Advertisement
ಅಂಕೋಲಾ ಕಾವಳಗದ್ದೆಯ ಸಚಿನ್ ಸಂತೋಷ್ ನಾಯ್ಕ (22) ಮತ್ತು ಹಟ್ಟಿಕೆರೆಯ ಪ್ರವೀಣ್ ಜಯಪಾಲ್ ನಾಯ್ಕ (33) ಶಿಕ್ಷೆಗೊಳಗಾದವರು.
ಪಿಯುಸಿ ವಿದ್ಯಾರ್ಥಿನಿ 2022ರ ಎ.12ರಂದು ಮಧ್ಯಾಹ್ನ 12.45ರ ಸುಮಾರಿಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹರಿಯಾಣಕ್ಕೆ ಹೋಗುವ ಟಿಕೆಟ್ ಪಡೆಯಲೆಂದು ನಿಂತಿದ್ದಾಗ ಅಲ್ಲಿಗೆ ಬಂದ ಅಪರಾಧಿಗಳು ಆಕೆಯನ್ನು ಮಾತನಾಡಿಸುತ್ತ ಟಿಕೆಟ್ ಮಾಡಿಸಿಕೊಡುವುದಾಗಿ ಹೇಳಿದ್ದರು. ಅನಂತರ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವಂತೆ ನಟಿಸಿ ಬಳಿಕ “ಇಲ್ಲಿ ಟಿಕೆಟ್ ಸಿಗುವುದಿಲ್ಲ. ಕಾರವಾರದಲ್ಲಿ ಟಿಕೆಟ್ ತೆಗೆಸಿಕೊಡುತ್ತೇವೆ. ಅಲ್ಲಿಗೆ ಹೋಗೋಣ” ಎಂದು ನಂಬಿಸಿ ಆಕೆಯನ್ನು ರೈಲಿನಲ್ಲಿ ಕಾರವಾರಕ್ಕೆ ಕರೆದೊಯ್ದಿದ್ದರು. ಅಂಕೋಲಾದಲ್ಲಿ ಅಪರಾಧಿ ಪ್ರವೀಣ್ ಜಯಪಾಲ್ ನಾಯ್ಕನ ಮನೆಗೆ ಕರೆದೊಯ್ದು ಇಬ್ಬರು ಕೂಡ ಅತ್ಯಾಚಾರ ನಡೆಸಿದ್ದರು. ಎ.13ರಂದು ಕಾರವಾರದ ಲಾಡ್ಜ್ಗೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರವೆಸಗಿದ್ದರು. ಎ.14ರಂದು ಮಂಗಳೂರು ರೈಲು ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದರು. ಬಾಲಕಿಯನ್ನು ಗಮನಿಸಿದ ರೈಲ್ವೆ ಪೊಲೀಸರಿಗೆ ಸಂಶಯ ಬಂದು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಳು. ಅಪರಾಧಿಗಳನ್ನು ಬಂಧಿಸುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದರು. ರೈಲ್ವೇ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್‌ಸಿ-2 ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಜೂ.12ರಂದು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
Related Articles
Advertisement
ನೊಂದ ಬಾಲಕಿಗೆ 5 ಲ.ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಆದೇಶ ನೀಡಿದರು. ಆ ಹಣದಲ್ಲಿ 1 ಲ.ರೂ.ಗಳನ್ನು ಕೂಡಲೇ ಆಕೆಯ ವಿದ್ಯಾಭ್ಯಾಸಕ್ಕೆ ಒದಗಿಸಬೇಕು. ಉಳಿದ ಮೊತ್ತವನ್ನು ಠೇವಣಿಯಾಗಿ ಇಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದಾರೆ.