ನಿರ್ದೇಶಕ ಬಿ.ಎಂ.ಗಿರಿರಾಜ್ “ಅಮರಾವತಿ’ ಚಿತ್ರದ ಬಳಿಕ ಒಂದು ನಾಟಕ ನಿರ್ದೇಶಿಸಿದ್ದರು. ಅದಾದ ಮೇಲೆ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಅವರೊಂದು ಹೊಸ ವೆಬ್‌ಸೀರಿಸ್‌ಗೆ ಕೈ ಹಾಕಿದ್ದಾರೆ. ಹೌದು, ಅವರ “ತುಂಡ್ ಹೈಕ್ಳ ಸಾವಾಸ’ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಹೊತ್ತಲ್ಲೇ, ಗಿರಿರಾಜ್ ಅವರೀಗ “ರಕ್ತ ಚಂದನ’ ಎಂಬ ವೆಬ್‌ಸೀರಿಸ್ ಶುರು ಮಾಡಿದ್ದಾರೆ.
ಅವರು ತಮ್ಮ ಗೆಳೆಯರೊಂದಿಗೆ ಸೇರಿ, “ನಿರ್ಗುಣ’ ಎಂಬ ಹೊಸದೊಂದು ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಆ ಸಂಸ್ಥೆಯಡಿ, ಈಗ “ರಕ್ತ ಚಂದನ’ ಎಂಬ ವೆಬ್‌ಸೀರಿಸ್ ಶುರುಮಾಡಿದ್ದಾರೆ. ಈ ಹಿಂದೆ “ನಿರ್ಗುಣ’ ಸಂಸ್ಥೆಯಡಿ ಗಿರಿರಾಜ್ ಅವರ ನಾಟಕವೂ ಪ್ರದರ್ಶನಗೊಂಡಿತ್ತು. ಈಗ ಅದೇ ಸಂಸ್ಥೆ ಮೂಲಕ ವೆಬ್‌ಸೀರಿಸ್‌ಗೂ ಮುಂದಾಗಿದ್ದಾರೆ. “ರಕ್ತ ಚಂದನ’ ಒಂದು ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ.
ಈಗ ಎಂಟು ಕಂತಿನ ಮೊದಲ ಸೀಸನ್ ಶುರು ಮಾಡಲು ತಯಾರಿ ನಡೆಸಿದ್ದಾರೆ ಗಿರಿರಾಜ್. ಈ ವೆಬ್‌ಸೀರಿಸ್‌ನಲ್ಲಿ ಕಾಣಸಿಗುವ “ರಕ್ತ ಚಂದನ’ದಲ್ಲಿ ಆದ್ವಿಕಾ ಎಂಬ ಹೊಸ ಪ್ರತಿಭೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಆದ್ವಿಕಾ ಕೂಡ ರಂಗಭೂಮಿ ಹಿನ್ನೆಲೆ ಇರುವ ಪ್ರತಿಭೆ. ಗಿರಿರಾಜ್ ಅವರ ಅನೇಕ ನಾಟಕಗಳಲ್ಲಿ ಆದ್ವಿಕಾ ನಟಿಸಿದ್ದಾಳೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮೇ ಕೊನೆಯ ವಾರದಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಈ “ರಕ್ತ ಚಂದನ’ ವೆಬ್‌ಸೀರಿಸ್‌ಗೆ ಪ್ರದೀಪ್ ರೆಡ್ಡಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಹಿಂದೆ ಪ್ರದೀಪ್ ರೆಡ್ಡಿ ಅವರು ರವಿಕುಮಾರ್ ಸಾನ ಅವರೊಂದಿಗೆ ಕೆಲಸ ಮಾಡಿದ್ದರು. ಇನ್ನು, ಅಭಿ ಮತ್ತು ಜೋಯೆಲ್ ಸಂಗೀತ ನೀಡುತ್ತಿದ್ದಾರೆ. ಈ ಸಂಗೀತ ನಿರ್ದೇಶಕರು ಈ ಹಿಂದೆ ಪ್ರಶಸ್ತಿ ಪಡೆದ “ಅಮರಾವತಿ’ ಚಿತ್ರಕ್ಕೂ ಸಂಗೀತ ನೀಡಿದ್ದರು.
ಗಿರಿರಾಜ್ ಅವರ ನಾಟಕಕ್ಕೂ ಇವರದೇ ಸಂಗೀತ ಇತ್ತು ಎಂಬುದು ವಿಶೇಷ. “ರಕ್ತ ಚಂದನ’ಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ ಗಿರಿರಾಜ್. ಚಿತ್ರಕ್ಕೆ ಕಿಟ್ಟು ಅವರ ಸಂಕಲನವಿದೆ. ಕುಮಾರಸ್ವಾಮಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕಾತ್ಯಾಯಿನಿ ವಸ್ತ್ರವಿನ್ಯಾಸವಿದೆ. ಭರತ್, ಸ್ವರೂಪ್ ಮತ್ತು ಶ್ಯಾಮ್ ಅವರ ಸಹನಿರ್ದೇಶನವಿದೆ.