Advertisement
ಇಂಗ್ಲಿಷ್‌ನಲ್ಲಿ “ಜಿರಾಫೆ ವೆಲ್’ಎಂದು ಕರೆಯಲ್ಪಡುವ ಈ ಜೀರುಂಡೆಗಳು, “ಟ್ರಾಕೆಲೋಫೋರಸ್ ಜಿರಾಫೆ’ ಎಂಬ ವೈಜ್ಞಾನಿಕ ಹೆಸರಿನಿಂದ ಗುರುತಿಸಲ್ಪಟ್ಟಿವೆ. ನೋಡಲು ಜಿರಾಫೆಯನ್ನು ಹೋಲುವುದರಿಂದ ಕೀಟತಜ್ಞರು “ಜಿರಾಫೆ ಜೀರುಂಡೆ’ ಎಂದೇ ಕರೆಯುವುದು ರೂಢಿ. ಆಫ್ರಿಕಾದ ಮಡಗಾಸ್ಕರ್ ನಡುಗಡ್ಡೆಯ ಉಷ್ಣಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಮಡಗಾಸ್ಕರ್ ಹೊರತುಪಡಿಸಿದರೆ ನ್ಯೂಜಿಲೆಂಡ್‌ನಲ್ಲಿ ಮಾತ್ರವೇ ಈ ಜಿರಾಫೆ ಜೀರುಂಡೆಗಳ ಸಂತತಿ ಕಂಡುಬರುತ್ತದೆ.
ಈ ಜೀರುಂಡೆಯ ಕತ್ತು ಜಿರಾಫೆಯಂತೆಯೇ ಅದರ ದೇಹದ ಮೂರು ಪಟ್ಟು ಉದ್ದ ಇರುತ್ತದೆ. ಕೇವಲ ಕತ್ತಷ್ಟೇ ಅಲ್ಲ, ಜೀರುಂಡೆ ನಡೆಯುವ ಶೈಲಿ, ಕತ್ತು ಬಾಗಿಸುವ, ಮೇಲಕ್ಕೆತ್ತಿ ನೋಡುವ ಭಂಗಿ ಎಲ್ಲವೂ ಜಿರಾಫೆಯ ಪಡಿಯಚ್ಚು ಎಂದರೂ ಸುಳ್ಳಲ್ಲ. ಈ ಕಾರಣದಿಂದಾಗಿಯೇ ಈ ಜೀರುಂಡೆಗೆ “ಜಿರಾಫೆ ಜೀರುಂಡೆ’ ಎಂಬ ಹೆಸರು ಬಂದಿರುವುದು. 2.5 ಸೆಂ.ಮೀ.ಗಳಿಗಿಂತಲೂ ಚಿಕ್ಕದಾಗಿರುವ ಇವುಗಳ ದೇಹವು ಕಪ್ಪು ಬಣ್ಣದ್ದಾಗಿದ್ದು, ರೆಕ್ಕೆಗಳು ಮಾತ್ರ ಕೆಂಪು ಬಣ್ಣದಲ್ಲಿರುತ್ತವೆ. ಕುತ್ತಿಗೆಯೇ ಆಯುಧ
ಜೀವ ವಿಕಾಸ ಸಿದ್ಧಾಂತದ ಪ್ರಕಾರ ಜಿರಾಫೆಯು, ಎತ್ತರದ ಗಿಡ-ಮರಗಳ ಎಲೆಗಳನ್ನು ತಿನ್ನಲು ಪ್ರಯತ್ನಿಸಿದ ಕಾರಣ ಅದರ ಕತ್ತು ಉದ್ದವಾಯ್ತು ಎಂದು ನಂಬಲಾಗಿದೆ. ಆದರೆ, ಜಿರಾಫೆ ಜೀರುಂಡೆಯ ಕತ್ತು ಉದ್ದವಾಗಲು ಕಾರಣವೇನೆಂದು ಸ್ಪಷ್ಟವಾಗಿ ತಿಳಿದಿಲ್ಲ. ಈ ಜೀರುಂಡೆಗಳು ಸಂಗಾತಿಯನ್ನು ಆಯ್ದುಕೊಳ್ಳುವ ಸಂದರ್ಭದಲ್ಲಿ ಗಂಡುಗಳೆರಡೂ ತಮ್ಮ ನೀಳ ಕತ್ತುಗಳನ್ನು ಬಳಸಿ ಗುದ್ದಾಡುತ್ತವೆ. ಆ ಸೆಣಸಾಟದಲ್ಲಿ ಜಯಿಸಿದ ಬಲಶಾಲಿಗೆ, ಹೆಣ್ಣುಜೀರುಂಡೆ ಒಲಿಯುತ್ತಾಳೆ. ವಿಶೇಷವೆಂದರೆ ಹೆಣ್ಣು ಜಿರಾಫೆ ಜೀರುಂಡೆಗಳ ಕತ್ತು ಗಂಡುಗಳಷ್ಟು ಉದ್ದ ಇರುವುದಿಲ್ಲ. ಗಂಡು ಜೀರುಂಡೆಗಳು ಸಂಗಾತಿಯ ಆಯ್ಕೆಯ ಸಂದರ್ಭದಲ್ಲಿ ಪರಸ್ಪರ ಕಾದಾಡುವುದನ್ನು ಹೊರತುಪಡಿಸಿದರೆ, ಅವು ಮತ್ತೆಲ್ಲೂ ಇತರೆ ಜೀವಿಗಳ ಮೇಲೆ ಆಕ್ರಮಣ ಮಾಡುವುದು ಕಂಡುಬರುವುದಿಲ್ಲ. ಸದಾಕಾಲ ಮರದಲ್ಲಿಯೇ ಹೆಚ್ಚು ಇರಲು ಬಯಸುವ ಇವು ಶಾಂತಿಪ್ರಿಯ ಜೀವಿಗಳು.
Related Articles
ಜಿರಾಫೆ ಜೀರುಂಡೆಗಳು ಮೊಟ್ಟೆ ಇಟ್ಟು, ಮರಿ ಮಾಡುವ ಪ್ರಕ್ರಿಯೆಯೂ ಕುತೂಹಲಕಾರಿ. ಮರದ ಎಲೆಯನ್ನು ಕುತ್ತಿಗೆಯ ಸಹಾಯದಿಂದ ಬೀಡಿಯ ಸುರುಳಿಯಂತೆ ಸುತ್ತಿ, ಅದರೊಳಗೆ ಒಂದೇ ಒಂದು ಮೊಟ್ಟೆಯನ್ನಿಡುವ ತಾಯಿ, ಮೊಟ್ಟೆ ಇಟ್ಟ ನಂತರ ಆ ಸುರುಳಿ ಎಲೆಯನ್ನು ಮರದಿಂದ ಕೆಳಕ್ಕೆ ಬೀಳಿಸುತ್ತದೆ. ಮೊಟ್ಟೆಗೆ ಯಾವುದೇ ರೀತಿಯ ಅಪಾಯವಾಗಬಾರದು ಎಂದು ಸುರುಳಿಯೊಳಗೆ ಮೊಟ್ಟೆಗಳನ್ನಿಟ್ಟು ರಕ್ಷಿಸುವ ತಂತ್ರವನ್ನು ಪಾಲಿಸಲಾಗುತ್ತದೆ. ಮೊಟ್ಟೆಯೊಡೆದು ಹೊರಬರುವ ಮರಿಗಳ ಪಾಲನೆ ತಾಯಿ ಜೀರುಂಡೆಯದ್ದು. ಮರಿ ಬೆಳೆದು ದೊಡ್ಡದಾಗುವವರೆಗೂ, ಸುರುಳಿಯೊಳಕ್ಕೇ ಆಹಾರವನ್ನು ಒದಗಿಸುತ್ತದೆ.
Advertisement
ಪ.ನಾ.ಹಳ್ಳಿ.ಹರೀಶ್ ಕುಮಾರ್