Advertisement

ರಹಸ್ಯಗಳಿದ್ದ ಪುಸ್ತಕವನ್ನುಗಿಫ್ಟ್ ರೂಪದಲ್ಲಿ ಕೊಟ್ಟರು ಅತ್ತೆ!

03:58 PM May 30, 2019 | sudhir |

ಗೃಹಸ್ಥಾಶ್ರಮಕ್ಕೆ ಕಾಲಿಡುವ ಮೊದಲು ಹೆಣ್ಣು ಕೆಲವೊಂದು ವಿಷಯಗಳನ್ನು ಅಗತ್ಯವಾಗಿ ತಿಳಿದಿರಬೇಕಾಗುತ್ತದೆ ಅನ್ನುತ್ತಲೇ ಅತ್ತೆಯವರು ಒಂದು ಪುಸ್ತಕವನ್ನು ಕೈಗಿಟ್ಟರು…

Advertisement

ನನ್ನ ಅತ್ತೆಯವರಿಗೆ ನಾನು ಮದುವೆಗೆ ಒಂದೂವರೆ ವರ್ಷ ಮುಂಚಿನಿಂದಲೇ ಚೆನ್ನಾಗಿ ಗೊತ್ತು. ಆದರೆ ನಾನು ಅವರ ಮಗನ ಪ್ರೇಯಸಿಯಾಗುತ್ತೇನೆ ಎಂದು ಮಾತ್ರ ಅಂದುಕೊಂಡಿರಲಿಲ್ಲ. ಆದರೆ ಅವರ ಮನೆ ಸೊಸೆ ನಾನೇ ಆಗಬೇಕು ಎಂಬಾಸೆಯಂತೂ ಅತ್ತೆಯ ಮನಸ್ಸಿನಲ್ಲಿತ್ತು. ನಮ್ಮ ಪ್ರೀತಿಯ ವಿಚಾರ ಅವರಿಗೆ ಗೊತ್ತಾದಾಗ ಅವರಿಗೆ ಸಂತಸವೇ ಆಗಿತ್ತು. “ಗೃಹಸ್ಥಾಶ್ರಮಕ್ಕೆ ಕಾಲಿಡುವ ಮುನ್ನ ಹೆಣ್ಣು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ’ ಎಂದು ಹೇಳಿ ನಸುನಗುತ್ತಾ ಒಂದು ಹಳೇ ಗ್ರಂಥವನ್ನು ನನ್ನ ಕೈಯಲ್ಲಿಟ್ಟರು. ಆ ಗ್ರಂಥವನ್ನು ನಮ್ಮ ಅತ್ತೆಗೆ ಅವರ ಅತ್ತೆ ಕೊಟ್ಟಿದ್ದರಂತೆ. ಈಗವರು ಅದನ್ನು ನನಗೆ ಹಸ್ತಾಂತರಿಸಿದ್ದರು. ಆಧುನಿಕ ಕಾಲದ ಬದುಕಿಗೆ ಹಳೆಯ ಕಾಲದ ಸೂತ್ರಗಳು ಎಷ್ಟರಮಟ್ಟಿಗೆ ಅನ್ವಯಿಸುತ್ತವೆ ಎನ್ನುವ ಅನುಮಾನ ನನಗೂ ಇತ್ತು. ಆದರೆ ಯಾವುದೇ ವಿಚಾರವಾದರೂ ಒಂದೇ ಸಲಕ್ಕೆ ತಳ್ಳಿಹಾಕದೆ, ಕಾಲಕ್ಕೆ ಸರಿಹೊಂದುವ ವಿಚಾರಗಳನ್ನು ಹೀರಿಕೊಂಡು, ಉಳಿದುದನ್ನು ಬಿಡುವುದರಲ್ಲಿಯೇ ಜಾಣ್ಮೆಯಿದೆ. ಅದರಲ್ಲೂ ಪುಸ್ತಕದಲ್ಲಿದ್ದ ವಿಚಾರಗಳನ್ನು ನನ್ನವರು ಓದಿ ವಿವರಿಸುವಾಗ ಸಾಂಸಾರಿಕ ಬದುಕಿನ ಬಗ್ಗೆ ನನಗಿದ್ದ ಆತಂಕಗಳೆಲ್ಲವೂ ದೂರವಾದವು. ಆ ಗ್ರಂಥ ಹಳೆಯದಾದರೂ ಅದರಲ್ಲಿದ್ದ ಅನೇಕ ವಿಷಯಗಳು ಸರಳವಾಗಿದ್ದು, ಸಕಾಲಿಕವಾಗಿದ್ದವು. ಪುಸ್ತಕದಿಂದ ಆಯ್ದ 6 ಹಿತನುಡಿಗಳು ಇವು-

1. ಪ್ರತಿ ಹೆಣ್ಣು ಗಂಡನ ಮನೆ ಮತ್ತು ತವರು ಮನೆಯೆರಡನ್ನೂ ಸಮನಾಗಿ ಕಾಣಬೇಕು. ಅವೆರಡೂ ಮನೆಗಳನ್ನೂ ಅವಳು ಬೆಳಗಿಸಬೇಕು.

2. ಮನೆಯೊಳಗಿನ ವಿಚಾರಗಳನ್ನು ಮೂರನೆಯವರೊಂದಿಗೆ ಚರ್ಚಿಸಲು ಹೋಗಬಾರದು.

3. ಗುರುಹಿರಿಯರನ್ನು ಗೌರವ ಭಾವದಿಂದ ಕಾಣಬೇಕು. ಅವರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು.

Advertisement

4. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮಾತ್ಸರ್ಯ ಮನುಷ್ಯನ ಶತ್ರು. ಅವು ಅಂತರಂಗದ ಅವನತಿಗೆ ಕಾರಣವಾಗುತ್ತವೆ. ಹೀಗಾಗಿ ಹೆಣ್ಣು ಇವುಗಳಿಂದ ದೂರವಿರಬೇಕು.

5. ಪತ್ನಿಯಾದವಳು ಪತಿಯೊಡನೆ ಮನೆಗೆಲಸದಲ್ಲಿ ಜೊತೆಯಾಗಿ, ಸರಸದಲ್ಲಿ ಸ್ನೇಹಿತೆಯಂತೆ, ಮಮತೆಯಲ್ಲಿ ಮಾತೆಯಂತೆ, ಸಂಕಷ್ಟ ಕಾಲದಲ್ಲಿ ಸರಿಯಾದ ಸಲಹೆ ಕೊಟ್ಟು ಮಂತ್ರಿಯಂತೆ ವರ್ತಿಸಬೇಕು.

6. ಹೆಣ್ಣಿಗೆ ಲಜ್ಜೆಯೇ ಭೂಷಣ. ಲಜ್ಜೆಯಿಂದ ಮಂದಸ್ಮಿತಳಾಗಿ, ಪ್ರೀತಿಪೂರ್ವಕವಾಗಿ, ಮಿತವಾಗಿ ಮಾತನಾಡುವವಳು ಮನೆಮಂದಿಗೆಲ್ಲಾ ಇಷ್ಟವಾಗುತ್ತಾಳೆ.

– ಜಯಲಕ್ಷ್ಮೀ ನೆಗಳೂರ

Advertisement

Udayavani is now on Telegram. Click here to join our channel and stay updated with the latest news.

Next