Advertisement

ಜಿ.ಪಂ. ಗೆ ಸಿಗಲಿದೆ ಹೊಸ ಲ್ಯಾಂಡ್‌ ಮಾರ್ಕ್‌

10:16 AM Apr 03, 2019 | Team Udayavani |

ಉರ್ವಸ್ಟೋರ್‌ : ದ.ಕ. ಜಿಲ್ಲಾ ಪಂಚಾಯತ್‌ಗೆ ಜನರನ್ನು ಸ್ವಾಗತಿಸಲು ನೂತನ ಮತ್ತು ಆಕರ್ಷಕವಾದ ಪ್ರವೇಶ ದ್ವಾರ ನಿರ್ಮಾಣಗೊಳ್ಳುತ್ತಿದೆ. ಎಸಿಪಿ (ಅಲ್ಯೂಮಿನಿಯಂ ಕಾಂಪೋಸಿಟ್‌ ಪ್ಯಾನಲ್ಸ್‌) ಶೀಟ್‌ಗಳನ್ನು ಬಳಸಿಕೊಂಡು 3.5 ಲಕ್ಷ ರೂ. ವೆಚ್ಚದಲ್ಲಿ ದ್ವಾರ ಕಟ್ಟಲಾಗುತ್ತಿದ್ದು, ಶೀಘ್ರ ಕಾಮಗಾರಿ ಮುಕ್ತಾಯಗೊಳ್ಳಲಿದೆ.

Advertisement

ಉರ್ವಸ್ಟೋರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಎಂದರೆ ಇನ್ಫೋಸಿಸ್‌ ಕಟ್ಟಡದ ಪಕ್ಕದಲ್ಲಿ ಎಂದೇ ಈವರೆಗೆ ಹೇಳಲಾಗುತ್ತಿತ್ತು. ಏಕೆಂದರೆ, ಜಿ.ಪಂ.ಗೆ ಸರಿಯಾದ ದ್ವಾರವಿಲ್ಲದೆ, ಕೆಲವು ನಗರ ವಾಸಿಗಳು ಸಹಿತ ಅಪರಿಚಿತರಿಗೆ ಪಂಚಾಯತ್‌ ಎಲ್ಲಿದೆ ಎಂಬುದೇ ತಿಳಿಯುತ್ತಿರಲಿಲ್ಲ. ಮುಖ್ಯರಸ್ತೆಯ ಬಳಿ ಕಬ್ಬಿಣದ ರಾಡ್‌ಗಳಲ್ಲಿ ಕೆಂಪು ಬಣ್ಣದಲ್ಲಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಎಂದು ಬರೆಯಲಾಗಿದ್ದರೂ, ಇದು ಸರಿಯಾಗಿ ಕಾಣದಿರುವುದರಿಂದ ಜಿಲ್ಲಾ ಪಂಚಾಯತ್‌ ಎಲ್ಲಿದೆ ಎಂಬುದು ತಿಳಿಯುತ್ತಿರಲಿಲ್ಲ. ಈಗ ಹೊಸ ಪ್ರವೇಶ ದ್ವಾರವು ಆಕರ್ಷಣೀಯವಾಗಿರಲಿದ್ದು, ಜಿಲ್ಲಾ ಪಂಚಾಯತ್‌ಗೂ ಹೊಸ ಕಳೆ ಬರಲಿದೆ.

ಶೇ. 70ರಷ್ಟು ಕಾಮಗಾರಿ ಪೂರ್ಣ
ನೂತನ ಪ್ರವೇಶ ದ್ವಾರದ ಕಾಮಗಾರಿ ಶೇ. 70ರಷ್ಟು ಪೂರ್ಣಗೊಂಡಿದ್ದು, ಶೀಟ್‌ ಅಳವಡಿಕೆ, ಜಿ.ಪಂ. ಹೆಸರು ಬರೆಯುವ ಕೆಲಸ ಸಹಿತ ಕೆಲವೊಂದು ಅಂತಿಮ ಹಂತದ ಕೆಲಸಗಳು ಬಾಕಿ ಇವೆ. ಜಿಲ್ಲಾ ಪಂಚಾಯತ್‌ನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮೂಲಕ ಪ್ರವೇಶದ್ವಾರ ನಿರ್ಮಾಣಗೊಳ್ಳುತ್ತಿದೆ.

ಮಂಗಳವಾರವೇ (ಎ. 2) ದ್ವಾರವನ್ನು ಬಿಟ್ಟುಕೊಡಲು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಗಡುವು ವಿಧಿಸಲಾಗಿತ್ತಾದರೂ, ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಇದು ಸಾಧ್ಯವಾಗಿಲ್ಲ.

ನೂತನ ದ್ವಾರ
ಮುಂದಿನ ಕೆಲವೇ ದಿನಗಳಲ್ಲಿ ಕಾಮಗಾರಿ ಸಂಪೂರ್ಣ ಮುಗಿದು ಜಿಲ್ಲಾ ಪಂಚಾಯತ್‌ಗೆ ನೂತನ ದ್ವಾರವನ್ನು ಹಸ್ತಾಂತರಿಸಲಾಗು ವುದು ಎಂದು ವಿಭಾಗ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

Advertisement

15 ಅಡಿ ಎತ್ತರ; 47 ಅಡಿ ಅಗಲ
ನೂತನ ಪ್ರವೇಶದ್ವಾರವು 15 ಅಡಿ ಎತ್ತರ, 47 ಅಡಿ ಉದ್ದವನ್ನು ಹೊಂದಿದೆ. ವಿಶೇಷವೆಂದರೆ, ಕಟ್ಟಡಗಳಲ್ಲಿ ಬಳಸುವಂತೆ ಎಸಿಪಿ ಶೀಟ್‌ಗಳನ್ನು ಇದಕ್ಕೆ ಅಳವಡಿಸಲಾಗಿದ್ದು, ಈ ಶೀಟ್‌ಗಳು ಪುನರ್ಬಳಕೆಯ ಸಾಮರ್ಥ್ಯವನ್ನು ಹೊಂದಿವೆ. ರಸ್ತೆ ಅಗಲೀಕರಣದಂತಹ ಸಂದರ್ಭಗಳಲ್ಲಿ ದ್ವಾರವನ್ನು ತೆಗೆಯಬೇಕಾದ ಸಂದರ್ಭ ಒದಗಿದರೆ, ಮಾಹಿತಿ ಈ ಶೀಟ್‌ಗಳನ್ನು ತೆಗೆದು
ಪುನರ್ಬಳಕೆ ಮಾಡಬಹುದು ಎಂದು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ಪ್ರವೇಶದ್ವಾರವಿಲ್ಲದ 19 ವರ್ಷ
ಹಂಪನಕಟ್ಟೆಯ ತಾ. ಪಂ.ಕಟ್ಟಡದಲ್ಲಿ 1987ರಲ್ಲಿ ಜಿ.ಪಂ. ಮೊದಲು ಕಾರ್ಯಾರಂಭ ಮಾಡಿತ್ತು. 2000ನೇ ಇಸವಿಯಲ್ಲಿ ಉರ್ವಸ್ಟೋರ್‌ನಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಇಲ್ಲಿಯವರೆಗೆ ಜಿ.ಪಂ.ಗೆ ಇದ್ದ ಲ್ಯಾಂಡ್‌ ಮಾರ್ಕ್‌ ಎಂದರೆ ಇನ್ಫೋಸಿಸ್‌ ಕಟ್ಟಡದ ಬಳಿ ಎಂದೇ ಆಗಿತ್ತು. ಜಿ.ಪಂ.ಇಲ್ಲಿದೆ ಎಂದು ತೋರಿಸುವ ಕೆಂಪು ಬಣ್ಣದ ಕಬ್ಬಿಣದ ದ್ವಾರ ಇದ್ದರೂ ಇಲ್ಲದಂತಿತ್ತು ಎಂಬುದನ್ನು ಜಿ.ಪಂ.ನ ಸಿಬಂದಿಯೇ ಹೇಳುತ್ತಾರೆ. ಈಗ ನೂತನ ದ್ವಾರ ನಿರ್ಮಾಣದಿಂದ ಜಿ.ಪಂ.ನ ಅಸ್ತಿತ್ವಕ್ಕೆ ಹೆಚ್ಚಿನ ಮಹತ್ವ ಬರಲಿದೆ.

15 ದಿನದಲ್ಲಿ ಕೆಲಸ ಮುಕ್ತಾಯ
ನೂತನ ಪ್ರವೇಶ ದ್ವಾರದಿಂದಾಗಿ ಜಿ.ಪಂ.ನ್ನು ಹೊಸಬರಿಗೆ ಗುರುತಿಸಲು ಸುಲಭವಾಗಲಿದೆ. ಮುಂದಿನ 15 ದಿನಗಳೊಳಗೆ ದ್ವಾರ ನಿರ್ಮಾಣ ಕಾಮಗಾರಿ ಮುಕ್ತಾಯಗೊಳ್ಳಲಿದೆ.
– ಎ. ಎಸ್‌. ರಾವ್‌,
ಸಹಾಯಕ ಕಾರ್ಯಕಾರಿ ಅಭಿಯಂತರ,
ಪಂಚಾಯತ್‌ ರಾಜ್‌,ಎಂಜಿನಿಯರಿಂಗ್‌
ವಿಭಾಗ, ಜಿ.ಪಂ.,ದ.ಕ

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next