ಸಿಡ್ನಿ: ಬ್ಯಾಂಕ್ ನ ಸಿಬಂದಿಯ ತಪ್ಪಿನಿಂದಾಗಿ ಹುಡುಗಿಯೊಬ್ಬಳಿಗೆ ಕೋಟ್ಯಂತರ ರೂಪಾಯಿ ಶಾಪಿಂಗ್ ಮಾಡುವ ಅವಕಾಶ ಸಿಕ್ಕಿದೆ. ಸದ್ದಿಲ್ಲದೇ ಅವಳು ತನ್ನ ಖಾತೆಯಿಂದ 18 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ ಐಷಾರಾಮಿ ಜೀವನ ನಡೆಸಿದ್ದಾಳೆ.
ಆಸ್ಟ್ರೇಲಿಯಾದ ವೆಸ್ಟ್‌ಪ್ಯಾಕ್ ಬ್ಯಾಂಕ್ ಆಕಸ್ಮಿಕವಾಗಿ ಮೂಲತಃ ಮಲೇಷ್ಯಾ ಮೂಲದ 21 ವರ್ಷದ ಕ್ರಿಸ್ಟಿನ್ ಜಿಯಾಕ್ಸಿನ್ ಎಂಬ ವಿದ್ಯಾರ್ಥಿನಿಗೆ ಈ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡಿದ್ದು, ಅದು ಕೂಡ ಅನಿಯಮಿತವಾಗಿತ್ತು!. ಕ್ರಿಸ್ಟಿನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಲು ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದಳು.
ವೆಸ್ಟ್‌ಪ್ಯಾಕ್ ಬ್ಯಾಂಕ್ ತಪ್ಪಾಗಿ ಕ್ರಿಸ್ಟೀನ್ ಖಾತೆಯಲ್ಲಿ ಅನಿಯಮಿತ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಅನುಮತಿಸಿತ್ತು. ವಿಷಯ ತಿಳಿದಾಗ, ಅವಳು ಬ್ಯಾಂಕ್‌ಗೆ ತಿಳಿಸದೆ ಹಣವನ್ನು ಎಗರಿಸಲು ಪ್ರಾರಂಭಿಸಿದ್ದು, ಪಾರ್ಟಿ, ಟ್ರಾವೆಲಿಂಗ್,ಶಾಪಿಂಗ್ , ಚಿನ್ನಾಭರಣ ಸೇರಿ ಐಷಾರಾಮಿ ಜೀವನವನ್ನು ಪ್ರಾರಂಭಿಸಿ ಹಣವನ್ನು ಮನಬಂದಂತೆ ವ್ಯಯಿಸಿದ್ದಾಳೆ. ಅಷ್ಟೇ ಅಲ್ಲ ಕ್ರಿಸ್ಟಿನ್ ದುಬಾರಿ ಅಪಾರ್ಟ್ ಮೆಂಟ್ ಕೂಡ ತೆಗೆದುಕೊಂಡಿದ್ದಾಳೆ. ಇದರೊಂದಿಗೆ ಅವಳ ಇನ್ನೊಂದು ಖಾತೆಗೆ ಸುಮಾರು 2.5 ಲಕ್ಷ ರೂ.ಟ್ರಾನ್ಸ್ ಫರ್ ಮಾಡಿಕೊಂಡಿದ್ದಾಳೆ.
ಸುಮಾರು 11 ತಿಂಗಳುಗಳವರೆಗೆ, ಕ್ರಿಸ್ಟಿನ್ ಬ್ಯಾಂಕ್‌ನಿಂದ ಹಣವನ್ನು ವಂಚನೆ ಮತ್ತು ಸುಲಿಗೆ ಮಾಡುತ್ತಲೇ ಇದ್ದಳು. ಆದಾಗ್ಯೂ, ಇದು ಬಹಿರಂಗವಾದಾಗ, ಕ್ರಿಸ್ಟಿನ್ ಅನ್ನು ಬಂಧಿಸಲಾಯಿತು. ವಿಷಯ ನ್ಯಾಯಾಲಯದ ಮೆಟ್ಟಿಲೇರಿದಾಗ, ಕ್ರಿಸ್ಟೀನ್ ವಿರುದ್ಧದ ಎಲ್ಲಾ ಆರೋಪಗಳನ್ನು ವಜಾಗೊಳಿಸಲಾಯಿತು. ಅವಳನ್ನು ಬಿಡುಗಡೆ ಮಾಡಲಾಯಿತು.
ನನ್ನ ಪೋಷಕರು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ನಾನು ಭಾವಿಸಿದೆ ಎಂದು ಕ್ರಿಸ್ಟಿನ್ ತನ್ನ ವಿವರಣೆಯಲ್ಲಿ ಹೇಳಿದ್ದಾರೆ. ಅದೇ ಸಮಯದಲ್ಲಿ, ಬ್ಯಾಂಕ್ ತಪ್ಪು ಮಾಡಿದ್ದರಿಂದ ಕ್ರಿಸ್ಟಿನ್ ವಂಚನೆಯಲ್ಲಿ ತಪ್ಪಿತಸ್ಥಳಲ್ಲ ಎಂದು ಅವರ ವಕೀಲರು ವಾದಿಸಿದರು. ಮತ್ತೊಂದೆಡೆ, ಕ್ರಿಸ್ಟಿನ್ ಅವರ ಗೆಳೆಯ ವಿನ್ಸೆಂಟ್ ಕಿಂಗ್ ಅವರು ಕ್ರಿಸ್ಟಿನ್ ಬಳಿಯಿರುವ ಇಷ್ಟು ದೊಡ್ಡ ಪ್ರಮಾಣದ ಹಣದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ನಂತರ, ಕ್ರಿಸ್ಟಿನ್ ಸಿಡ್ನಿಯಿಂದ ಮಲೇಷ್ಯಾದ ತನ್ನ ಮನೆಗೆ ಮರಳಿದ್ದಾಳೆ. ಆದಾಗ್ಯೂ, ತನಿಖಾ ಸಂಸ್ಥೆಗಳು ಕ್ರಿಸ್ಟಿನ್ ಳಿಂದ 9 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿವೆ.