Advertisement

ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ ! ವರ ಸಿಗದೆ ಪತ್ರಿಕಾ ಜಾಹೀರಾತಿನ ಮೊರೆ

01:42 AM May 12, 2024 | Team Udayavani |

ಮಂಗಳೂರು: ಸುಮಾರು 30 ವರ್ಷದ ಹಿಂದೆ ತೀರಿ ಹೋದ ಯುವತಿಯೊಬ್ಬಳಿಗೆ ಮದುವೆ ಮಾಡಿಸಲು “ಪ್ರೇತ ವರ’ ಸದ್ಯ ಬೇಕಾಗಿದೆ !

Advertisement

ಹೀಗೊಂದು ಜಾಹೀರಾತು ಎಲ್ಲಾದರೂ ಕಂಡು ಬಂದರೆ ಹೇಗಿರುತ್ತದೆ. ಅಚ್ಚರಿಯಾಗದೇ ಇರುತ್ತದೆಯೇ? ಆಗಬಹುದು. ಈಗ ಜೀವಂತ ಹುಡುಗ, ಹುಡುಗಿಯರಿಗೇ ಸೂಕ್ತ ವರ ಅಥವಾ ವಧು ಹುಡುಕಲು ಪೋಷಕರು ಕಷ್ಟಪಡುತ್ತಿದ್ದಾರೆ. ಅಂಥದ್ದ ರಲ್ಲಿ ಈ ಜಾಹೀರಾತು ಎಂದು ತಿರಸ್ಕಾರ ಮಾಡಬಹುದು. ಆದರೆ ಇದು ಅಪ ಹಾಸ್ಯದ ಸಂಗತಿಯಲ್ಲ; ಬದಲಾಗಿ ನಂಬಿಕೆ, ಭಾವನಾತ್ಮಕ ಸಂಗತಿ.

ತುಳು ನಾಡಿನಾದ್ಯಂತ ಮನೆಮಾತಾಗಿ ರುವ “ಪ್ರೇತ ಮದುವೆ’ಯಡಿ ಪ್ರೇತ ವಧುವಿಗೆ ವರನ ಹುಡುಕಾಟದ ಸುದ್ದಿ ಈಗ ಸುದ್ದಿಯಲ್ಲಿದೆ. ವಿಶೇಷವೆಂದರೆ ಜಾಹೀರಾತಿಗೆ 50 ಕ್ಕೂ ಹೆಚ್ಚು ಪ್ರತಿಕ್ರಿಯೆಗಳೂ ಬಂದಿವೆ.
“30 ವರ್ಷಗಳ ಹಿಂದೆ ತೀರಿ ಹೋದ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ’ ಎಂದು ಜಾಹೀರಾತು ಪ್ರಕಟಿಸಲಾಗಿತ್ತು.

ಇದು ನಮ್ಮ
ಸಮಸ್ಯೆ ಮಾತ್ರವಲ್ಲ , ಊರೆಲ್ಲಾ ಇದೆ!
“ಪ್ರೇತ ವರ ಬೇಕಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದ ಕಾರಣದಿಂದ ತುಳುನಾಡಿನ ಹಲವು ಕಡೆಯ ಜನರು ನನಗೆ ಕರೆ ಮಾಡಿದರು. ಬೇರೆ ಬೇರೆ ಜಾತಿಯವರೂ ಕರೆ ಮಾಡಿದ್ದಾರೆ. ಈ ಪೈಕಿ ಬಹುತೇಕ ಮಂದಿ ನಿಮ್ಮ ಪರಿಚಯದಲ್ಲಿ ಯಾರಾದರೂ ವಧು-ವರ ಇದ್ದರೆ ನಮ್ಮನ್ನು ಸಂಪರ್ಕಿಸಿ-ನಮ್ಮ ಕುಟುಂಬದಲ್ಲಿಯೂ ಒಂದು ಪ್ರೇತ ಮದುವೆ ಆಗಬೇಕಿತ್ತು ಎಂದಿದ್ದಾರೆ. ನನ್ನ ಮನೆಯ ಸಮಸ್ಯೆ ಇದು ಅಂತ ತಿಳಿದಿದ್ದೆ. ಆದರೆ, ಇಡೀ ಊರಿನಲ್ಲೇ ಈ ಸಮಸ್ಯೆ ಇದೆ ಎಂಬುದು ಈಗ ಗೊತ್ತಾಯಿತು’ ಎನ್ನುತ್ತಾರೆ ಪುತ್ತೂರು ನಿವಾಸಿ.

ಕುಲೆ ಮದುವೆ
ನಮ್ಮ ಸಂಪ್ರದಾಯ, ಅಪಹಾಸ್ಯ ಬೇಡ
ಪ್ರೇತ ವಿವಾಹ ಕುರಿತ ಪತ್ರಿಕಾ ತುಣುಕು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಕುಲೆ ಮದುವೆ ಬಗ್ಗೆ ತಿಳಿಯದವರು “ಇನ್ನೂ ಏನೇನೆಲ್ಲ ನೋಡಬೇಕು?’ ಎಂದು ಕೆಲವರು ಅಪಹಾಸ್ಯ ಮಾಡಿದರೆ, ಹೆಚ್ಚಿನವರು ಇದರ ಹಿಂದಿರುವ ತುಳುನಾಡಿನ ಭಾವನೆಯ ವಿವರಣೆ ಕೊಡುತ್ತಿದ್ದಾರೆ. “ಪ್ರೇತ ಮದುವೆ ಎನ್ನುವುದು ಕೆಲವರಿಗೆ ಅಪಹಾಸ್ಯದ ಸಂಗತಿ ಆಗಿರಬಹುದು. ಆದರೆ, ತುಳುನಾಡ ಸಂಸ್ಕೃತಿ, ಸಂಪ್ರದಾಯ ಅರಿತಿರುವ ವ್ಯಕ್ತಿಗಳಿಗೆ ಇದರಲ್ಲಿ ಅತಿಶಯವಿಲ್ಲ. ಇದು ಭಾವನಾತ್ಮಕ -ನಂಬಿಕೆ ವಿಷಯ. ತುಳುನಾಡಿನ ಅದೆಷ್ಟೋ ಮನೆಗಳಲ್ಲಿ ಪ್ರೇತ ಮದುವೆ ನಡೆದಿದೆ- ನಡೆಯುತ್ತಲೇ ಇದೆ’ ಎಂದು ಹೆಚ್ಚಿನವರು ಹೇಳಿದ್ದಾರೆ. ಕುಲೆ ಮದುವೆಗಳು ಹಿಂದೆ ಕುಟುಂಬಕ್ಕೆ ಸೀಮಿತವಾಗಿ ಗೌಪ್ಯವಾಗಿ ನಡೆಯುತ್ತಿದ್ದರೆ, ಕಳೆದ ಕೆಲವು ವರ್ಷಗಳಲ್ಲಿ ಇದು ಮುಕ್ತವಾಗಿ, ಸ್ವಲ್ಪ ಮಟ್ಟಿಗೆ ಅದ್ಧೂರಿಯಾಗಿಯೂ ನಡೆಯುತ್ತಿದೆ. ಕೆಲವು ದೇಗುಲಗಳಲ್ಲೂ ಪ್ರೇತ ಮದುವೆ ನಡೆಯುತ್ತದೆ.

Advertisement

ಏನಿದು ಪ್ರೇತ ವರ ವೃತ್ತಾಂತ?
ಪುತ್ತೂರಿನ ನಿವಾಸಿಯೊಬ್ಬರ ಮನೆ ಮತ್ತು ಕುಟುಂಬದಲ್ಲಿ ಇತ್ತೀಚೆಗೆ ಆತಂಕಕಾರಿ ಘಟನೆಗಳು ನಡೆಯುತ್ತಿದ್ದವು. ಪ್ರಶ್ನೆ ಚಿಂತನೆ ಮೂಲಕ ಅವಲೋಕಿಸಿದಾಗ ಇದು ಪ್ರೇತ ಬಾಧೆ ಎಂದು ತಿಳಿಯಿತು. ಅವರ ಮನೆಯಲ್ಲಿ ಸುಮಾರು 30 ವರ್ಷದ ಹಿಂದೆ 1 ತಿಂಗಳ ಹಸುಗೂಸು ಮೃತಪಟ್ಟಿತ್ತು. ಅದೀಗ ವಿವಾಹ ವಯಸ್ಸಿಗೆ ಬಂದಿರುವುದರಿಂದ ನೆನಪಿಸಲು ಇಂಥ ಘಟನೆಗಳು ನಡೆಯುತ್ತಿವೆ ಎಂದು ತಿಳಿಯಿತು. ಹೀಗಾಗಿ 30 ವರ್ಷದ ಹಿಂದೆ ತೀರಿ ಹೋದಾಕೆಗೆ “ಮದುವೆ’ ಮಾಡಿಸುವಂತೆ ತಿಳಿಸಲಾಯಿತು.

ಪ್ರೇತ ವರ ನಿಗಾಗಿ ಹುಡುಕಾಟ
“ಉದಯವಾಣಿ’ ಜತೆಗೆ ಮಾತನಾಡಿದ ಪುತ್ತೂರು ನಿವಾಸಿ, “ಮದುವೆ ಮಾಡಿಸಲು ನಿರ್ಧಾರ ಮಾಡಿದ ನಾವು ಪ್ರೇತ ವರನ ಹುಡುಕಾಟಕ್ಕೆ ಇಳಿದೆವು. ಕುಟುಂಬ, ಸಂಬಂಧಿಕರು, ಆತ್ಮೀಯರಲ್ಲಿ ವಿಚಾರಿಸಿದೆವು. ಯಾರಲ್ಲೂ ಮಾಹಿತಿ ಇಲ್ಲ. ಈ ವಿಷಯವನ್ನು ಕೇಳುವ ತಾಳ್ಮೆಯೂ ಇರಲಿಲ್ಲ. “ಹೇಳುತ್ತೇನೆ’ ಎಂಬು
ವುದು ಬಿಟ್ಟರೆ ಬೇರೇನೂ ಉತ್ತರ ಸಿಕ್ಕಿರಲಿಲ್ಲ. ಹಾಗಾಗಿ ಬೇಸರವಾಯಿತು. ಕೊನೆಯ ಪ್ರಯತ್ನವಾಗಿ ಪತ್ರಿಕೆಯಲ್ಲಿ ಕೋರಿಕೆ ಹಾಕಿದ್ದೆ. ಇದು ನಮ್ಮ ಮನೆಯ ನೆಮ್ಮದಿಯ ವಿಷಯ ವಾದ್ದರಿಂದ ಹಾಕಿದೆ’ ಎನ್ನುತ್ತಾರೆ.

ಮದುವೆ ಬಹುತೇಕ ನಿಗದಿ !
“ದಿನಕ್ಕೆ 50 ಕ್ಕಿಂತಲೂ ಅಧಿಕ ಕರೆ ಬಂದಿದೆ. ಅದರಲ್ಲಿ ನಮ್ಮ ಪ್ರೇತ ಮದುವೆಗೆ ಸಂಬಂಧಿಸಿ ಸುಮಾರು 20ಕ್ಕೂ ಅಧಿಕ ಸಂಪರ್ಕ ಸಂಖ್ಯೆಗಳನ್ನು ಗೊತ್ತು ಮಾಡಿ ಮಾತುಕತೆ ನಡೆಸಿ ಮದುವೆ ನಡೆಸಲು ತೀರ್ಮಾನಿಸಲಾಗಿದೆ. ಕೆಲವರು ಪೂರಕವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಅಪಹಾಸ್ಯ ಮಾಡಿದರು’ ಎಂದರು ಅವರು.

ತುಳುನಾಡಿನ ನಂಬಿಕೆ ಮೇಲಿನ ಆಚರಣೆ
ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆಯ ಮೊದಲೇ ನಿಧನ ಹೊಂದಿದರೆ ಅವರಿಗೆ ಮೋಕ್ಷ ಇಲ್ಲ ಎಂಬ ನಂಬಿಕೆ ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ಮದುವೆ ಆಗದೆ ಸತ್ತವರ ಮೋಕ್ಷಕ್ಕಾಗಿ ಕುಲೆ (ಪ್ರೇತ) ಮದುವೆ ಅಂತ ಮಾಡಿಸಲಾಗುತ್ತದೆ. ಪ್ರಸಕ್ತ ಸಮಾಜದಲ್ಲಿ ಹುಡುಗ-ಹುಡುಗಿಗೆ ಯಾವ ಕ್ರಮದಲ್ಲಿ ಮದುವೆ ಮಾಡಲಾಗುತ್ತದೋ ಅದೇ ಕ್ರಮದಲ್ಲಿ ಕುಲೆ ಮದುವೆಯೂ ನಡೆಯುತ್ತದೆ. ಹುಡುಗಿ ನೋಡುವುದು, ಹುಡುಗನ ಮನೆಗೆ ಹೋಗುವುದು, ನಿಶ್ಚಿತಾರ್ಥ, ಜವಳಿ ತೆಗೆಯುವುದು, ಮದುವೆ ಸಹಿತ ಎಲ್ಲ ವಿಧಿವಿಧಾನಗಳನ್ನು ಗೌರವದಿಂದ ಮಾಡಲಾಗುತ್ತದೆ. ತುಳುನಾಡಿನಲ್ಲಿ ಇದು ನಂಬಿಕೆಯ ಮೇಲೆ ಆಗುತ್ತಿರುವ ಆಚರಣೆ. ಜೀವನದಲ್ಲಿ ಮದುವೆ ಮುಖ್ಯ ಎಂಬ ಮನೋಧರ್ಮವೂ ಇಲ್ಲಿದೆ. ಜೀವಂತ ಇರುವಾಗ ಆಗದೇ ಇರುವ ಮದುವೆ ಕ್ರಮವನ್ನು ಜೀವಂತ ಇರುವ ಕುಟುಂಬ ವರ್ಗ ಸೇರಿ ನಡೆಸಲಾಗುತ್ತದೆ. ಹಾಗೆಂದು, ಎಲ್ಲ ಕುಟುಂಬಗಳಲ್ಲಿ ಇದು ಚಾಲ್ತಿಯಲ್ಲಿಲ್ಲ.
-ಪ್ರೊ| ಕೆ.ಚಿನ್ನಪ್ಪ ಗೌಡ,
ಜಾನಪದ ವಿದ್ವಾಂಸರು

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next