Advertisement

ಡೆತ್‌ನೋಟ್‌ ಬರೆದಿಟ್ಟು ಪಿಎಸ್‌ಐ ಆಪ್ತೆ ಆತ್ಮಹತ್ಯೆ

03:08 PM May 01, 2023 | Team Udayavani |

ಬೆಂಗಳೂರು: ಡೆತ್‌ನೋಟ್‌ ಬರೆದಿಟ್ಟು ಬಿಎಸ್ಸಿ ವಿದ್ಯಾರ್ಥಿನಿಯೊಬ್ಬರು ಕಾಟನ್‌ ಪೇಟೆಯಲ್ಲಿರುವ ಪೊಲೀಸ್‌ ಕ್ವಾಟ್ರರ್ಸ್‌ನ 8ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಳ್ಳಾರಿ ಮೂಲದ ಆಯಿಷಾ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಆಕೆಯ ಬಳಿ ಎರಡು ಪುಟದ ಡೆತ್‌ನೋಟ್‌ ಪತ್ತೆಯಾ ಗಿದ್ದು, ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯಿಷಾ ಮಂಗಳೂರಿನ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್‌ ಸೈನ್ಸ್‌ ವ್ಯಾಸಂಗ ಮಾಡುತ್ತಿದ್ದು, ಸಿಐಡಿಯಲ್ಲಿರುವ ಸಬ್‌ಇನ್‌ಸ್ಪೆಕ್ಟರ್‌ ಭೀಮೇಶ್‌ ನಾಯಕ್‌ ಎಂಬಾತನನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಆಗಾಗ್ಗೆ ಕಾಟನ್‌ಪೇಟೆಯ ಬಿನ್ನಿ ಬಳಿಯ ಪೊಲೀಸ್‌ ಕ್ವಾಟ್ರರ್ಸ್‌ನ ಭೀಮೇಶ್‌ ನಾಯಕ್‌ ಮನೆಗೆ ಬಂದು ಹೋಗುತ್ತಿದ್ದಳು. ನಾಲ್ಕೈದು ದಿನಗಳ ಹಿಂದೆಯೂ ಆಯಿಷಾ ಭೀಮೇಶ್‌ ಮನೆಗೆ ಬಂದಿದ್ದು, ಇಲ್ಲಿಯೇ ತಂಗಿದ್ದರು. ಭಾನುವಾರ ಬೆಳಗ್ಗೆ ಇಬ್ಬರ ನಡುವೆ ಯಾವ ವಿಚಾರಕ್ಕೆ ಮನಸ್ತಾಪ ಉಂಟಾಗಿದೆ ಎಂಬುದು ಗೊತ್ತಿಲ್ಲ. ಮುಂಜಾನೆ 8 ಗಂಟೆ ಸುಮಾರಿಗೆ ಇಬ್ಬರು ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಹೋಗಿದ್ದಾರೆ. ಆಕೆಯ ಮಂಗಳೂರಿನ ಬಸ್‌ ಹತ್ತಿದ್ದರು. ಈತ ರಾಯಚೂರಿನ ಬಸ್‌ ಹತ್ತಿದ್ದ. ಆದರೆ, ಸ್ವಲ್ಪ ದೂರು ಹೋಗುತ್ತಿದ್ದಂತೆ ಆಯಿಷಾ ಬಸ್‌ನಿಂದ ಇಳಿದು ಬಂದು, ಪೊಲೀಸ್‌ ಕ್ವಾಟ್ರರ್ಸ್‌ನ 8ನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋರಾಗಿ ಬಿದ್ದ ಶಬ್ದ ಕೇಳಿ ಅಕ್ಕ-ಪಕ್ಕದ ನಿವಾಸಿಗಳು ಬಂದು ನೋಡಿದಾಗ ಆಯಿಷಾ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಆಕೆಯ ಬಳಿ ಎರಡು ಪುಟಗಳ ಡೆತ್‌ನೋಟ್‌ ಪತ್ತೆಯಾಗಿದ್ದು, ಅದರಲ್ಲಿ “ಘಟನೆಗೆ ನಾನೇ ಕಾರಣ’ ಎಂದು ಉಲ್ಲೇಖೀಸಿದ್ದಾರೆ. ಇನ್ನು ಪ್ರೇಯಸಿ ಆತ್ಮಹತ್ಯೆ ವಿಚಾರ ತಿಳಿದು ನೆಲಮಂಗಲ ಸಮೀಪದಲ್ಲಿ ಹೋಗುತ್ತಿದ್ದ ಭೀಮೇಶ್‌ ನಾಯಕ್‌ ವಾಪಸ್‌ ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಡೆತ್‌ನೋಟ್‌ನಲ್ಲಿ ಏನಿದೆ?: “ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ಜೀವನದ ಮೇಲಿನ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಭೀಮೇಶ್‌ ನಾಯಕ್‌ ಮೇಲೆ ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟಿದ್ದೇನೆ. ಭೀಮೆಶ್‌ ಒಳ್ಳೆಯ ವ್ಯಕ್ತಿ. ಅವರ ಹಾಗೂ ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇಲ್ಲ. ನಾನು ದಾಖಲಿಸಿದ್ದ ಸುಳ್ಳು ಕೇಸ್‌ನಿಂದ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ನನ್ನಿಂದ ಭೀಮೇಶ್‌ ಮತ್ತು ನನ್ನ ಕುಟುಂಬಕ್ಕೂ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ. ಭೀಮೇಶ್‌ ನನ್ನ ಆತ್ಮೀಯ ಸ್ನೇಹಿತ. ಈ ನನ್ನ ಆತ್ಮಹತ್ಯೆಗೂ ಭೀಮೇಶ್‌ಗೂ ಯಾವುದೇ ಸಂಬಂಧವಿಲ್ಲ ಎಂದು ದಾಖಲಿಸಿದ್ದಾರೆ. ಈ ಡೆತ್‌ನೋಟ್‌ನಲ್ಲಿ ಏ.24ರಂದು ನಮೂದಿಸಲಾಗಿದೆ. ಅಂದರೆ ಮಂಗಳೂರಿನಿಂದ ಬೆಂಗಳೂರಿಗೆ ಬರುವ ಮೊದಲೇ ಈಕೆ ಡೆತ್‌ನೋಟ್‌ ಬರೆದಿಟ್ಟುಕೊಂಡು ಬಂದಿದ್ದು, ಆಗಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಲ್ಲದೆ, ಆಕೆಯ ಕೈ ಮೇಲೆ ಭೀಮೇಶ್‌ ನಾಯಕ್‌ ಹೆಸರು ಮತ್ತು ಮೊಬೈಲ್‌ ನಂಬರ್‌ ಬರೆದುಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.

ಜೈಲು ಸೇರಿದ್ದ ಪಿಎಸ್‌ಐ!: ಬಳ್ಳಾರಿ ಮೂಲದ ಆಯಿಷಾರನ್ನು 3-4 ವರ್ಷಗಳ ಹಿಂದೆ ಪರಿಚಯಿಸಿಕೊಂಡಿದ್ದ ಭೀಮೇಶ್‌ ಆಕೆ ಜತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದರು ಎಂದು ಹೇಳಲಾಗಿತ್ತು. ಆಗ ಆಕೆ ಅಪ್ರಾಪ್ತೆಯಾಗಿದ್ದರಿಂದ ಸ್ಥಳೀಯ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆ ಬಳಿಕ ತನ್ನ ವಿರುದ್ಧ ಸಂತ್ರಸ್ತೆ ಸುಳ್ಳು ದೂರು ದಾಖಲಿಸಿದ್ದಾಳೆ ಎಂದು ಹೈಕೋರ್ಟ್‌ ಮೂಲಕ ಪ್ರಕರಣ ರದ್ದು ಪಡಿಸಿಕೊಂಡು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರು. ಈ ಪ್ರಕರಣದಲ್ಲಿ ಭೀಮೇಶ್‌ ಅಮಾನತು ಕೂಡ ಆಗಿದ್ದರು. ಆ ನಂತರ ಒಂದೆರಡು ವರ್ಷ ದೂರವಾಗಿದ್ದ ಇಬ್ಬರು ಇದೀಗ ಮತ್ತೆ ಆತ್ಮೀಯರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next