿಎಂಪಿ ಅಧಿಕಾರಿಗಳು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಭಾನುವಾರ ಕಟ್ಟಡ ಎಂಜಿನಿಯರ್ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇನ್ನು ಕಟ್ಟಡ ಮಾಲಿಕ, ಗುತ್ತಿಗೆದಾರ ಹಾಗೂ ಘಟನೆ ವೇಳೆ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇನ್ನು ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿಲ್ಲ ಎಂಬುದು ಗೊತ್ತಾಗಿದೆ. ಎಲ್ಲಾ ಆರೋಪಿಗಳನ್ನು ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
“ಖಾಲಿ ಪೇಪರ್ ಮೇಲೆ ಸಹಿಗೆ ಒತ್ತಾಯ’:
ಮತ್ತೂಂದೆಡೆ ಶನಿವಾರ ಸಂಜೆಯೇ ತೇಜಸ್ವಿನಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಕಾನೂನು ಪ್ರಕ್ರಿಯೆ ಹಾಗೂ ಬೇಗನೆ ಮರಣೋತ್ತರ ಪರೀಕ್ಷೆ ಮುಗಿಸಲು ಸೂಚಿಸದೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಘಟನೆ ನಡೆದು ಎರಡು ದಿನಗಳು ಕಳೆದರೂ ಯಾರನ್ನೂ ಬಂಧಿಸಿಲ್ಲ. ಅಲ್ಲದೆ, ಖಾಲಿ ಪೇಪರ್ ಮೇಲೆ ಸಹಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಬಿಲ್ಡಿಂಗ್ ಮಾಲಿಕರ ಬಳಿ ಏನಾದರೂ ಮಾತನಾಡುವಂತೆ ಒತ್ತಾಯಿಸುತ್ತಿದ್ದಾರೆ. ಮಧ್ಯಮ ವರ್ಗದವರು ಅಂದಾಕ್ಷಣ ಈ ರೀತಿ ಮಾಡುತ್ತಿದ್ದಾರೆ. ಖಾಲಿ ಪೇಪರ್‌ಗೆ ಸಹಿ ಮಾಡುವುದೆಂದರೆ ಏನು? ನಾವು ಕೇಳ್ಳೋದಕ್ಕೆ ಯಾವುದಕ್ಕೂ ಸರಿಯಾಗಿ ಪ್ರತಿಕ್ರಿಯೆ ಕೊಡಲ್ಲ. ಪೊಲೀಸರು ಕೂಡ ಕಟ್ಟಡ ಮಾಲಿಕರ ಜತೆ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ತೇಜಸ್ವಿನಿ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.