ಪಿರಿಯಾಪಟ್ಟಣ: ಅದೃಷ್ಟದ ಬೆಳೆ ಎಂದು ಕರೆಯಲ್ಪಡುವ ಶುಂಠಿ ಬೆಳೆ, ಈ ಬಾರಿ ತಾಲೂಕಿನಾದ್ಯಂತ ಹಿಂದೆಂದಿಗಿತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು ರೈತರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.
ಬೆಳೆ ಹೆಚ್ಚಳದತ್ತ: ತಾಲೂಕಿನಲ್ಲಿ ಏಪ್ರಿಲ್ನಿಂದಲೇ ಉತ್ತಮ ಮಳೆ ಪ್ರಾರಂಭವಾಗಿದ್ದು, ರೈತರನ್ನು ಕೊಂಚ ಆತಂಕದಿಂದ ಪಾರು ಮಾಡಿದೆ. ಇನ್ನು ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ಜನವರಿಯಿಂದಲೇ ಬಿತ್ತನೆ ಕೆಲಸ ಆರಂಭಿಸಿ ಈಗ ಆ ಬೆಳೆ ಕಟಾವಿಗೆ ಬಂದಿದೆ. ಸದ್ಯದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ (60 ಕೆ.ಜಿ ಮೂಟೆಗೆ) ಶುಂಠಿಗೆ 5 ಸಾವಿರದಿಂದ 6 ಸಾವಿರದ (ಹಳೆಯ ಶುಂಠಿಗೆ 10ರಿಂದ 12 ಸಾವಿರ) ವರೆಗೂ ದಾಪು ಗಾಲಿಟ್ಟಿದೆ. ಕೆಲವೇ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಶುಂಠಿ ಸಂಬಾರು ಪದಾರ್ಥಗಳಿಗೆ ಮಾತ್ರ ಸೀಮೀತವಾಗದೆ, ಸುಗಂಧ ವರ್ಧಕ ದ್ರವ್ಯಗಳ ತಯಾರಿಕೆ, ಔಷಧಿ, ಮಾತ್ರೆಗಳ ತಯಾರಿಕೆ ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಸುತ್ತಿರು ವುದರಿಂದ ಬಹು ಬೇಡಿಕೆ ಬೆಳೆಯಾಗಿ ಮಾರ್ಪಟ್ಟಿದೆ. ಶುಂಠಿ ಉಪಯೋಗ ತಿಳಿದಿರುವ ಕೆಲವು ರೈತರು ತಮ್ಮ ಭೂಮಿಯಲ್ಲೇ ಇನ್ನು ಹೆಚ್ಚು ಕಾಲ ಶೇಖರಿಸಿಡಲು ಬಯಸಿದರೂ ರೋಗಭಾದೆ ಕಾರಣಕ್ಕೆ ಮಾರಾಟಕ್ಕೆ ಮುಂದಾಗುತ್ತಿದ್ದಾರೆ.
ಈ ಬಾರಿ ಅಧಿಕ ಲಾಭದ ನಿರೀಕ್ಷೆ: ಕಳೆದ 8 ವರ್ಷದಿಂದ ಶುಂಠಿ ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಈ ಬಾರಿ ಅದನ್ನು ಬಡ್ಡಿ ಸಮೇತ ವಸೂಲಿ ಮಾಡಲು ಉಸ್ತುಕನಾಗಿ ದ್ದಾನೆ. ಈಗಾಗಲೇ ಕಳೆದ ವರ್ಷದ ಹಳೆ ಶುಂಠಿಗೆ ಕ್ವಿಂಟಾಲ್ ಗೆ 10 ಸಾವಿರ ಹಾಗೂ ಈ ಬಾರಿಯ ಹೊಸ ಶುಂಠಿಗೆ 6 ಸಾವಿರ ನಿಗದಿಯಾಗಿದ್ದು, ಇದು ದಿನ ಕಳೆದಂತೆ ರೈತರಲ್ಲಿ ಇನ್ನು ಹೆಚ್ಚಿನ ಬೆಲೆ ಸಿಗುವ ವಿಶ್ವಾಸ ಮೂಡಿಸಿದೆ.
Advertisement
ಕಳೆದ ವರ್ಷ ಕೇರಳ, ನೆರೆಯ ಕೊಡಗು ಹಾಗೂ ರಾಜ್ಯದ ಗಡಿ ಭಾಗಗಳಲ್ಲಿ ಅತಿವೃಷ್ಟಿ ಯಿಂದಾಗಿ ರೈತರು ಬಿತ್ತಿದ ಶುಂಠಿ ಬೆಳೆ ಕೈಸೇರದೆ ರೈತರನ್ನು ಆತಂಕಕ್ಕೀಡು ಮಾಡಿತ್ತು. ಆದರೆ, ಈ ಬಾರಿ ಅವಧಿಗೂ ಮುಂಚೆ ಮುಂಗಾರು ಪ್ರಾರಂಭವಾಗಿ ತಾಲೂಕಿನಾ ದ್ಯಂತ ಈ ಬಾರಿ ಸುಮಾರು 1850 ಹೆಕ್ಟೇರ್‌ನಲ್ಲಿ ಶುಂಠಿ ಬಿತ್ತನೆ ಮಾಡಲಾಗಿದೆ.
Related Articles
Advertisement
ಶುಂಠಿಬೆಳೆಗೆ ದೇಶದ ರಾಜಧಾನಿ ದೆಹಲಿ ಸೇರಿ ಉತ್ತರಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಹಾಗೂ ದುಬೈ, ಇರಾನ್ ಮತ್ತು ಇರಾಕ್ ದೇಶಗಳಲ್ಲೂ ಅಪಾರ ಬೇಡಿಕೆಯಿದೆ. ಈ ಪ್ರದೇಶಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪೂರೈಕೆ ಮಾಡಲು ಶುಂಠಿ ಸಿಗುತ್ತಿಲ್ಲ.
ಶುಂಠಿ ಬೆಳೆಗೆ ಅಧಿಕ ರೋಗ ಭಾದೆ: ಶುಂಠಿಬೆಳೆಗೆ ಹೆಚ್ಚಿನ ಕೀಟನಾಶಕ ಹಾಗೂ ಕ್ರಿಮಿನಾಶಕಗಳ ಅಗತ್ಯವಿದೆ. ಈಗಾಗಲೇ ತಾಲೂಕಿನಾದ್ಯಂತ ಹಲವು ಭಾಗದಲ್ಲಿ ಶುಂಠಿ ರೋಗಭಾದೆಗೆ ಸಿಲುಕಿ ಕೊಳೆತುಹೋಗಿದೆ. ಆದರೂ ಶುಂಠಿ ಬೆಳೆ ಈ ಬಾರಿ ಅತ್ಯಧಿಕ ಉತ್ಪಾದನೆ ಮತ್ತು ಗುಣಮಟ್ಟದಿಂದ ಕೂಡಿದ್ದು, ರೈತರನ್ನು ಉತ್ಸುಕರನ್ನಾಗಿ ಮಾಡಿದ್ದು ಉತ್ತಮ ದರದ ನಿರೀಕ್ಷೆಯಲ್ಲಿದ್ದಾರೆ.
ಶುಂಠಿಗೆ ಹೆಚ್ಚು ಬೇಡಿಕೆ ಇರುವುದನ್ನು ತಿಳಿದ ಕೆಲ ವ್ಯಾಪಾರಸ್ಥರು, ಬೆಲೆ ಹೆಚ್ಚಾಗು ವುದಿಲ್ಲ, ಕೂಡಲೇ ಮಾರಾಟ ಮಾಡಿ ಎಂದು ರೈತರನ್ನು ವ್ಯವಸ್ಥಿತವಾಗಿ ನಂಬಿಸಿ ಶುಂಠಿ ಖರೀದಿ ನಡೆಯುತ್ತಿದೆ. ಆದರೂ, ರೈತರು ಶುಂಠಿಗೆ ಈ ವರ್ಷ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.
ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ..
ಶುಂಠಿ ಬೆಳೆಗೆ ಸರ್ಕಾರದ ಬೆಂಬಲ ಬೆಲೆಯಾಗಲಿ, ನಿಗದಿತ ಮಾರುಕಟ್ಟೆ ವ್ಯವಸ್ಥೆಯಾಗಲಿ ಇಲ್ಲ. ಆದರೂ ನೆರೆ ರಾಜ್ಯಗಳಾದ ಕೇರಳ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ಸ್ಥಳೀಯ ಮಾರಾಟಗಾರರು ಇಲ್ಲಿಗೆ ಬಂದು ತಾತ್ಕಾಲಿಕ ಮಳಿಗೆಗಳನ್ನು ತೆರೆದು ಶುಂಠಿ ಖರೀದಿ ಮಾಡಿ ನೆರೆ ರಾಜ್ಯಗಳಿಗೆ ಸರಬರಾಜು ಮಾಡುತ್ತಾರೆ. ಯಾರಾದರೊಬ್ಬ ರೈತ ಶುಂಠಿಯನ್ನು ಬೆಳೆದಿದ್ದಾನೆ ಎಂದು ತಿಳಿದ ಕೂಡಲೇ ಸ್ಥಳೀಯ ದಲ್ಲಾಳಿಗಳು ಅಥವಾ ಮಧ್ಯವರ್ತಿಗಳು ಬೆಳೆಗಾರರನ್ನು ಸಂಪರ್ಕಿಸಿ ವ್ಯಾಪಾರ ಮಾಡಿ ಬೇರೆಯವರಿಗೆ ಅಧಿಕ ಬೆಲೆಗೆ ಕಮಿಷನ್ ಆಧಾರದ ಮೇಲೆ ಮಾರಾಟ ಮಾಡುವುದು ಕಂಡುಬರುತ್ತಿದೆ.
● ಪಿ.ಎನ್.ದೇವೇಗೌಡ