Advertisement

ಕಾಸರವಳ್ಳಿ ಟಾಕೀಸು

10:22 AM Dec 08, 2019 | mahesh |

ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, “ಘಟಶ್ರಾದ್ಧ’ ಚಿತ್ರಕ್ಕೆ ಸ್ವರ್ಣ ಕಮಲ ತಂದುಕೊಟ್ಟ ಇವರ ಸಿನಿಮಾಯಾನ, ಧ್ಯಾನ ಈಗ ಜಯಂತ ಕಾಯ್ಕಿಣಿಯವರ ಕತೆಯನ್ನು ಚಿತ್ರವಾಗಿಸುವ ತನಕವೂ ಬಂದಿದೆ. ಗಿರೀಶರಿಗೆ ಡಿ.3ಕ್ಕೆ 70 ತುಂಬಿತು. ಈ ನೆಪದಲ್ಲಿ ಅವರ ವ್ಯಕ್ತಿತ್ವದ ಸಮೀಪ ನೋಟ…

Advertisement

ನಾನಿನ್ನೂ ಚಲನಚಿತ್ರ ಅಭ್ಯಾಸದಲ್ಲಿ ಆಗಷ್ಟೇ ಕಣ್ಣುಬಿಡುತ್ತಿದ್ದೆ. ಕಾಸರವಳ್ಳಿಯವರ ಚಿತ್ರದಲ್ಲಿನ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹಂಬಲ. “ದ್ವೀಪ’ ಚಿತ್ರದಲ್ಲಿ, ನಾಗಿ ಹಾಗೂ ಗಣಪನ ಮಧ್ಯದಲ್ಲಿ ಕೃಷ್ಣ ಎನ್ನುವ ಪಾತ್ರ ಬರುತ್ತದೆ. ಈ ಪಾತ್ರದಿಂದಾಗಿ ಗಂಡ- ಹೆಂಡತಿಯರು ಒಂದು ದ್ವೀಪವಾಗುವ ಸುಂದರ ಕಲ್ಪನೆಯಿದೆ. ಇಲ್ಲಿ ಒಂದು ದೃಶ್ಯ ಬರುತ್ತದೆ, ಗಣಪ ಸಿಟ್ಟಿನಲ್ಲಿ ಕುಳಿತಿರುತ್ತಾನೆ. ಅಲ್ಲಿಗೆ ಬರುವ ನಾಗಿಯ ತಂದೆ, ಗಂಡ ಹೆಂಡಿರ ಮಧ್ಯ ಏನಾಯಿತು ಎಂದು ಕೇಳುತ್ತಾನೆ. ಅದಕ್ಕೆ ಗಣಪ, “ಕೃಷ್ಣನನ್ನು ಕೇಳಿ…’ ಎನ್ನುತ್ತಾನೆ. ಆ ಸಂದರ್ಭದಲ್ಲಿಯೇ, ಕೃಷ್ಣನ ಅನುಗ್ರಹ ಸ್ವೀಕರಿಸುತ್ತಿರುವ ಹೆಂಗಸೊಬ್ಬಳ ಚಿತ್ರವನ್ನು ಹಿಂದಿರುವ ಗೋಡೆಯಲ್ಲಿ ನೇತುಹಾಕಲಾಗಿತ್ತು. ಇದನ್ನು ನೋಡಿ, ನಾಗಿ, ಕೃಷ್ಣನ ಅಧೀನಕ್ಕೊಳಗಾದ ಪರಸ್ತ್ರೀಯಂತೆ ನನಗೆ ಕಾಣಿಸಿತ್ತು.

ನಾನು ಕಾಸರವಳ್ಳಿಯವರನ್ನು ಕೇಳಿದೆ, “ಇದು ನಿಮ್ಮ ಮಿಸ್‌-ಎನ್‌-ಸೆನ್‌ ಭಾಗವೇ?’ ಎಂದು. ಒಂದರೆಕ್ಷಣ ಯೋಚಿಸಿದ ಕಾಸರವಳ್ಳಿಯವರು, “ಇಲ್ಲ, ಅಲ್ಲಿ ಗೋಡೆ ಒಡೆದಿತ್ತು. ಮುಚ್ಚಲು ಕಲಾ ನಿರ್ದೇಶಕರಿಗೇ ಏನೋ ಕ್ಯಾಲೆಂಡರ್‌ ಹಾಕಲು ಹೇಳಿದ್ದೆ. ಅವರು ಹಾಕಿರಬೇಕು. ನನಗೆ ನೆನಪಿಲ್ಲ’ ಅಂದುಬಿಟ್ಟರು. ನನಗೆ ಸ್ವಲ್ಪ ಪೆಚ್ಚಾದರೂ, ಇಲ್ಲದಿರುವ ಅರ್ಥಗಳನ್ನು ಕಲ್ಪಿಸಿ ಹೇಳುವ, ಆರೋಪಿಸಿ ಹೇಳುವ ನಿರ್ದೇಶಕರು ಇರುವ ಈ ಸಮಯದಲ್ಲಿ, ಕಾಸರವಳ್ಳಿಯವರ ಸರಳತೆ, ನಿಜ, ನನ್ನನ್ನು ಪ್ರಭಾವಿಸಿತ್ತು.

ನಿರ್ದೇಶನವೆಂದರೆ ಅಬ್ಬರವಲ್ಲ…
ಕಾಸರವಳ್ಳಿಯವರು ನಿರ್ದೇಶನ ಮಾಡುವುದನ್ನು ನೋಡುವ ಕುತೂಹಲ ನನ್ನಲ್ಲಿತ್ತು. ಹೀಗಾಗಿ ಅವರ “ಗುಲಾಬಿ ಟಾಕೀಸ್‌’ ಚಿತ್ರೀಕರಣ ನೋಡಲು ಹೋಗಬಹುದೇನೋ ಎಂದು ಅವರ ಒಪ್ಪಿಗೆ ಪಡೆಯಲು ಮಂಗಳೂರಲ್ಲಿ ಅವರು ತಂಗಿದ್ದ ಹೋಟೆಲ್‌ಗೆ ಹೋದೆ. ಖ್ಯಾತಿ ಪಡೆದ ಈ ನಿರ್ದೇಶಕ, ಒಂದು ಸಣ್ಣ ಹೋಟೆಲ್ಲಿನ, ಸಣ್ಣ ಕೋಣೆಯಲ್ಲಿ ಕುಳಿತು ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಎರಡು ನಿಮಿಷ ಕೂರಿಸಿ, ಪ್ರೀತಿಯಿಂದ ಮಾತನಾಡಿ ಕಳಿಸಿದರು. ಚಿತ್ರೀಕರಣಕ್ಕೆ ಬರಲು ಹೇಳಿದರು. ಅಲ್ಲಿಗೆ ಹೋದರೆ, ಕುರ್ಚಿಯಲ್ಲಿ ಕುಳಿತು ಆ್ಯಕ್ಷನ್‌ – ಕಟ್‌ ಎಂದು ಅಬ್ಬರಿಸುವ ಯಾವುದೇ ಗಲಭೆಯಿಲ್ಲ. ಕಾಸರವಳ್ಳಿಯವರು, ಅತ್ತಿಂದಿತ್ತ ಓಡಾಡುತ್ತಾ, ರಾಮಚಂದ್ರರೊಂದಿಗೆ ಮೆಲುದನಿಯಲ್ಲಿ ಏನೋ ಮಾತಾಡುತ್ತಾ ಕೆಲಸ ಮಾಡುತ್ತಿದ್ದರು. ಚಿತ್ರೀಕರಣದ ರೋಚಕತೆಯ ಬಗ್ಗೆ ನನಗೆ ಆಗ ಸ್ವಲ್ಪ ನಿರಾಸೆಯೇ ಉಂಟಾದರೂ, ಜೀವನ ಪಾಠವಾಗಿ ಅದು ಬಹಳ ಮಹತ್ವದ ಪಾಠವಾಗಿತ್ತು.

ಒಂದು ಕಾಫಿ ವಿರಾಮ
ಕಳೆದವರ್ಷ, ಉತ್ತರಾಖಂಡ್‌ನ‌ಲ್ಲಿ ನಡೆದ ಸೋನಾಪಾನಿ ಚಿತ್ರೋತ್ಸವದಲ್ಲಿ, ಮೂರು ದಿನ, ಕಾಸರವಳ್ಳಿಯವರೊಂದಿಗೆ ಇರುವ ಅವಕಾಶ ಸಿಕ್ಕಿತ್ತು. ಅಲ್ಲಿನ ಚುಮುಚುಮು ಚಳಿಯಲ್ಲಿ, ಕಾಸರವಳ್ಳಿಯವರು ಕಾಫಿ ಹುಡುಕುತ್ತಿದ್ದರು. ಬೆಟ್ಟದ ಮೂಲೆಯಲ್ಲಿ ನಾವಿದ್ದ ಹೋಟೆಲ್‌ ಮಾತ್ರ ಅಲ್ಲಿ ಇದ್ದದ್ದು. ಹೀಗಾಗಿ, ಅಲ್ಲಿ ನಾವೇ ಕಾಫಿ ಮಾಡಿಕೊಳ್ಳಬೇಕಿತ್ತು. ಗುರು ಸೇವೆಗೆ ನನಗೆ ಇದೇ ಅವಕಾಶ ಎಂದು, ಅವರಿಗೆ ಕಾಫಿ ಮಾಡಿಕೊಡುವ ನೆಪದಲ್ಲಿ, ಅವರೊಂದಿಗೆ ಕುಳಿತು ಮಾತಾಡುತ್ತಿದ್ದೆ. ಅವರ ಸಿನಿಮಾ ಕುರಿತಾದ ನೋಟಗಳ ಜೊತೆಯಲ್ಲೇ, ಅವರ ವೃತ್ತಿ ಜೀವನದ ಕುರಿತಾಗಿ ಅವರು ಸಾಕಷ್ಟು ಮಾತನಾಡಿದರು. ವಿರಾಮದ ವೇಳೆಯಲ್ಲಿ, ಅವರ ಕೋಣೆಯಾಚೆ ಕುಳಿತು, ಬಲಪಂಥೀಯ ಚಿಂತನೆಯ ಯಾವುದೋ ಪುಸ್ತಕ ಓದುತ್ತಿದ್ದರು. ಬಲಪಂಥೀಯರು ಗಾಂಧಿಯನ್ನು ಹೇಗೆ ಕಂಡಿದ್ದಾರೆ ಎನ್ನುವ ಕುರಿತಾದ ಪುಸ್ತಕ ಅದು. ಗಾಂಧಿಯನ್ನು ಒಬ್ಬ ಮನುಷ್ಯನನ್ನಾಗಿ ಕಾಣುತ್ತಲೇ, ಅವರನ್ನು ಒಂದು ಸಿದ್ಧಾಂತದ ಪ್ರತಿಪಾದಕನಾಗಿಯೂ ಕಾಣುವುದು, ವ್ಯಕ್ತಿ ಹಾಗೂ ಸಿದ್ಧಾಂತದ ನಡುವಿನ ಕೊಡು- ಕೊಳ್ಳುವಿಕೆಯನ್ನು ಕಾಣುವುದು ಕಾಸರವಳ್ಳಿಯವರ ಗಾಂಧೀ ಧ್ಯಾನದ ಫ‌ಲಶ್ರುತಿಯಾಗಿ ನನಗೆ ಕಾಣಿಸುತ್ತದೆ. ಅವರು, ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಾದ ಸಂದರ್ಭಗಳಲ್ಲಿ ಸದಾ ಗಟ್ಟಿ ಧ್ವನಿಯಾದವರು. ಆದರೆ, ಅವರ ಧ್ವನಿ ಸದಾ, ಸಾತ್ವಿಕವಾದದ್ದಾಗಿತ್ತು. ಈ ಸಾತ್ವಿಕತೆಯಲ್ಲಿ ನಾನು ಕಾಸರವಳ್ಳಿಯವರು ಧ್ಯಾನಿಸುವ ಗಾಂಧಿಯನ್ನು ಕಂಡಿದ್ದೇನೆ.

Advertisement

ಕಾಸರವಳ್ಳಿಯವರ ಕೃತಿಗಳಲ್ಲಿ ಕಂಡದ್ದು, ಅವರಿಂದ ಕಲಿತದ್ದು ಸಾಕಷ್ಟಿದೆ. ಕಾಸರವಳ್ಳಿಯವರಿಗೆ 70 ವರ್ಷ ತುಂಬಿದೆ. ಅವರು ತಮ್ಮ ಹೊಸ ಸಿನೆಮಾವನ್ನು ಈಗಷ್ಟೇ ಮುಗಿಸಿದ್ದಾರೆ. ಅವರು ನನ್ನಂಥಾ ಎಷ್ಟೋ ಯುವಕರಿಗೆ ಆದರ್ಶವಾಗಿದ್ದಾರೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕನ್ನಡ ಸಿನಿಮಾಕ್ಕೆ, ಕನ್ನಡಕ್ಕೆ, ಕನ್ನಡಿಗರಿಗೆ ಹೆಮ್ಮೆ ತಂದಿತ್ತವರು ಇವರು. ಈ ಸಿನಿಮಾ ಗುರುವಿಗೆ, ಅವರ ಹುಟ್ಟಿದ ದಿನದ ಶುಭಾಶಯಗಳು.

– ಅಭಯಸಿಂಹ, ಚಿತ್ರ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next