ಉಳ್ಳಾಲ: ಉಳ್ಳಾಲಹೊಯ್ಗೆ ಬಳಿಯ ನೇತ್ರಾವತಿ ನದಿಯಲ್ಲಿ ನಡೆದ ದೋಣಿ ದುರಂತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದರೆ, ಓರ್ವ ಯುವತಿ ಗಂಭೀರ ಸ್ಥಿತಿಯಲ್ಲಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮೂವರು ಯುವತಿರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಮಂಜೇಶ್ವರ ಮಿಯಪದವು ನಿವಾಸಿ ರೆನಿಟಾ(16) ಮೃತ ಯುವತಿಯಾಗಿದ್ದು , ಗದಗ ಮೂಲದ ಯುವತಿ ಕಾವ್ಯಾ ಗಂಭೀರ ಸ್ಥಿತಿಯಲ್ಲಿದ್ದು, ದೋಣಿಯಲ್ಲಿದ್ದ ಎಲ್ಲಾ ಯುವತಿಯರು ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಉಳ್ಳಾಲ ಹೊಗೆ ನಿವಾಸಿ ಜಾರ್ಜ್ ಅವರಿಗೆ ಸೇರಿದ ದೋಣಿ ದುರಂತದಲ್ಲಿ ಈ ಘಟನೆ ಸಂಭವಿಸಿದೆ.
ಘಟನೆಯ ವಿವರ : ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ನರ ಚರ್ಚ್‌ನಲ್ಲಿ ವಾರ್ಷಿಕ ಮಹೋತ್ಸವ ಭಾನುವಾರ ನಡೆದಿದ್ದು, ಆ ಪ್ರಯುಕ್ತ ಮಂಗಳೂರಿನ ಖಾಸಗಿಕಾಲೇಜಿನಲ್ಲಿ ಕಲಿಯುತ್ತಿದ್ದ ಐವರು ವಿದ್ಯಾರ್ಥಿನಿಯರು ಉಳ್ಳಾಲ ಹೊಗೆಯಲ್ಲಿರುವ ತಮ್ಮ ಸಹಪಾಠಿಯ ಜೊವಿಟಾ ಅವರ ಮನೆಗೆ ಆಗಮಿಸಿದ್ದರು. ಮಧ್ಯಾಹ್ನದ ಊಟದ ಬಳಿಕ ಮನೆಯ ಸಮೀಪದ ನೇತ್ರಾವತಿ ನದಿ ಬಳಿ ತೆರಳಿದ್ದು ಸಂಜೆ ವೇಳೆಗೆ ಎಲ್ಲಾ ವಿದ್ಯಾರ್ಥಿನಿಯರು ನೇತ್ರಾವತಿ ನದಿಯಲ್ಲಿ ವಿಹಾರ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದು , ಜೊವಿಟಾ ಅವರ ತಂದೆ ಜಾರ್ಜ್ ಅವರ ದೋಣಿಯಲ್ಲಿ ನೇತ್ರಾವತಿ ನದಿಯಲ್ಲಿ ವಿಹಾರಕ್ಕೆ ತೆರಳಿದ್ದು, ವಿಹಾರ ಮುಗಿಸಿ ವಾಪಾಸ್ ಬರಲು ದೋಣಿ ತಿರುಗಿಸುತ್ತಿದ್ದಾಗ ಬಲವಾದ ಗಾಳಿ ಬೀಸಿ ದೋಣಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಮೋಂತು ಮಾರ್ಟಿನ್, ಡೇವಿಡ್, ಅಮರ್ ಕಿರಣ್, ನವೀನ್ ಡಿ.ಸೋಜ, ಪ್ರಿಮ್‌ಸನ್ ಮೊಂತೇರೋ, ಪ್ರೇಮ್ ಪ್ರಕಾಶ್ ಡಿ.ಸೋಜ ದೋಣಿಯ ಮೂಲಕ ಸ್ಥಳಕ್ಕೆ ಧಾವಿಸಿ ಮುಳುಗುತ್ತಿದ್ದವರನ್ನು ರಕ್ಷಿಸಿದ್ದು,ಈ ಸಂದರ್ಭದಲ್ಲಿ ರೆನಿಟಾ ಮತ್ತು ಕಾವ್ಯ ಆಳವಾಗಿ ಮುಳುಗಿದ್ದರಿಂದಾಗಿ ದಡ ಸೇರಿಸುವಾಗ ಗಂಭೀರ ಸ್ಥಿತಿಯಲ್ಲಿದ್ದು. ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ರೆನಿಟಾ ಸಾವನ್ನಪ್ಪಿದ್ದಾಳೆ.
ಘಟನೆಯ ಕುರಿತು ಮಾಹಿತಿ ನೀಡಿದ ಮಾರ್ಟಿನ್ ಘಟನೆ ನಡೆದಾಗ ನದಿಬದಿಯ ಮನೆಯಲ್ಲಿ ಇದ್ದು ಬೊಬ್ಬೆ ಕೇಳಿ ಈಜುತ್ತಾ ಘಟನಾ ಸ್ಥಳಕ್ಕೆ ತಲುಪಿದ್ದು, ಇಬ್ಬರನ್ನು ಈಜಿಯೇ ದಡ ಸೇರಿಸಿ ರಕ್ಷಿಸಿದೆ ಎಂದರು.ಸ್ಥಳೀಯ ನಿವಾಸಿ ಪ್ರೇಮ್ ಪ್ರಕಾಶ್ ಅವರು ಉಳಿಯ ನದಿ ಬದಿಯ ಕಿಂಗ್ಸ್ ರಿವರ್‌ಸೈಡ್‌ನಲ್ಲಿ ಭಾನುವಾರ ತುಂಬಾ ಜನರು ಸೇರಿದ್ದು, ನದಿ ಬದಿ ಹೋಗದಂತೆ ಅವರನ್ನು ತಡೆದು ಬೋಟ್‌ನಲ್ಲಿದ್ದ ಇಂಜಿನ್ ತೆಗೆಯುವಷ್ಟರಲ್ಲಿ ದೋಣಿ ಮುಳುಗಿದ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದ ಆಸಂದರ್ಭದಲ್ಲಿ ರೆನಿಟಾ ಅವರ ದೇಹ ನದಿಯಲ್ಲಿ ತೇಲುತ್ತಿದ್ದು, ದೋಣಿಗೆ ಹಾಕಿ ಪ್ರಥಮ ಚಿಕಿತ್ಸೆ ನೀಡಿದರು ಫಲಕಾರಿಯಾಗಿಲ್ಲ ಎಂದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.