ಹೈದರಾಬಾದ್ : ಹೈದರಾಬಾದಿನ ಅನಂತಪುರದಲ್ಲಿ ಮಕ್ಕಳ ಅಚ್ಚುಮೆಚ್ಚಿನ ಜೈಂಟ್ ವೀಲ್‌ನ ಕಾರ್ ಟ್ರಾಲಿಯೊಂದು ನೆಲಕ್ಕುರುಳಿ ಬಿದ್ದು 10 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಳಲ್ಲದೆ ಇತರ ಆರು ಮಂದಿ ಗಾಯಗೊಂಡರು. ಗಾಯಾಳುಗಳಲ್ಲಿ ಮೂವರು ಮಕ್ಕಳು ಸೇರಿದ್ದಾರೆ.
ಮೃತ ಬಾಲಕಿಯನ್ನು ಅನಂತಪುರದ ಸಿದ್ಧರಾಮಪುರದ ನಿವಾಸಿ ಅಮೃತಾ ಎಂದು ಗುರುತಿಸಲಾಗಿದೆ.
ಎನ್‌ಡಿಟಿವಿ ವರದಿಯ ಪ್ರಕಾರ ಕಾರ್ ಟ್ರೋಲಿಯ ಬೋಲ್ಟ್ ಒಂದು ಕಳಚಿಕೊಂಡದ್ದೇ ಈ ಭೀಕರ ಅವಘಡಕ್ಕೆ ಕಾರಣವಾಗಿದೆ. ಕಾರ್ ಟ್ರಾಲಿ ನೆಲಕ್ಕುರುಳಿದಾಗ ಅದರೊಳಗಿದ್ದ ಮಕ್ಕಳು, ಜನರು ಚೆಲ್ಲಾಪಿಲ್ಲಿಯಾಗಿ ಎಸೆಯಲ್ಪಟ್ಟರು.
ಈ ದುರ್ಘಟನೆಯ ವಿಡಿಯೋ ಚಿತ್ರಿಕೆಯೊಂದು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಅದೀಗ ವೈರಲ್ ಆಗಿದೆ.
ಅನಂತಪುರದ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ರೋಬೋ ಎನಿಮಲ್ಸ್ ಎಕ್ಸಿಬಿಷನ್ ಎಂಬ ಹೆಸರಿನ ಮನೋರಂಜನೆ ಉತ್ಸವ ನಡೆದಿತ್ತು. ಗಾಯಾಳುಗಳನ್ನು ಒಡನೆಯೇ ಸರಕಾರಿ ಆಸ್ಪತ್ರೆಗೆ ಒಯ್ಯಲಾಯಿತು.
ಘಟನೆ ಸಂಬಂಧವಾಗಿ ಜೈಂಟ್ ವೀಲ್ ಆಪರೇಟರ್ ನನ್ನು ಉದ್ರಿಕ್ತ ಜನರು ಹೊಡೆದು ಹಲ್ಲೆ ನಡೆಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದರು.