ಕುಣಿಗಲ್: ಬಾಲಕಿಯೊಬ್ಬಳನ್ನು ಅಪಹರಣ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕುಣಿಗಲ್ ಪೊಲೀಸರು ರಾಷ್ಟ್ರರಾಜ್ಯಧಾನಿ ದೆಹಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಪುಲಿನ್ ಬಿಸ್ವಾಸ್ ಅಲಿಯಾಸ್ ಪುನೀತ್ (30) ಬಂಧಿತ ಆರೋಪಿ.
ತಾಲೂಕಿನ ಕಸಬಾ ಹೋಬಳಿ ಹನುಮಾಪುರ ಗ್ರಾಮದ ಎಕೆಆರ್ ಎಂಟರ್ ಪ್ರೈಸಸ್ ಗುಜರಿ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅಪ್ರಾಪ್ತ ಬಾಲಕಿಯನ್ನು ಅದೇ ಪ್ರಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪುಲಿನ್‌ಬಿಸ್ವಾಸ್ ಅಲಿಯಾಸ್ ಪುನೀತ್ ಅಪಹರಿಸಿಕೊಂಡು ಹೋಗಿ ತಲೆಮರೆಸಿಕೊಂಡಿದ್ದನ್ನು ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದರು.
ಘಟನೆ ವಿವರ: ಪುಲಿನ್ ಬಿಸ್ವಾಸ್ ಅಲಿಯಾಸ್ ಪುನೀತ್‌ನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಕೂಡಾ ಇದ್ದಾಳೆ ಎನ್ನಲಾಗಿದೆ. ಆರೋಪಿ ಪುನೀತ್ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸುವುದಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುಟುಂಬವೊಂದನ್ನು ಹನುಮಾಪುರಕ್ಕೆ ಬರ ಮಾಡಿಕೊಂಡಿದ್ದನು ಎನ್ನಲಾಗಿದೆ. ಆ ಕುಟುಂಬದ ಬಾಲಕಿಯನ್ನು ಆರೋಪಿ ಸೆ.14 ರಂದು ಬೆಳಗಿನ ಜಾವ ಫ್ಯಾಕ್ಟರಿಯಿಂದ ಅಪರಿಸಿಕೊಂಡು ಹೋಗಿ, ವಿವಿಧ ರಾಜ್ಯಗಳನ್ನು ಸುತ್ತಾಡಿಸಿ ಬಳಿಕ ದೆಹಲಿಯಲ್ಲಿ ಇರಿಸಿಕೊಂಡಿದ್ದನು.
ಪೊಲೀಸರ ಕಾರ್ಯಚರಣೆ: ಬಾಲಕಿ ಅಪಹರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್, ಎ.ಎಸ್.ಪಿ. ಮರಿಯಪ್ಪ, ಡಿವೈಎಸ್‌ಪಿ ಲಕ್ಷ್ಮಿಕಾಂತ್ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ವೃತ್ತ ನಿರೀಕ್ಷಕ ನವೀನ್‌ಗೌಡ ಅವರ ನೇತೃತ್ವದ ಪೊಲೀಸರ ತಂಡವು ಖಚಿತ ಮಾಹಿತಿ ಮೇರೆಗೆ ದೆಹಲಿಗೆ ತೆರಳಿ, ಕಾರ್ಯಚರಣೆ ನಡೆಸಿ ದೆಹಲಿಯ ಆಲಿಪುರ್‌ನ ಕ್ರಿಶನ್ ಪ್ಲಾಸ್ಟಿಕ್ ಫ್ಯಾಕ್ಟರಿ ಬಳಿ ಆರೋಪಿಯನ್ನು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.
ಕಾರ್ಯಚರಣೆಯಲ್ಲಿ ಎಎಸ್‌ಐ ಪ್ರಕಾಶ್, ಸಿಬ್ಬಂದಿಗಳಾದ ನಟರಾಜು, ನಂದಿನಿ ಇದ್ದರು.