Advertisement

ಇನ್ನೇನು ಭೂಮಿ ಪೂಜೆ ನಡೆಯಬೇಕು. ಅಷ್ಟರಲ್ಲಿ ಬಾಂಬ್‌ ಬ್ಲಾಸ್ಟ್‌ ಆಗುತ್ತದೆ. ಎಲ್ಲರೂ ಚೆಲ್ಲಾಪಿಲ್ಲಿ. ಕಟ್‌ ಮಾಡಿದರೆ ಹೊರಗಿಂದ ಬಂದ ಗ್ಯಾಂಗ್‌ವೊಂದು ಒಂದಷ್ಟು ಕೈದಿಗಳನ್ನು ಒತ್ತೆಯಾಳಗಿಟ್ಟುಕೊಂಡಿರುತ್ತದೆ. ಅಲ್ಲಿಂದ ಗೇಮ್‌ ಶುರು. ಅಖಾಡವೂ ಅವನದೇ ಆಟವೂ ಅವನದೇ… ಹಾಗಾದರೆ ಆತ ಯಾರು, ಹೈಜಾಕ್‌ ಹಿಂದಿನ ಉದ್ದೇಶವೇನು? ಈ ಕುತೂಹಲ ನಿಮಗಿದ್ದರೆ ನೀವು “ಘೋಸ್ಟ್‌’ ಸಿನಿಮಾ ನೋಡಬಹುದು.

Advertisement

ಶಿವರಾಜ್‌ಕುಮಾರ್‌ ಅವರ ಜೊತೆ ಸಿನಿಮಾ ಮಾಡಬೇಕೆಂದು ಕನಸು ಕಾಣುವ ನಿರ್ದೇಶಕರ ಪಟ್ಟಿ ದೊಡ್ಡದಿದೆ. ಆ ಪಟ್ಟಿಯಲ್ಲಿ ನಿರ್ದೇಶಕ ಶ್ರೀನಿ ಕೂಡಾ ಒಬ್ಬರು. ಆದರೆ, ಶ್ರೀನಿ, ಶಿವಣ್ಣ ಅವರಿಗೆ ಸಿನಿಮಾ ಮಾಡುವ ಕನಸಿನ ಜೊತೆಗೆ ಅವರನ್ನು ವಿಭಿನ್ನವಾಗಿ ತೋರಿಸಬೇಕೆಂಬ ಆಸೆಯೊಂದಿಗೆ ಮಾಡಿದ ಸಿನಿಮಾವಿದು. ಅದೇ ಕಾರಣದಿಂದ “ಘೋಸ್ಟ್‌’ ಶಿವಣ್ಣ ಕೆರಿಯರ್‌ನಲ್ಲಿ ವಿಭಿನ್ನವಾಗಿ ನಿಲ್ಲುವ ಸಿನಿಮಾ.

ಈ  ಸಿನಿಮಾದ ಹೈಲೈಟ್‌ ಎಂದರೆ ಚಿತ್ರಕಥೆ. ನಿರ್ದೇಶಕ ಶ್ರೀನಿ ಚಿತ್ರಕಥೆಯಲ್ಲಿ ಜಾಣ್ಮೆ ಮೆರೆದಿದ್ದಾರೆ. ಎಲ್ಲೂ ಬೋರ್‌ ಆಗದಂತೆ ಜೊತೆಗೆ ಆಗಾಗ ಪ್ರೇಕ್ಷಕರಲ್ಲಿ ಕುತೂಹಲ, ಗೊಂದಲವೂ ಎಲ್ಲವೂ ಬರುವಂತೆ ನೋಡಿಕೊಂಡು ಸಿನಿಮಾವನ್ನು ಮುಂದುವರೆಸುವ ಮೂಲಕ “ಘೋಸ್ಟ್‌’ ಒಂದು ಹೊಸ ಫೀಲ್‌ ಕೊಡುವಂತೆ ಮಾಡಿದ್ದಾರೆ.

ಮೊದಲೇ ಹೇಳಿದಂತೆ ಶಿವಣ್ಣ ಕೆರಿಯರ್‌ನಲ್ಲಿ ಇದು ವಿಭಿನ್ನವಾಗಿ ನಿಲ್ಲುವ ಸಿನಿಮಾ. ಈ ತರಹದ ಒಂದು ಪ್ರಯತ್ನಕ್ಕೆ ಕೈ ಜೋಡಿಸಿದ ಶಿವಣ್ಣ ಅವರನ್ನು ಮೆಚ್ಚಲೇಬೇಕು. ಅದೇ ಹಾಡು, ಲವ್‌, ಫ್ಯಾಮಿಲಿ ಸೆಂಟಿಮೆಂಟ್‌, ಡ್ಯುಯೆಟ್‌ಗಳ ಮಧ್ಯೆ “ಘೋಸ್ಟ್‌’ “ಜೈಲ್‌ಬ್ರೇಕ್‌’ನಂತೆ ಅವೆಲ್ಲವನ್ನು ಬ್ರೇಕ್‌ ಮಾಡಿ ಒಂದು ಶೈಲಿಯಲ್ಲಿ ಮೂಡಿಬಂದಿದೆ. ಇಲ್ಲಿ ತಂತ್ರ, ಪ್ರತಿತಂತ್ರ, ಕ್ಷಣ ಕ್ಷಣಕ್ಕೂ ಬದಲಾಗುವ ಸನ್ನಿವೇಶ, ಅದರ ಹಿಂದಿನ ಉದ್ದೇಶ… ಹೀಗೆ ಸದಾ ಪ್ರೇಕ್ಷಕರನ್ನು ಎಂಗೇಜ್‌ ಮಾಡುತ್ತಲೇ ಸಾಗುವ ಸಿನಿಮಾದ ಕಥೆ ನಾಲ್ಕು ಕಾಲಘಟ್ಟಗಳಲ್ಲಿ ತೋರಿಸಿದ್ದಾರೆ. ಆದರೆ, ಅದನ್ನು ಅತಿಯಾಗಿ ವೈಭವೀಕರಿಸದೇ ಕಥೆಯ ಜೊತೆ ಜೊತೆಗೆ ಸಾಗುವಂತೆ ಮಾಡಿರುವುದು ನಿರ್ದೇಶಕರ ಜಾಣ್ಮೆ.

ಮೊದಲರ್ಧಕ್ಕೆ ಹೋಲಿಸಿದರೆ ಚಿತ್ರದ ದ್ವಿತೀಯಾರ್ಧ ಹೆಚ್ಚು ವೇಗವಾಗಿ ಕೂಡಿದೆ. ಕ್ಷಣ ಕ್ಷಣಕ್ಕೂ ಹೊಸ ಹೊಸ ಟ್ವಿಸ್ಟ್‌ಗಳ ಮೂಲಕ ಸಾಗುವ ಸಿನಿಮಾ ಒಂದು ಹಂತದಲ್ಲಿ ರೋಚಕ ಕ್ಷಣಗಳನ್ನು ಕಟ್ಟಿಕೊಡುತ್ತದೆ. ಈ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಸಂಭಾಷಣೆ ಕೂಡಾ ಒಂದು. ಇಲ್ಲಿ ಹೆಚ್ಚು ಮಾತಿಲ್ಲ. ಆದರೆ, ಆಡುವ ಮಾತು ಅಷ್ಟೇ ಪವರ್‌ಫ‌ುಲ್‌ ಆಗಿದೆ. “ಬಟ್ಟೆ ಗಲೀಜಾಗಿದ್ರು ಪರ್ವಾಗಿಲ್ಲ, ನಿಯತ್ತು ಶುದ್ಧವಾಗಿರಬೇಕು’, “ಕಾಶಿಗೆ ಬಂದಿದ್ದೀಯ, ಗಂಗೆಯಲ್ಲಿ ಮುಳುಗಿಸದೇ ಬಿಡ್ತೀವ’, “ಭಯ ಇರಬೇಕು, ಆಗಲೇ ನಮ್ಮ ಧೈರ್ಯ ಗೊತ್ತಾಗೋದು…’ ಇಂತಹ ಡೈಲಾಗ್‌ಗಳನ್ನು ಸಂಭಾಷಣೆಕಾರರಾದ ಮಾಸ್ತಿ ಹಾಗೂ ಪ್ರಸನ್ನ ಕಟ್ಟಿಕೊಟ್ಟು ಸಿನಿಮಾದ ತೂಕ ಹೆಚ್ಚಿಸಿದ್ದಾರೆ.

Advertisement

ಇನ್ನು, ಚಿತ್ರದಲ್ಲಿ ಸಾಕಷ್ಟು ಅಂಶಗಳು ಬಂದು ಹೋಗುವುದರಿಂದ ಕ್ಲೈಮ್ಯಾಕ್ಸ್‌ನಲ್ಲಿ ಸ್ಪಷ್ಟತೆಗಾಗಿ ಎಲ್ಲವನ್ನು ನೆನಪಿನಲ್ಲಿಟ್ಟುಕೊಳ್ಳುವ ಟಾಸ್ಕ್ ಅನ್ನು ಇಲ್ಲಿ ಪ್ರೇಕ್ಷಕರಿಗೆ ನೀಡಲಾಗಿದೆ. ನಟ ಶಿವರಾಜ್‌ಕುಮಾರ್‌ ಅವರನ್ನು ಖಡಕ್‌ ಆ್ಯಕ್ಷನ್‌ ಇಮೇಜ್‌ ಇಷ್ಟಪಡುವವರಿಗೆ “ಘೋಸ್ಟ್‌’ ಹಬ್ಬ. ಶಿವಣ್ಣ ಕೂಡಾ ಹೆಚ್ಚು ಮಾತಿಲ್ಲದೇ, ಮೌನದಲ್ಲೇ ಸಿನಿಮಾದ ತೂಕ ಹೆಚ್ಚಿಸಿದ್ದಾರೆ. ಇಲ್ಲಿ ಅವರ ಲುಕ್‌, ಮ್ಯಾನರಿಸಂ ಎಲ್ಲವೂ ವಿಭಿನ್ನವಾಗಿದೆ.

ಉಳಿದಂತೆ ಜಯರಾಂ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಅನುಪಮ್‌ ಖೇರ್‌ ಕೂಡಾ ನಟಿಸಿದ್ದಾರೆ. ಇಡೀ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಕೂಡಾ ಒಂದು. ಇವೆರಡೂ ಸಿನಿಮಾದ ತೂಕ ಹೆಚ್ಚಿಸಿರುವುದು ಸುಳ್ಳಲ್ಲ. ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಶಿವಣ್ಣ ಅವರನ್ನು ನೋಡುವವರಿಗೆ “ಘೋಸ್ಟ್‌’ ರುಚಿಸಬಹುದು.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next