Advertisement

ಗಿಫ್ಟ್ ದೊಡ್ಡದಲ್ಲ, ಅದರ ಹಿಂದಿನ ಮನಸ್ಸು ದೊಡ್ಡದು

10:10 AM Oct 27, 2017 | |

ಕೆಲವು ಹೆಂಡತಿಯರು ಮೊದಲೇ ಡಿಮ್ಯಾಂಡ್‌ ಮಾಡಿ ಉದ್ದ ಪಟ್ಟಿಯನ್ನೇ ತನ್ನ ಗಂಡನ ಮುಂದಿಡುತ್ತಾರೆ. ಪಾಪ ಕೆಲವು ಗಂಡಂದಿರು ಏನನ್ನೂ ತಿರುಗಿ ಬಯಸದೆ, “ನೀನು ನಗುನಗುತ್ತಾ ಚೆನ್ನಾಗಿದ್ದರೆ ಸಾಕು, ಅದೇ ನನಗೆ ನೀನು ಕೊಡುವ ಅತಿ ದೊಡ್ಡ ಗಿಫ್ಟ್’ ಅಂತ ಹೆಂಡತಿ ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ. 

Advertisement

ಗಿಫ್ಟ್ ತೆಗೆದುಕೊಳ್ಳುವುದು ಅಂದರೆ ನಮಗೆಲ್ಲ ಬಹಳ ಖುಷಿ. ಹುಟ್ಟುಹಬ್ಬ, ಮದುವೆ, ಮುಂಜಿ, ಗೃಹಪ್ರವೇಶ ಹೀಗೆ ಬಹಳ ಸಂದರ್ಭಗಳಲ್ಲಿ ಆಪೆ¤ಷ್ಟರು ಗಿಫ್ಟ್ ಕೊಡುತ್ತಿರುತ್ತಾರೆ. ನಾವು ಕೂಡ ಹೀಗೆಯೇ ನಮ್ಮ ಆಪ್ತರಿಗೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ಕೊಡುತ್ತೇವೆ. ಕೊಟ್ಟು-ತೆಗೆದುಕೊಳ್ಳುವ ಈ ಬಂಧ ಒಂದು ವಿಶ್ವಾಸಾರ್ಹ ಕ್ರಮ. ಉಡುಗೊರೆಗಳು ಬಾಂಧವ್ಯವನ್ನು ಹೆಚ್ಚಿಸುತ್ತವೆ. ಸರ್‌ಪ್ರೈಸ್‌ ಆಗಿ ಹೆಂಡತಿಗೆ ಗಂಡ ಒಂದು ದಿನ ಏನಾದರೂ ಗಿಫ್ಟ್ ತಂದುಕೊಟ್ಟರೆ ಅದರ ಮಧುರ ನೆನಪು ಆಕೆಯ ಮನದಲ್ಲಿ ಯಾವಾಗಲೂ ಉಳಿದಿರುತ್ತದೆ. ಮಕ್ಕಳಂತೂ ಗಿಫ್ಟ್ಗಳಿಂದ ಉಬ್ಬಿ ಹೋಗುತ್ತಾರೆ. 

ಆದರೆ, ನಮಗೆ ಸಿಕ್ಕ ಅತಿದೊಡ್ಡ ಉಡುಗೊರೆಯೆಂದರೆ ಈ ಮನುಷ್ಯ ಜನ್ಮ. ದೇವರು ಹಾಗೂ ನಮ್ಮ ತಾಯಿ ಕೊಟ್ಟ ಗಿಫ್ಟ್ ಅದು. ಇದಕ್ಕಿಂತ ದೊಡ್ಡ ಉಡುಗೊರೆಯನ್ನು ಯಾರೂ ಕೊಡಲಾರರು. ದೇವರು ಮನಸ್ಸು ಮಾಡಿದ್ದರೆ ಈ ಜೀವವನ್ನು ಬೇರೆ ಯಾರಿಗೋ ಕೊಡಬಹುದಿತ್ತು. ಆದರೂ ನಮಗೆ ಕೊಟ್ಟಿದ್ದಾನೆ ಅಂದರೆ ಇದೊಂದು ಅಮೂಲ್ಯ ಉಡುಗೊರೆಯೇ ಸರಿ. ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳಿಗೆಲ್ಲ ಜೀವ ಕೊಟ್ಟಿದ್ದರೂ ಅವುಗಳನ್ನು ಮೀರಿ ದೇವರು ನಮಗೆ ಸುಂದರವಾದ ಮನುಷ್ಯ ಜನ್ಮ ನೀಡಿದ್ದಾರೆ. ನಮಗೆ ಜಗತ್ತಿನ ಎಲ್ಲ ಸುಖಗಳನ್ನು ಅನುಭವಿಸುವ ಸೌಭಾಗ್ಯವಿದೆ. ಬೇಕಾದ್ದನ್ನೆಲ್ಲ ಸಾಧಿಸಿ ಪಡೆದುಕೊಳ್ಳುವ ಶಕ್ತಿಯಿದೆ. ಸಾಧನೆಯನ್ನೇ ಸಂಭ್ರಮಿಸಿ ಜೀವನ ಸಾರ್ಥಕಪಡಿಸಿಕೊಳ್ಳುವ ಅವಕಾಶವಿದೆ. ಅದರ ಜತೆಗೆ, ಬೇರೆಲ್ಲ ಪ್ರಾಣಿಗಳಿಗಿಂತ (ಆಮೆ ಮುಂತಾದ ಕೆಲವೇ ಪ್ರಾಣಿ ಹೊರತುಪಡಿಸಿ) ನಮಗೆ ಹೆಚ್ಚು ಆಯಸ್ಸು ಕೊಟ್ಟಿದ್ದಾನೆ. ಯೋಚನಾ ಶಕ್ತಿ ನೀಡಿದ್ದಾನೆ. ವಿಶೇಷ ಜ್ಞಾನ ನೀಡಿದ್ದಾನೆ. ಸೌಂದರ್ಯವನ್ನು ಆರಾಧಿಸುವ ರಸಿಕತೆ ಕೊಟ್ಟಿದ್ದಾನೆ. ಇವೆಲ್ಲವೂ ಗಿಫ್ಟ್ಗಳೇ. ಆದರೆ, ಈ ಗಿಫ್ಟ್ಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿಲ್ಲ; ಇವುಗಳಿಗಿಂತ ಕಡಿಮೆ ಬೆಲೆಯುಳ್ಳ ಸಣ್ಣಪುಟ್ಟ ಗಿಫ್ಟ್ಗಳನ್ನೇ ದೊಡ್ಡದು ಎಂದುಕೊಂಡಿದ್ದೇವೆ. 

ದುಬಾರಿ ಗಿಫ್ಟ್ ನಿಜಕ್ಕೂ ದೊಡ್ಡದಾ?
ಪ್ರೇಯಸಿಗೆ ಬಾಯ್‌ಫ್ರೆಂಡ್‌ ಒಂದು ಹೂವಿನ ಬೊಕೆ ಕೊಟ್ಟರೆ ಆಕೆಗೆ ಬಹಳ ಖುಷಿಯಾಗುತ್ತದೆ. ಹೆಂಡತಿಗೆ ಬರ್ತ್‌ ಡೇಗೆ ಮೊಬೈಲ್‌ ಅಥವಾ ಚಿನ್ನದ ಆಭರಣ ಕೊಡಿಸಿದರೆ ಆಕೆ ಅರಳುತ್ತಾಳೆ. ಕೆಲವು ಹೆಂಡತಿಯರು ಮೊದಲೇ ಡಿಮ್ಯಾಂಡ್‌ ಮಾಡಿ ಉದ್ದ ಪಟ್ಟಿಯನ್ನೇ ತನ್ನ ಗಂಡನ ಮುಂದಿಡುತ್ತಾರೆ. ಪಾಪ ಕೆಲವು ಗಂಡಂದಿರು ಏನನ್ನೂ ತಿರುಗಿ ಬಯಸದೆ, “ನೀನು ನಗುನಗುತ್ತಾ ಚೆನ್ನಾಗಿದ್ದರೆ ಸಾಕು, ಅದೇ ನನಗೆ ನೀನು ಕೊಡುವ ಅತಿ ದೊಡ್ಡ ಗಿಫ್ಟ್’ ಅಂತ ಹೆಂಡತಿ ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ. ಹಬ್ಬಗಳಲ್ಲಿ ಮಕ್ಕಳಿಗೆ ತಂದೆ-ತಾಯಿ ಉಡುಗೊರೆ ಕೊಡದಿದ್ದರೆ ಮಕ್ಕಳು ಬೇಜಾರು ಮಾಡಿಕೊಳ್ಳುತ್ತಾರೆ. 

ಕೆಲವರು ತಮ್ಮ ಶ್ರೀಮಂತಿಕೆ ತೋರಿಸಿಕೊಳ್ಳಲು ದುಬಾರಿ ಗಿಫ್ಟ್ ಕೊಡುತ್ತಾರೆ. ದೇಶದ ನಂ.1 ಶ್ರೀಮಂತ ಮುಖೇಶ್‌ ಅಂಬಾನಿ ತನ್ನ ಹೆಂಡತಿಗೆ ಐಷಾರಾಮಿ ಹಡಗನ್ನು ಗಿಫ್ಟ್ ಕೊಟ್ಟಿದ್ದ! ದುಡ್ಡಿರುವವರು ತೋರಿಕೆಗೆ ಕೊಡುವ ಇಂತಹ ಕೃತಕ ಉಡುಗೊರೆಗಳು ಎಷ್ಟೇ ದುಬಾರಿಯಾಗಿದ್ದರೂ ವಾಸ್ತವದಲ್ಲಿ ಅವುಗಳ ಬೆಲೆ ಅಷ್ಟಕಷ್ಟೆ. ಉಡುಗೊರೆ ಮುಖ್ಯವಲ್ಲ, ಅದರ ಹಿಂದಿರುವ ಮನಸ್ಸು ಮುಖ್ಯ. ನಿಜವಾದ ಪ್ರೀತಿಯಲ್ಲಿ ದುಬಾರಿ ಉಡುಗೊರೆಗಳಿಗೆ ಹೆಚ್ಚು ಮಹತ್ವವಿಲ್ಲ. ಪ್ರೀತಿಯಿಂದ ಒಂದು ಕೆಂಗುಲಾಬಿ ಕೊಟ್ಟರೂ ಸಾಕು, ಅದೇ ಮಹಾನ್‌ ಉಡುಗೊರೆ. ಆದ್ದರಿಂದಲೇ ವ್ಯಾಲೆಂಟೈನ್‌ ದಿನ ಪ್ರೇಯಸಿಗೆ ಗುಲಾಬಿ ಕೊಡುವ ರೂಢಿ ಬಂದಿದ್ದು. 

Advertisement

ಆದರೆ ಕೆಲ ಹುಡುಗರು ತಮ್ಮಿಷ್ಟದ ಹುಡುಗಿಯರನ್ನು ಆಕರ್ಷಿಸಿಕೊಳ್ಳಲು ದುಬಾರಿ ಗಿಫ್ಟ್ಗಳನ್ನು ಕೊಡುತ್ತಲೇ ಇರುತ್ತಾರೆ. ಎಷ್ಟೋ ಹುಡುಗಿಯರು ಇಂತಹ ಗಿಫ್ಟ್ಗಳಿಗೆ ಮನಸೋತು ಪ್ರೀತಿಯಲ್ಲಿ ಬೀಳುವ ಬಾಲಿಶತನ ತೋರುತ್ತಾರೆ. ಇವೆಲ್ಲ ಹುಡುಗಾಟಗಳಷ್ಟೆ, ಇಲ್ಲಿ ಗಿಫ್ಟ್ಗೂ ಬೆಲೆಯಿಲ್ಲ, ಅದರ ಹಿಂದಿನ ಉದ್ದೇಶಕ್ಕೂ ಬೆಲೆಯಿಲ್ಲ. ಗಿಫ್ಟ್ಗಳಿಗೆ ಮನಸೋತು ಇಬ್ಬರ ನಡುವೆ ಪ್ರೀತಿ ಹುಟ್ಟಿದರೆ ಅದು ಬಹಳ ದಿನ ಉಳಿಯುವ ಗ್ಯಾರೆಂಟಿಯೂ ಇಲ್ಲ. ಏಕೆಂದರೆ ನಿಜವಾದ ಪ್ರೀತಿ ಉಡುಗೊರೆಯಿಂದ ಹುಟ್ಟುವುದಿಲ್ಲ ಮತ್ತು ಉಡುಗೊರೆಗಳಿಂದ ಉಳಿಯುವುದೂ ಇಲ್ಲ. 

ಮನುಷ್ಯ ಜನ್ಮವೇ ದೊಡ್ಡ ಗಿಫ್ಟ್ 
ನಮಗೆ ಪ್ರಿಯವಾದವರು ಏನೇ ಕೊಟ್ಟರೂ ಅದು ತುಂಬಾ ಚೆನ್ನ ಅನ್ನಿಸುತ್ತದೆ. ಅದನ್ನು ಪ್ರೀತಿಯಿಂದ ಕೈಯಲ್ಲಿ ಹಿಡಿದು
ಕೊಂಡು ಮುತ್ತಿಡುತ್ತೇವೆ. ಬೇಡದಿರುವವರು ಕೊಟ್ಟದ್ದನ್ನು ಪ್ಯಾಕ್‌ ಬಿಚ್ಚಿ ನೋಡುವುದಕ್ಕೂ ಹೋಗುವುದಿಲ್ಲ, ಅಸಡ್ಡೆಯಿಂದ ಒಂದು ಕಡೆ ಎಸೆದಿರುತ್ತೇವೆ. ಬಹಳಷ್ಟು ಮಂದಿ ಚಿಕ್ಕವರಿದ್ದಾಗ ಅಪ್ಪ ಅಮ್ಮ ಕೊಡಿಸಿದ ವಸ್ತುಗಳ ಜತೆ ಗಾಢವಾದ ಮಾನಸಿಕ ಬಾಂಧವ್ಯ ಬೆಳೆಸಿಕೊಂಡಿರುತ್ತಾರೆ. 40-50 ವರ್ಷ ವಯಸ್ಸಾದರೂ ಅವರು “ಇದು ಚಿಕ್ಕಂದಿನಲ್ಲಿ ಅಪ್ಪ ಕೊಡಿಸಿದ್ದು’ ಎಂದು ಆ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿರುತ್ತಾರೆ. ಆ ವಸ್ತುಗಳೇ ಅವರಿಗೆ ಅಪ್ಪ ಅಮ್ಮನನ್ನು ನೆನಪಿಸುತ್ತಿರುತ್ತವೆ. ಪ್ರೀತಿಸಿದವರು ಸಾಮಾನ್ಯವಾಗಿ ತಮ್ಮ ಪ್ರಿಯಕರ ಅಥವಾ ಪ್ರೇಯಸಿ ನೀಡಿದ ಮೊದಲ ಉಡುಗೊರೆಯನ್ನು ಬಹಳ ಕಕ್ಕುಲ ತೆಯಿಂದ ಕಾಪಾಡಿಕೊಂಡಿರುತ್ತಾರೆ. ಮದುವೆಯಗಿ, ಮಕ್ಕಳಾಗಿ, ವಯಸ್ಸಾಗಿ, ಕೊನೆಗೆ ಗಂಡ ಹೆಂಡತಿ ಇಬ್ಬರೇ ವೃದ್ಧಾಪ್ಯ ಕಳೆಯುವ ಸಂಧರ್ಭ ಬಂದಾಗ ಒಂದು ದಿನ ಇದ್ದಕ್ಕಿದ್ದಂತೆ ಆ ಗಿಫ್ಟ್ ತೆರೆದು “ನೋಡು, ಇದು ನನಗೆ ನೀನು ಕೊಟ್ಟ ಮೊದಲ ಗಿಫ್ಟ್’ ಎಂದು ತೋರಿಸಿದರೆ ಆಗ ಅದನ್ನು ಕೊಟ್ಟವರಿಗೆ ಆಗುವ ಸಂತೋಷ ಅವರ್ಣನೀಯ. 

ಜೀವನದಲ್ಲಿ ವಸ್ತುಗಳು ಮಾತ್ರ ಗಿಫಾrಗಿ ಬರುವುದಿಲ್ಲ. ಮನು ಷ್ಯರು ಕೂಡ ಪ್ಯಾಕೇಜ್‌ ಗಿಫಾrಗಿ ಬರುತ್ತಾರೆ. ನಾವು ಜೀವನದಲ್ಲಿ ತುಂಬಾ ಬೇಜಾರಾಗಿದ್ದಾಗ ದೇವರು ಯಾರನ್ನಾದರೂ ಸ್ನೇಹಿತರ ರೂಪದಲ್ಲೋ, ಪ್ರೇಮಿಯ ರೂಪದಲ್ಲೋ ಅಥವಾ ಸಂಬಂಧಕ್ಕೆ ಹೆಸರಿಡಲಾಗದ ರೂಪದಲ್ಲೋ ಕಳುಹಿಸುತ್ತಾನೆ. ಆ ಗಿಫ್ಟ್ಗೆ ಬೆಲೆ ಕೆಟ್ಟಲಾಗುವುದಿಲ್ಲ. ಆ ಸ್ನೇಹ, ಆ ಪ್ರೀತಿ, ಅವರು ನೀಡುವ ಧೈರ್ಯ, ಸಾಂತ್ವನ, ಮಮತೆ, ಆತ್ಮೀಯತೆ… ವಸ್ತುರೂಪದ ಗಿಫ್ಟ್ಗಿಂತ ಬಹಳ ದೊಡ್ಡದು. ಅದು ನಮ್ಮ ಜೀವನವನ್ನೇ ಬದಲಾಯಿಸುವಂತಹ ಅತ್ಯಮೂಲ್ಯ ಉಡುಗೊರೆ. 

ಈ ಮೂರು ಸಂಗತಿ ನೆನಪಿಡಿ
ಉಡುಗೊರೆಗಳ ವಿಷಯದಲ್ಲಿ ನಾವು ಮೂರು ಸಂಗತಿಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. 
1    ನಮಗೆ ಸಿಕ್ಕ ಅತಿದೊಡ್ಡ ಉಡುಗೊರೆ ಈ ಮನುಷ್ಯ ಜನ್ಮ. ಇದನ್ನು ಬಹಳ ಪ್ರೀತಿಯಿಂದ, ಎಚ್ಚರಿಕೆಯಿಂದ ಕಾಪಾಡಿ ಕೊಳ್ಳಬೇಕು. ಅಷ್ಟೇ ಸಾಲದು, ಸದ್ಬಳಕೆ ಮಾಡಿಕೊಂಡು ಈ ಅಮೂಲ್ಯ ಉಡುಗೊರೆಗೆ ನ್ಯಾಯ ಒದಗಿಸಬೇಕು. 

2    ಕೆಲವರಿಗೆ ಉಡುಗೊರೆ ತೆಗೆದುಕೊಳ್ಳುವುದು ಬಹಳ ಇಷ್ಟ. ಆದರೆ ಬೇರೆಯವರಿಗೆ ಕೊಡುವ ಸಂದರ್ಭ ಬಂದಾಗ ಬಹಳ ಕಷ್ಟ. ಅಂತಹ ಜಿಪುಣತನ ಬೇಡ. ನೀವು ಉಡುಗೊರೆಯನ್ನು ಎಂಜಾಯ್‌ ಮಾಡುತ್ತೀರಿ ಎಂದಾದರೆ ನೀವು ಬೇರೆಯವರಿಗೆ ಅಂಥ ಗಿಫ್ಟ್ ಕೊಟ್ಟಾಗ ಅವರೂ ಎಂಜಾಯ್‌ ಮಾಡುತ್ತಾರೆ. ಉಡುಗೊರೆ ಕೊಟ್ಟು-ತೆಗೆದುಕೊಳ್ಳುವ ಸಂಗತಿ. 

3    ಗಿಫ್ಟ್ನ ಬೆಲೆ ಮುಖ್ಯವಲ್ಲ, ಅದರ ಹಿಂದಿರುವ ಮನಸ್ಸು ಮುಖ್ಯ. ಉಳ್ಳವರು ಮರ್ಸಿಡಿಸ್‌ ಬೆಂಜ್‌ ಕಾರನ್ನೇ ತಮ್ಮ ಮಕ್ಕಳಿಗೆ ಅಥವಾ ಹೆಂಡತಿಗೆ ಗಿಫ್ಟ್ ಕೊಡಬಹುದು. ಆದರೆ, ಬಡವರು ಪ್ರೀತಿಯಿಂದ ಒಂದು ಸಾದಾ ಸೀರೆಯನ್ನು ಹೆಂಡತಿಗೆ ಕೊಡಿಸಿದರೂ ಆ ಉಡುಗೊರೆ ಅಮೂಲ್ಯವಾದದ್ದೇ. ಯಾವತ್ತೂ ಉಡುಗೊರೆಯನ್ನು ಹಣದಲ್ಲಿ ಅಳೆಯಬೇಡಿ. ಪ್ರೀತಿಯಲ್ಲಿ ಅಳೆಯಿರಿ.

Advertisement

Udayavani is now on Telegram. Click here to join our channel and stay updated with the latest news.

Next