ಕೊಪ್ಪಳ: ಈ ಬಾರಿ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮೂರು ಸಮಾಜಮುಖೀ ಕಾರ್ಯಕ್ಕೆ ಕೈ ಹಾಕಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ಜಾತ್ರೆಯ ಬೆನ್ನಲ್ಲೇ ತಾಲೂಕಿನ ಗಿಣಗೇರಿ ಕೆರೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮುಖಂಡರು, ಯುವ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಫೆ.15ರಂದು ಹೂಳೆತ್ತುವ ಕಾರ್ಯಕ್ಕೆ ಶ್ರೀಗಳು ಚಾಲನೆ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ಸರಳವಾಗಿ ಆಚರಿಸಿ ಸಮಾಜಮುಖೀ ಸೇವೆ ಮಾಡೋಣವೆಂಬ ಸಂಕಲ್ಪದೊಂದಿಗೆ ಮೂರು ಸಮಾಜಮುಖೀ ಕಾರ್ಯ ಕೈಗೊಳ್ಳುವ ಕುರಿತು ಈಗಾಗಲೇ ಘೋಷಿಸಿದ್ದಾರೆ. ಅದರ ಭಾಗವಾಗಿ ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯವೂ ಒಂದಾಗಿದೆ.
ಗಿಣಗೇರಿ ಕೆರೆ ಅಭಿವೃದ್ಧಿ ಮಾಡುವ ಮುನ್ನ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲು ಶ್ರೀಗಳು ಶುಕ್ರವಾರ ಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ, ಮುಖಂಡರ ಜೊತೆಗೆ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ಈ ಕೆರೆ ಅಭಿವೃದ್ಧಿ ಮಾಡೋಣ. ಕೆರೆ ಅಭಿವೃದ್ಧಿಯಿಂದ ಈ ಭಾಗದಲ್ಲಿ ಬತ್ತಿ ಹೋಗಿರುವ ಬೋರ್‌ವೆಲ್ ಗಳು ರಿಚಾರ್ಜ್ ಆಗಲಿವೆ. ಇದರಿಂದ ಮತ್ತೆ ರೈತರು ಸಸೇರಿ ಎಲ್ಲರ ಬದುಕು ಹಸನಾಗಲಿದೆ. ಸಾವಿರಾರು ಸಕುಟುಂಬಗಳು ನೆಮ್ಮದಿಯಿಂದ ಬದುಕಲಿವೆ ಎನ್ನುವ ಕುರಿತು ತಿಳಿದು ಬಂದಿದೆ.ಸ
ಫೆ.15ಕ್ಕೆ ಚಾಲನೆ ನೀಡುವ ಸಾಧ್ಯತೆ: ತಾಲೂಕಿನ ಗಿಣಗೇರಿ ಕೆರೆ 300 ಎಕರೆಗೂ ಹೆಚ್ಚು ವಿಸ್ತಾರ ಹೊಂದಿದೆ. ಅದನ್ನು ಗವಿಮಠ ಹಾಗೂ ಸ್ಥಳೀಯ ಕೈಗಾರಿಕೆಗಳ ನೆರವಿನೊಂದಿಗೆ ಫೆ.15ರಂದು ಕೆರೆ ಹೂಳೆತ್ತುವ ಕಾರ್ಯಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಗವಿಮಠ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಗಿಣಗೇರಿ ವ್ಯಾಪ್ತಿಯಲ್ಲಿನ ಜೆಸಿಬಿ,ಬುಲ್ಡೋಜರ್, ಟಿಪ್ಪರ್,ಟ್ರಾÂಕ್ಟರ್ ಸೇರಿ ಇತರೆ ವಾಹನ ಮಾಲೀಕರಿಗೂ ಸಿದ್ಧವಾಗಿರುವಂತೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೊತೆಗೆ ಕೆಲಸದಲ್ಲಿ ತೊಡಗುವ ಚಾಲಕರಿಗೆ ಊಟ, ಉಪಾಹಾರದ ವ್ಯವಸ್ಥೆಗೆ ಸ್ಥಳೀಯ ಯುವಕರ ಪಡೆ ಸಿದ್ಧವಾಗಿರುವಂತೆಯೂ ಸಾಂದರ್ಭಿಕ ಸೂಚನೆ ನೀಡಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಇದನ್ನೂ ಓದಿ :ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳ ದರ ಕುಸಿತ: ರೈತ ಕಂಗಾಲು
ಯಾವ ಹಳ್ಳಿಗಳಿಗೆ ಅನುಕೂಲ?: ಕುಟಗನಹಳ್ಳಿ, ಹನುಮನಹಳ್ಳಿ, ಬಸಾಪುರ, ಗಿಣಗೇರಿ, ಭೀಮನೂರು, ಗಬ್ಬೂರು, ಹಾಲಳ್ಳಿ, ಗುಡದಳ್ಳಿ, ಅಲ್ಲಾನಗರ, ಹಳೇ ಕನಕಾಪುರ, ಕನಕಾಪುರ ತಾಂಡಾ, ಹೊಸ ಕನಕಾಪುರ ತಾಂಡಾ ಸೇರಿದಂತೆ ಇನ್ನೂ ಹತ್ತಾರು ಹಳ್ಳಿಗಳ ವ್ಯಾಪ್ತಿಯಲ್ಲಿ ಬೋರ್‌ವೆಲ್ ಗಳ ಅಂತರ್ಜಲ ಹೆಚ್ಚಳವಾಗಿ ರೈತರ ಕೃಷಿ ಬದುಕಿಗೆ ಆಸರೆಯಾಗಲಿದೆ. ಸರ್ಕಾರ ಕೆರೆ ತುಂಬಿಸುವ ಯೋಜನೆಯಡಿ ಈ ಕೆರೆ ಆಯ್ಕೆ ಮಾಡಿಕೊಂಡಿದ್ದು ಕೆರೆಯಲ್ಲಿ ನೀರು ತುಂಬಿದರೆ ಪಕ್ಷಿಗಳ ಸಂಕುಲವೂ ಉಳಿಯಲಿದೆ. ಮಣ್ಣು ಅಕ್ರಮಕ್ಕೆ ಕಡಿವಾಣ: ಗಿಣಗೇರಿ ಕೆರೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಮರಂ ತುಂಬಿ ಬೇರೆ ಕಡೆ ಸಾಗಾಟದ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಈ ಹಿಂದೆಯೇ ಮರಂ ಅಕ್ರಮ ದಂಧೆ ಕುರಿತು ಮಾಧ್ಯಮದಲ್ಲಿ ವರದಿಗಳು ಬಂದಿದ್ದವು. ಪ್ರಸ್ತುತ ಗವಿಸಿದ್ದೇಶ್ವರ ಸ್ವಾಮೀಜಿ ಗಿಣಗೇರಿ ಕೆರೆ ಅಭಿವೃದ್ಧಿ, ಸಸ್ವತ್ಛತೆ, ಸಂವರ್ಧನೆಗೆ ಮುಂದಾಗಿದ್ದಾರೆ. ಹಾಗಾಗಿ ಮರಂ ಅಕ್ರಮ ಸಾಗಾಟಕ್ಕೂ ಕಡಿವಾಣ ಬಿದ್ದಂತಾಗಲಿದೆ. ಈ ಕುರಿತು ಶ್ರೀಗಳು ಜಿಲ್ಲಾಡಳಿತದ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.