ವಿಶಾಖಪಟ್ಟಣ: ಇಲ್ಲಿನ ವೈ.ಎಸ್ ರಾಜಶೇಖರ್ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಆಟಗಾರ ಶುಭ್ಮನ್ ಗಿಲ್ ಅವರು ಭರ್ಜರಿ ಶತಕ ಸಿಡಿಸಿ ಮಿಂಚಿದರು. ಫಾರ್ಮ್ ಸಮಸ್ಯೆ ಅನುಭವಿಸುತ್ತಿದ್ದ ಗಿಲ್ ಇಂದು ಶತಕ ಬಾರಿಸಿದರು.
ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ ಅವರು 147 ಎಸೆತಗಳಲ್ಲಿ 104 ರನ್ ಬಾರಿಸಿದರು. ಈ ಇನ್ನಿಂಗ್ಸ್ ನಲ್ಲಿ ಎರಡು ಸಿಕ್ಸರ್ ಮತ್ತು 11 ಬೌಂಡರಿ ಬಾರಿಸಿದರು.
ಫಾರ್ಮ್ ನಲ್ಲಿರದ ಗಿಲ್ ಸ್ಥಾನದ ಬಗ್ಗೆ ಹಲವರಿಂದ ಅಪಸ್ವರ ಕೇಳಿಬಂದಿತ್ತು. ಚೇತೇಶ್ವರ ಪೂಜಾರ ಅವರಂತವರು ತಮ್ಮ ಅವಕಾಶಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಆಡಬೇಕು ಎಂದು ರವಿ ಶಾಸ್ತ್ರಿ ಹೇಳಿದ್ದರು. ಇದಕ್ಕೆಲ್ಲಾ ಗಿಲ್ ಇಂದು ಉತ್ತರ ನೀಡಿದ್ದಾರೆ.
ವಿಶಾಖಪಟ್ಟಣಂನಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಶುಭ್ಮನ್ ಗಿಲ್ ಅವರ ಶತಕವು 2017 ರ ಬಳಿಕ ಭಾರತ ತಂಡದ ಪರವಾಗಿ ತವರಿ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟರ್ ಹೊಡೆದ ಮೊದಲ ಶತಕವಾಗಿದೆ. 2017ರ ನವೆಂಬರ್ ನಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಮೂರನೇ ಕ್ರಮಾಂಕದಲ್ಲಿ ಭಾರತಕ್ಕಾಗಿ ಕೊನೆಯ ಶತಕ ಗಳಿಸಿದ್ದರು.