ಕೆಲವು ಸಿನಿಮಾಗಳು ತಮ್ಮ ವಿಭಿನ್ನ ಕಥಾಹಂದರ ದಿಂದ ಗಮನ ಸೆಳೆಯುತ್ತವೆ. ನೋಡ ನೋಡುತ್ತಲೇ ಮನಸ್ಸಿನಾಳಕ್ಕೆ ಇಳಿದು ಬಿಡುತ್ತವೆ. ಆ ತರಹದ ಒಂದು ಸಿನಿಮಾ “ಗಿಲ್ಕಿ’.
ಒಂದು ಹೊಸ ಬಗೆಯ ಲವ್‌ಸ್ಟೋರಿಯನ್ನು ಈ ಸಿನಿಮಾದಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಈ ಲವ್‌ಸ್ಟೋರಿ ನೋಡುತ್ತಿದ್ದಂತೆ ಕಣ್ಣಂಚಲ್ಲಿ ನೀರು ಬರುತ್ತದೆ. ಆ ಮಟ್ಟಿಗೆ ಚಿತ್ರದ ಕಥೆ ವಿಭಿನ್ನತೆಯನ್ನು ಕಾಯ್ದುಕೊಂಡಿದೆ.
ಇದನ್ನು ನೀವು “ವಿಶೇಷ ಪ್ರೇಮಿಗಳಿಬ್ಬರ ಕಥೆ’ ಎಂದಾದರೂ ಕರೆಯಬಹುದು. ಈಇಬ್ಬರು ವಿಶೇಷ ಪ್ರೇಮಿಗಳ ನಡುವೆ ಪ್ರೀತಿಯಾಗುವುದೇ ಅಚ್ಚರಿಯ ಸಂಗತಿ.
ಇದರಾಚೆ ಸಿನಿಮಾದುದ್ದಕ್ಕೂ ಸಾಗಿ ಬರುವ ವೇದಾಂತಿ ಪಾತ್ರವೊಂದು ತನ್ನ ಸಂಭಾಷಣೆ ಮೂಲಕ ಗಮನ ಸೆಳೆಯುತ್ತದೆ.ಸಿನಿಮಾದಲ್ಲಿ ಲವ್‌ಸ್ಟೋರಿ ಜೊತೆಗೆ ಜೀವನ ಪಾಠವನ್ನು ಹೇಳಲಾಗಿದೆ. ಮಧ್ಯಮ ವರ್ಗದ ಕುಟುಂಬದ ಕಷ್ಟ, ಪಾಪಿಗಳ ಸಂತೆ… ಹೀಗೆ ನಾನಾ ಅಂಶಗಳನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಈ ಚಿತ್ರದಲ್ಲಿ ಬರುವ ಸಂಭಾಷಣೆಗಳು ಸೂಕ್ಷ್ಮಸಂವೇದನೆಯಿಂದ ಕೂಡಿವೆ. “ಒಳ್ಳೆತನ ಅನ್ನೋದು ಒಣಗಿರೋ ಸೌದೆ ಥರ, ಅದು ನೆನಪಾಗೋದೇ ಹೆಣ ಸುಡುವಾಗ’, “ಬದುಕಿಗೆ ಬಾಯಾರಿದಾಗ ಭಾವನೆಹಳು ಬೀದಿಗಿಳಿಯುತ್ತವೆ…’ ಇಂತಹ ಡೈಲಾಗ್‌ಗಳು ಚಿತ್ರದ ತೂಕ ಹೆಚ್ಚಿಸಿವೆ ಮತ್ತು ಸಿನಿಮಾವನ್ನು ಹೆಚ್ಚು ಆಪ್ತವಾಗುವಂತೆ ಮಾಡಿವೆ.
ಚಿತ್ರದಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಹಾಗೂ ಚೈತ್ರಾ ಆಚಾರ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಉಳಿದಂತೆ ಅದಿಲ್ ಸಂಗೀತ, ಕಾರ್ತಿಕ್ ಛಾಯಾಗ್ರಹಣ ಚಿತ್ರದ ತೂಕ ಹೆಚ್ಚಿಸಿದೆ.
ಚಿತ್ರ: ಗಿಲ್ಕಿ
ರೇಟಿಂಗ್: ***
ನಿರ್ಮಾಣ: ನರಸಿಂಹ ಕುಲಕರ್ಣಿ
ನಿರ್ದೇಶನ: ವೈಕೆ
ತಾರಾಗಣ: ತಾರಕ್ ಪೊನ್ನಪ್ಪ,ಚೈತ್ರಾ ಆಚಾರ್ ಮತ್ತಿತರರು.