Advertisement

ಭಟ್ಟರ ಶಿಷ್ಯನ ಥ್ರಿಲ್ಲರ್ ಗಿರ್ಕಿ !

10:27 AM Aug 31, 2019 | mahesh |

‘ನಾವಿಬ್ಬರು ಮುಂದಿನ ತಿಂಗಳು ಮದುವೆ ಆಗುತ್ತಿದ್ದೇವೆ. ನಮಗೊಂದು ಹುಡುಗಿ ಹುಡುಕಿ ಕೊಡಿ…’

Advertisement

– ವಸಂತಪುರದ ಪುರಾತನ ವಸಂತ ವಲ್ಲಭರಾಯ ದೇವರ ಮುಂದೆ ನಿಂತು ಆ ಇಬ್ಬರು ಈ ಡೈಲಾಗ್‌ ಹೇಳುತ್ತಿದ್ದಂತೆಯೇ, ಅಲ್ಲಿ ಸೇರಿದ್ದವರೆಲ್ಲರೂ ಚಪ್ಪಾಳೆ ತಟ್ಟಿದರು. ಅಲ್ಲಿಗೆ ಆ ಸೀನ್‌ ಕಟ್ ಆಯ್ತು. ಹೌದು, ಇದು ಹೊಸ ಚಿತ್ರದ ಮುಹೂರ್ತ ವೇಳೆ ಚಿತ್ರೀಕರಣಗೊಂಡ ದೃಶ್ಯ. ಈ ದೃಶ್ಯಕ್ಕೆ ನಿರ್ದೇಶಕ ಯೋಗರಾಜ್‌ಭಟ್ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದು ವಿಶೇಷ.

ಅಷ್ಟಕ್ಕೂ ಯೋಗರಾಜ್‌ ಭಟ್ ಕ್ಲಾಪ್‌ ಮಾಡಿದ ಚಿತ್ರ ಯಾವುದು ಎಂಬ ಪ್ರಶ್ನೆ ತಲೆಯಲ್ಲಿ ‘ಗಿರ್ಕಿ’ ಹೊಡೆಯುವುದು ಸಹಜ. ಅಂದಹಾಗೆ, ಆ ಚಿತ್ರದ ಹೆಸರೇ ‘ಗಿರ್ಕಿ’. ಯೋಗರಾಜ್‌ ಭಟ್ ಶಿಷ್ಯ ವೀರೇಶ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ತಮ್ಮ ಮೊದಲ ಚಿತ್ರದ ಕುರಿತು ಹೇಳಿಕೊಳ್ಳಲೆಂದೇ ಚಿತ್ರತಂಡದ ಜೊತೆ ಆಗಮಿಸಿದ್ದರು ನಿರ್ದೇಶಕ ವೀರೇಶ್‌.

ಸಿನಿಮಾ ಕುರಿತು ಮೊದಲು ಮಾತಿಗಿಳಿದ ನಿರ್ದೇಶಕ ವೀರೇಶ್‌, ‘ಇದೊಂದು ಕಾಮಿಡಿ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೊಂದಿರುವ ಚಿತ್ರ. ಇಡೀ ಕಥೆ ಸಸ್ಪೆನ್ಸ್‌, ಕಾಮಿಡಿಯಲ್ಲೇ ಸುತ್ತುವುದರಿಂದ ಚಿತ್ರಕ್ಕೆ ‘ಗಿರ್ಕಿ’ ಶೀರ್ಷಿಕೆ ಸೂಕ್ತ ಎಂದು ಇಡಲಾಗಿದೆ. ಚಿತ್ರದಲ್ಲಿ ಬರೀ, ಕಾಮಿಡಿ, ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳಿಲ್ಲ. ಅದರಾಚೆಗೂ ಹೊಸದೊಂದು ವಿಷಯವಿದೆ. ಅದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು. ಇನ್ನು, ಚಿತ್ರದಲ್ಲಿ ‘ತರಂಗ’ ವಿಶ್ವ ಹಾಗು ಲೋಕ್‌ರಾಜ್‌ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕರಿಗೆ ಇಬ್ಬರು ನಾಯಕಿಯರು ಇರಲಿದ್ದು, ಅವರ ಹುಡುಕಾಟ ನಡೆಯುತ್ತಿದೆ. ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ’ ಎಂದು ವಿವರ ಕೊಟ್ಟರು ನಿರ್ದೇಶಕ ವೀರೇಶ್‌.

‘ಗಿರ್ಕಿ’ ಮೂಲಕ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ‘ತರಂಗ’ ವಿಶ್ವ ಅವರಿಗೆ ಈ ಚಿತ್ರದ ಪಾತ್ರ ವಿಶೇಷವಾಗಿದೆಯಂತೆ. ಅವರೇ ಹೇಳುವಂತೆ, ‘ಇಲ್ಲಿ, ಪೊಲೀಸ್‌ ಪಾತ್ರ ನಿರ್ವಹಿಸುತ್ತಿದ್ದು, ವಜ್ರಮುನಿ ಹೆಸರಿನಲ್ಲಿ ಹಾಸ್ಯ ಚಟಾಕಿ ಹಾರಿಸಲಿದ್ದಾರಂತೆ.

Advertisement

ಇನ್ನು, ವಿಲೋಕ್‌ರಾಜ್‌ ಅವರಿಲ್ಲಿ ಬಾರ್‌ ಸಪ್ಲೈಯರ್‌ ಪಾತ್ರ ಮಾಡುತ್ತಿದ್ದಾರಂತೆ. ಹೊಸಬಗೆಯ ಕಥೆ, ಎಲ್ಲರಿಗೂ ಇಷ್ಟವಾಗಲಿದೆ ಎಂಬುದು ಅವರ ಮಾತು. ಇನ್ನು, ಚಿತ್ರಕ್ಕೆ ವೀರ್‌ಸಮರ್ಥ್ ಸಂಗೀತ ನೀಡುತ್ತಿದ್ದು, ‘ಮೂರು ಹಾಡುಗಳು ಚಿತ್ರದಲ್ಲಿವೆ. ಕಥೆಗೆ ಪೂರಕವಾದ ಹಾಡುಗಳನ್ನು ಕಟ್ಟಿಕೊಡಲಾಗುತ್ತಿದೆ. ನನಗೆ ಸಿಕ್ಕ ಹೊಸ ಬಗೆಯ ಕಥೆ ಇದು. ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗೆ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಜಾಗ ಇರುತ್ತೆ. ಇಲ್ಲೂ ಸಾಕಷ್ಟು ಕೆಲಸ ಮಾಡಲು ಜಾಗ ಸಿಕ್ಕಿದೆ. ಇನ್ನು, ಯೋಗರಾಜ್‌ಭಟ್, ಜಯಂತ್‌ ಕಾಯ್ಕಿಣಿ ಅವರ ಸಾಹಿತ್ಯವಿದೆ’ ಎಂದರು ವೀರ್‌ ಸಮರ್ಥ್.

ಚಿತ್ರದಲ್ಲಿ ರಂಗಾಯಣ ರಘು, ದತ್ತಣ್ಣ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ವಿನೋದ್‌ ಮತ್ತು ಮಾಸ್‌ ಮಾದ ಅವರ ಸಾಹಸವಿದೆ. ನವೀನ್‌ ಛಾಯಾಗ್ರಹಣವಿದೆ. ಮಧು ತುಂಬಿಕೆರೆ ಅವರ ಸಂಕಲನವಿದೆ. ತರಂಗವಿಶ್ವ ಹಾಗು ಗೆಳೆಯರ ಎದಿತ್‌ ಫಿಲ್ಮ್ ಫ್ಯಾಕ್ಟರಿ ನಿರ್ಮಾಣವಿದೆ. ವಾಸುಕಿ ಮೂವೀ ಪ್ರೊಡಕ್ಷನ್ಸ್‌ ನ ಭುವನ್‌ಚಂದ್ರ ಸಹ ನಿರ್ಮಾಪಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next