ಕೇಂದ್ರದಲ್ಲಿ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದು, ಕಾಂಗ್ರೆಸ್‌ಗೆ ಒಂದೊಮ್ಮೆ ಪ್ರಧಾನಿ ಹುದ್ದೆ ಸಿಗದಿದ್ದರೆ ಅದನ್ನು ಪಕ್ಷವು ದೊಡ್ಡ ವಿವಾದವಾಗಿ ಮಾಡುವುದಿಲ್ಲ. ಪ್ರಧಾನಿ ಹುದ್ದೆಗಾಗಿ ನಾವು ಪಟ್ಟು ಹಿಡಿಯುವುದಿಲ್ಲ ಎಂದು ಗುರುವಾರ ಹೇಳಿದ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಶುಕ್ರವಾರ ‘ಯೂ ಟರ್ನ್’ ಹೊಡೆದಿದ್ದಾರೆ.
ಶುಕ್ರವಾರ, ತಮ್ಮ ಹೇಳಿಕೆಗೆ ತದ್ವಿರುದ್ಧವಾಗಿ ಮಾತನಾಡಿರುವ ಅವರು, ”ಕಾಂಗ್ರೆಸ್ ಪ್ರಧಾನಿ ಹುದ್ದೆಯನ್ನು ಕೇಳುವುದಿಲ್ಲ ಅಥವಾ ಕಾಂಗ್ರೆಸ್‌ಗೆ ಪ್ರಧಾನಿ ಹುದ್ದೆಯಲ್ಲಿ ಆಸಕ್ತಿಯಿಲ್ಲ ಎಂದು ನಾನು ಹೇಳಿಲ್ಲ. ಕಾಂಗ್ರೆಸ್ ಅತ್ಯಂತ ಹಳೆಯ ಹಾಗೂ ಅತಿ ದೊಡ್ಡ ಪಕ್ಷ. ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ 5 ವರ್ಷ ಅಧಿಕಾರದಲ್ಲಿರಲೇಬೇಕು. ಹಾಗಾಗಿ, ದೊಡ್ಡ ಪಕ್ಷಕ್ಕೇ ಆಡಳಿತದ ಸೂತ್ರ ಕೊಡಬೇಕು. ಕೇಂದ್ರದಲ್ಲಿ ಸ್ಥಿರ ಸರ್ಕಾರ ಇರಬೇಕೆಂದರೆ ಕಾಂಗ್ರೆಸ್‌ಗೇ ಸರ್ಕಾರ ರಚಿಸಲು ಅವಕಾಶ ನೀಡಬೇಕು” ಎಂದು ಹೇಳಿದ್ದಾರೆ.
ಒಂದೆಡೆ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಎಲ್ಲ ಪ್ರತಿಪಕ್ಷಗಳನ್ನೂ ಸಂಪರ್ಕಿಸಿ, ಮಹಾಮೈತ್ರಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಗುರುವಾರ ಆಜಾದ್‌ರಿಂದ ಇಂಥ ಹೇಳಿಕೆ ಹೊರಬಿದ್ದಿದ್ದು ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಬಾರದೇ ಇದ್ದರೆ, ಯಾವುದಾದರೂ ಪ್ರಾದೇಶಿಕ ಪಕ್ಷದ ನಾಯಕ/ನಾಯಕಿಗೆ ಪ್ರಧಾನಿ ಹುದ್ದೆ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿದೆ ಎಂಬ ಸಂದೇಶವನ್ನು ಆಜಾದ್ ಹೇಳಿಕೆ ರವಾನಿಸಿತ್ತು. ಆದರೆ, ಈ ಹೇಳಿಕೆಯು ಪಕ್ಷಕ್ಕೇ ಮುಳುವಾಗುವ ಸಾಧ್ಯತೆಯಿದೆ ಎಂದು ಅರಿವಾದೊಡನೆ ಆಜಾದ್ ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ.
ಕಾಂಗ್ರೆಸ್‌ಗೆ ಪ್ರಧಾನಿ ಹುದ್ದೆ ಬೇಕಾಗಿಲ್ಲ ಎಂಬ ಮಾತು ಸತ್ಯವಲ್ಲ. ನಾನು ಹೇಳಿದ್ದೇನೆಂದರೆ, ‘ಇನ್ನೂ ಚುನಾವಣೆ ಮುಗಿದಿಲ್ಲ. ಈಗ ನಾವು ಪ್ರಧಾನಿ ಹುದ್ದೆಗಾಗಿ ಜಗಳವಾಡುವುದು ಸರಿಯಲ್ಲ. ಪ್ರಧಾನಿ ಹುದ್ದೆ ಬಗ್ಗೆ ಎಲ್ಲರೂ ಒಮ್ಮತದಿಂದ ನಿರ್ಧರಿಸಬೇಕಾಗುತ್ತದೆ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
ಗುರುವಾರದಂದು ಮಾಧ್ಯಮಗಳ ಜತೆಗೆ ಮಾತನಾಡುವಾಗ ಅವರು, ”ಕಾಂಗ್ರೆಸ್‌ಗೆ ಪ್ರಧಾನಿ ಪಟ್ಟ ಸಿಗದಿದ್ದರೆ ಅದನ್ನು ವಿವಾದವಾಗಿಸುವುದಿಲ್ಲ. ಒಟ್ಟಿನಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಕಾಂಗ್ರೆಸ್‌ಗೆ ಮುಖ್ಯ. ಅದಕ್ಕಾಗಿ ಯಾವುದಾದರೂ ಪ್ರಾದೇಶಿಕ ಪಕ್ಷದ ನಾಯಕರನ್ನು ಪ್ರಧಾನಿ ಹುದ್ದೆಗೇರಿಸಲೂ ನಾವು ಸಿದ್ಧರಿದ್ದೇವೆ” ಎಂದಿದ್ದರು. ಆಜಾದ್ ಹೇಳಿಕೆ ಬೆನ್ನಲ್ಲೇ ಗುರುವಾರ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ‘ನಾನು ಆಜಾದ್ ಹೇಳಿಕೆಯನ್ನು ಒಪ್ಪುವುದಿಲ್ಲ. ದೇಶದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಪಕ್ಷಕ್ಕೆ ಪ್ರಧಾನಿ ಹುದ್ದೆ ಸಿಗಬೇಕು ಎನ್ನುವುದು ಕಾಂಗ್ರೆಸ್‌ನ ನಿಲುವಾಗಿದೆ. ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಲಿದೆ. ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ನಾವೇ ಸರ್ಕಾರ ರಚಿಸಲಿದ್ದೇವೆ’ ಎಂದಿದ್ದರು.