Advertisement

ಹೆಣ್ಣು ಮಕ್ಕಳ ಸುರಕ್ಷತೆ, ಶಿಕ್ಷಣಕ್ಕಿರಲಿ ಸದಾ ಆದ್ಯತೆ

01:32 AM Jan 24, 2021 | Team Udayavani |

ಇಂದು ಹೆಣ್ಣು ಮಕ್ಕಳ ರಾಷ್ಟ್ರೀಯ ದಿನಾಚರಣೆ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಬೆಳೆ ಸುವ ಉದ್ದೇಶದೊಂದಿಗೆ ಪ್ರತೀ ವರ್ಷ ದೇಶದಲ್ಲಿ  ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

Advertisement

2008ರಲ್ಲಿ  ಪ್ರಾರಂಭ: ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶ ಗಳನ್ನು ನೀಡುವುದರ ಜತೆಗೆ ಅವರು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದೇಶದಲ್ಲಿ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ಚಿಂತನೆಯನ್ನು 2008ರಲ್ಲಿ ಮೊದಲ ಬಾರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಜಾರಿಗೆ ತಂದಿತು. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಹಿಂದಿನಿಂದಲೂ ನಮ್ಮಲ್ಲಿ ಪ್ರಚಲಿತದಲ್ಲಿರುವ ಮಾತು. ಆದರೆ ಇದು ಮಾತಾಗಿಯೇ ಉಳಿಯಿತೇ ವಿನಾ ಅಕ್ಷರಶಃ ಅನುಷ್ಠಾನಲ್ಲೆ ಬರಲಿಲ್ಲ. ಕಳೆದ ಕೆಲವು ದಶಕಗಳಿಗೆ ಹೋಲಿಸಿದಲ್ಲಿ ಹೆಣ್ಣು ಮಕ್ಕಳು ಈಗ ಸಾಕಷ್ಟು ಪ್ರಮಾಣದಲ್ಲಿ ಸುಶಿಕ್ಷಿತರಾಗುತ್ತಿರುವರಾದರೂ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ.

ಸುಭದ್ರತೆಯ ವಾತಾವರಣ ಕಲ್ಪಿಸುವ ಗುರಿ: ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗತಾರತಮ್ಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಹೆಣ್ಣು ಬಳಲುತ್ತಿದ್ದಾಳೆ. ಇಂದಿನ ಆಧುನಿಕ ಯುಗದಲ್ಲೂ  ಹೆಣ್ಣು ಮಗುವನ್ನು ಅಭದ್ರತೆ ಕಾಡುತ್ತಿದೆ ಎಂದರೆ ಸಮಾಜ ಇನ್ನೂ ಹಿಂದುಳಿದಿದೆ ಎಂದೇ ಅರ್ಥ. ಕಲಿತ ಹೆಣ್ಣೂ ಕೂಡ ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯ ಅನುಭವಿಸುವ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಈ ಎಲ್ಲ ತೊಡಕುಗಳನ್ನು ನಿವಾರಿಸಿ ಹೆಣ್ಣು ಮಕ್ಕಳಿಗೆ ಸುಭದ್ರತೆಯ ವಾತಾವರಣ ಕಲ್ಪಿಸುವ ಗುರಿ ಈ ದಿನಚಾರಣೆಯ ಹಿಂದಿದೆ.

 

ಆಚರಣೆಯ ಧ್ಯೇಯಗಳು :

Advertisement

 

  • ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಹೆಣ್ಣು ಮಗುವಿನತ್ತ ಸಮಾಜದ ದೃಷ್ಟಿಕೋನ ಬದಲಿಸುವುದು.
  • ಭಾರತೀಯ ಸಮಾಜದಲ್ಲಿ ಹೆಣ್ಣು ಎದುರಿಸುವ ಎಲ್ಲ ತಾರತಮ್ಯವನ್ನು ತೊಡೆದು ಹಾಕುವುದು.
  • ಸಮಾಜದಲ್ಲಿ ಹೆಣ್ಣು ಮಗುವಿಗೆ ದೊರೆಯಬೇಕಿರುವ ಗೌರವ ಮತ್ತು ಮೌಲ್ಯವನ್ನು ಖಾತ್ರಿಗೊಳಿಸುವುದು.
  • ಇತರರಂತೆ ಹೆಣ್ಣು ಮಗುವಿಗೂ ಎಲ್ಲ ಮೂಲಭೂತ ಹಕ್ಕುಗಳು ದೊರೆಯುವಂತೆ ಮಾಡುವುದು.
  • ಲಿಂಗಾನುಪಾತ ಕುಸಿಯುವುದನ್ನು ತಡೆಯಲು ಕಾರ್ಯಯೋಜನೆ ಹಮ್ಮಿಕೊಳ್ಳುವುದು ಮತ್ತು ಹೆಣ್ಣು ಮಗುವಿನೆಡೆಗಿನ ಸಮಾಜದ ಧೋರಣೆಯನ್ನು ಬದಲಿಸುವುದು.
  • ಹೆಣ್ಣು ಮಗುವಿನ ಮಹತ್ವ ಮತ್ತು ಅವರು ನಿರ್ವಹಿಸುವ ಪಾತ್ರದ ಕುರಿತು ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಹೆತ್ತವರಲ್ಲಿ ಜಾಗೃತಿ ಮೂಡಿಸುವುದು.
  • ಆರೋಗ್ಯ, ಶಿಕ್ಷ ಣ, ಪೌಷ್ಟಿಕಾಂಶ ಮತ್ತು ಸ್ವಗೌರವ ಸೇರಿದಂತೆ ಹೆಣ್ಣು ಮಗು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ನಿವಾರಿಸುವುದು.
  • ಭಾರತೀಯ ಜನರಲ್ಲಿ ಲಿಂಗಸಮಾನತೆಯ ಜಾಗೃತಿ ಉಂಟು ಮಾಡುವುದು.

ಸುರಕ್ಷ ಕ್ರಮಗಳು :

  • ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನಶೈಲಿಯ ಸುಧಾರಣೆಯನ್ನು ಪರಿಣಾಮಕಾರಿಯಾಗುವಂತೆ ಮಾಡಬೇಕು.
  • ವಿವಾಹ ನೋಂದಣಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಮೂಲಕ ಸಾರ್ವಜನಿಕರಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು.
  • ಲಿಂಗ ಅಸಮಾನತೆಯನ್ನು ತೊಡೆದು ಹಾಕುವ ಮೂಲಕ ಹೆಣ್ಣು ಮಕ್ಕಳು ಕಡ್ಡಾಯ ಶಿಕ್ಷಣದಲ್ಲಿ ಭಾಗವಹಿಸುವಂತೆ ಮಾಡಿ ಹೆಚ್ಚಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು.
  • ಹೆಣ್ಣು ಮಕ್ಕಳನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಶಕ್ತೀಕರಣ.
  • ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾರ್ಯನೀತಿ, ಪೂರಕವಾದ ಕಾನೂನುಗಳು ಸರಿಯಾಗಿ ಜಾರಿಯಾಗುವಂತೆ ಮಾಡಬೇಕು.
  • ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ತ್ವರಿತ ಶಿಕ್ಷೆಯಾಗಬೇಕು.
  • ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರಕುವಂತಾಗಲು ಹೆಣ್ಣುಮಕ್ಕಳಿಗೆ ಮೀಸಲಾತಿ ನೀಡಬೇಕು.

 

ಹೆಣ್ಣು ಮಕ್ಕಳ ರಕ್ಷಣೆ ಸಂಬಂಧಿ ಕಾನೂನುಗಳು :

  • ಪ್ರಸವಪೂರ್ವ ಲಿಂಗಪತ್ತೆ ಸಂಪೂರ್ಣವಾಗಿ ನಿಷೇಧ
  • ಹೆಣ್ಣು ಮಕ್ಕಳ ಬಾಲ್ಯ ವಿವಾಹ ಪದ್ಧತಿಗೆ ನಿರ್ಬಂಧ
  • ಗರ್ಭಿಣಿಯರಿಗೆ ಪ್ರಸವಪೂರ್ವ ಆರೋಗ್ಯಸೇವೆಯ ಸೌಲಭ್ಯ
  • ಸರಕಾರದಿಂದ ಹೆಣ್ಣು ಮಗು ರಕ್ಷಿಸಿ ಯೋಜನೆ
  • 14 ವರ್ಷಗಳವರೆಗಿನ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ
  • ಸ್ಥಳೀಯ ಸರಕಾರಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ 1/3ರಷ್ಟು ಮೀಸಲು
  • ಸತಿ ವಿರೋಧಿ, ವರದಕ್ಷಿಣೆ ವಿರೋಧಿ ಕಾನೂನುಗಳು
  • ಎಸ್ಸಿ, ಎಸ್ಟಿ ವರ್ಗದ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ
  • ಹೆಣ್ಣು ಮಕ್ಕಳ ಪಾಲನೆ ಮತ್ತು ಪ್ರಾಥಮಿಕ ಶಿಕ್ಷಣದ ಖಾತ್ರಿಗಾಗಿ ಬಾಲವಾಡಿ ಮತ್ತು ಶಿಶುಮಂದಿರಗಳ ಆರಂಭ.
  • ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳ ಕಲಿಕೆಗಾಗಿ ಮುಕ್ತ ಕಲಿಕಾ ವ್ಯವಸ್ಥೆ.

 

Advertisement

Udayavani is now on Telegram. Click here to join our channel and stay updated with the latest news.

Next