ಥಾಣೆ: ಘೋಡ್‌ಬಂದರ್ ರೋಡ್ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್ ಇದರ ದಶಮಾನೋತ್ಸವ ಸಂಭ್ರಮದ ಮಹಾ ಪೂಜೆಯು ಡಿ. 6ರಂದು ಪ್ರಾರಂಭಗೊಂಡು, ಡಿ. 9ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಥಾಣೆ ಪಶ್ಚಿಮದ ಘೋಡ್‌ಬಂದರ್ ರೋಡ್ ಆನಂದ ನಗರದ, ಮುಚ್ಚಲಾ ಕಾಲೇಜಿನ ಸಮೀಪದಲ್ಲಿರುವ ಟಿ. ಎಂ. ಸಿ. ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
ಡಿ. 9ರಂದು ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್ ಇದರ 10ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ನೆರವೇರಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 5ರಿಂದ ಶರಣು ಘೋಷ, ಗಣಹೋಮ, ಬೆಳಗ್ಗೆ 8ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಪೂರ್ವಾಹ್ನ 10ರಿಂದ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಘೋಡ್‌ಬಂದರ್ ರೋಡ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ 1ರಿಂದ ಪ್ರಭಾಕರ ಗುರುಸ್ವಾಮಿ, ಅಶೋಕ್ ಗುರುಸ್ವಾಮಿ, ಶಿಬಿರದ ಸುರೇಂದ್ರ ಕೋಟ್ಯಾನ್ ಮತ್ತು ಶಿಬಿರದ ಮುಂದಾಳು ಪ್ರಶಾಂತ್ ನಾಯಕ್ ಗುರುಸ್ವಾಮಿ ಮಾಣಿಪಾಡಿ ಅವರು ಮಹಾಕರ್ಪೂರಾರತಿಗೈದರು. ಹೂವು ಗಳಿಂದ ಅಲಂಕೃತಗೊಂಡ ಅಯ್ಯಪ್ಪ ಸ್ವಾಮಿಯ ಪ್ರತಿಬಿಂಬದ ಬಲಬದಿಯಲ್ಲಿ ಶ್ರೀ ಕಟೀಲು ಭ್ರಮರಾಂಬಿಕೆ, ಎಡಬದಿಯಲ್ಲಿ ಶ್ರೀ ಗಣಪತಿ ದೇವರ ಪ್ರತಿಬಿಂಬಕ್ಕೆ ಅಯ್ಯಪ್ಪ ವ್ರತಧಾರಿಗಳಿಂದ ವಿಶೇಷ ಪೂಜೆ ನಡೆಯಿತು.
ಪೂಜಾ ಕಾರ್ಯಕ್ರಮಗಳಲ್ಲಿ ಥಾಣೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್ ಲೆಲೆ, ಘೋಡ್‌ಬಂದರ್‌ರೋಡ್ ಕನ್ನಡ ಅಸೋಸಿಯೇಶನ್ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಥಾಣೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಕುಶಲ್ ಭಂಡಾರಿ ಮತ್ತು ಇತರ ಪದಾಧಿಕಾರಿಗಳು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಥಾಣೆ, ಕನ್ನಡ ಸಂಘ ಬಾಲ್ಕೂಮ್, ಯಕ್ಷವೈಭವ ಮೀರಾರೋಡ್, ಕಲ್ವಾ ಫ್ರೆಂಡ್ಸ್, ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಸಮಿತಿ, ಶ್ರೀ ಶಕ್ತಿ ಮಹಿಳಾ ಮಂಡಳಿ ಥಾಣೆ, ನವೋದಯ ಕನ್ನಡ ಸೇವಾ ಸಂಘ ಥಾಣೆ, ಕನ್ನಡ ಸಂಘ ವರ್ತಕ್‌ನಗರ, ಹೊಟೇಲ್ ಓನರ್ ಅಸೋಸಿಯೇಶನ್ ಥಾಣೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ತುಳು-ಕನ್ನಡಿಗರು ಶ್ರೀ ಅಯ್ಯಪ್ಪ ದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು.
ಶಿಬಿರದ ಹರೀಶ್ ಸಾಲ್ಯಾನ್, ರವಿ ಕೋಟ್ಯಾನ್ ಅವರ ಸೇವಾರ್ಥಕವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು. ಅಪರಾಹ್ನ 2ರಿಂದ ಭಕ್ತಿ ಶೃಂಗಾರ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 5 ರಿಂದ ರಾತ್ರಿ 7ರ ವರೆಗೆ ನೃತ್ಯ ಕಲಾವಿದೆ ಅನುಪಮಾ ರಾವ್ ಅವರ ನಿರ್ದೇಶನದಲ್ಲಿ ಮಣಿಕಂಠ ಮಹಿಮೆ ನೃತ್ಯ ರೂಪಕ, ರಾತ್ರಿ 7.30ರಿಂದ ರಾತ್ರಿ 9.30 ರವರೆಗೆ ರಾಜೇಶ್ ಆಚಾರ್ಯ ರಚಿಸಿ, ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್ ಥಾಣೆ ಇದರ ಕಲಾವಿದರುಗಳಿಂದ ಆಲ್ ಎನ್ನಾಲ್ ತುಳು ನಾಟಕ ಪ್ರದರ್ಶನಗೊಂಡಿತು.
ದಶಮಾನೋತ್ಸವದ ಅಂಗವಾಗಿ ಡಿ. 6 ರಂದು ಸಂಜೆ 6ರಿಂದ ರಾತ್ರಿ 9ರ ವರೆಗೆ ಮರಾಠಿ ಹಾಗೂ ಹಿಂದಿ ಭಜನಾ ಕಾರ್ಯಕ್ರಮವು ಗಾಯಕ ಗಣೇಶ್ ಎರ್ಮಾಳ್ ಮತ್ತು ತಂಡದವರಿಂದ ನಡೆಯಿತು. ಡಿ. 7 ರಂದು ಸಂಜೆ 6 ರಿಂದ ರಾತ್ರಿ 10ರ ವರೆಗೆ ಜೈ ಅಂಬಾ ಮಾ ಪೂಜೆ ಮತ್ತು ಗರ್ಭಾ ನೃತ್ಯವನ್ನು ಆಯೋಜಿಸಲಾಗಿತ್ತು. ಡಿ. 8ರಂದು ಸಂಜೆ 6.30ರಿಂದ ರಾತ್ರಿ 10ರ ವರೆಗೆ ಮಹಾವೀರ ಪ್ರಸಾದ್ ಅಗರ್‌ವಾಲ್ ಅವರ ಮುಂದಾಳತ್ವದಲ್ಲಿ ಮಾತಾಕೀ ಚೌಕಿ ಕಾರ್ಯಕ್ರಮ ನೆರವೇರಿತು.
ಗುರುಸ್ವಾಮಿ ಪ್ರಶಾಂತ್ ನಾಯಕ್ ಮಾಣಿಪ್ಪಾಡಿ ಅವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ನೆರವೇರಿದ್ದು, ಅಯ್ಯಪ್ಪ ಭಕ್ತರು ಹರೀಶ್ ಸಾಲ್ಯಾನ್, ವಸಂತ್ ಸಾಲ್ಯಾನ್, ರವಿ ಕೋಟ್ಯಾನ್, ಸೀತಾರಾಮ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕರುಣಾಕರ ಶೆಟ್ಟಿ, ಜಯರಾಮ ನಾಯಕ್ ಗುರುಸ್ವಾಮಿ, ಸುರೇಂದ್ರ ಕೋಟ್ಯಾನ್ ಗುರುಸ್ವಾಮಿ, ಅಶೋಕ್ ಸ್ವಾಮಿ, ವಿಶ್ವನಾಥ ಸ್ವಾಮಿ ಅವರು ವಿಶೇಷವಾಗಿ ಸಹಕರಿಸಿದರು.
ಚಿತ್ರ-ವರದಿ:ರಮೇಶ್ ಉದ್ಯಾವರ