ಹೈದರಾಬಾದ್: ಹೈದರಾಬಾದ್ ನಗರ ಪಾಲಿಕೆಗಳಿಗೆ ನಡೆದ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಫಲಿತಾಂಶ ಸಿಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಈ ಬಾರಿ ಬಿಜೆಪಿ ನಿಜಾಮರ ನಾಡಿನ ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದೆ. ಬಿಜೆಪಿ ಘಟಾನುಘಟಿ ನಾಯಕರು ಹೈದರಾಬಾದ್ ನಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಜ್ಯದ ಸಚಿವರಾದ ಸುಧಾಕರ್, ಈಶ್ವರಪ್ಪ ಸೇರಿದಂತೆ ಹಲವರು ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಹೀಗಾಗಿ ಹೈದರಾಬಾದ್ ನಗರ ಪಾಲಿಕೆ ಕಣ ಬಿಜೆಪಿ-ಟಿಆರ್ ಎಸ್ ಗೆ ಪ್ರತಿಷ್ಠೆಯ ಕಣವಾಗಿದೆ.
ಇದನ್ನೂ ಓದಿ:ಹುಷಾರ್, ನಕಲಿ ಲಸಿಕೆ ಬರುತ್ತೆ! “ಇಂಟರ್‌ಪೋಲ್’ ಎಚ್ಚರಿಕೆ ರವಾನೆ
ಇದೇ ವೇಳೆ, ಗುರುವಾರ ಮತಗಟ್ಟೆ ಸಮೀಕ್ಷೆಯ ವರದಿಗಳು ಹೊರಬಂದಿದ್ದು, ಟಿಆರ್‌ಎಸ್ ಗೆಲುವು ಖಚಿತ ಎಂದು ಹೇಳಿವೆ. ಆಡಳಿತಾರೂಢ ಟಿಆರ್‌ಎಸ್‌ಗೆ 75-78 ಸೀಟುಗಳು ಲಭ್ಯವಾದರೆ, ಒವೈಸಿ ಅವರ ಎಐಎಂಐಎಂ 38-42 ಸ್ಥಾನಗಳಲ್ಲಿ ಜಯ ಗಳಿಸಲಿದೆ.
ವಿಶೇಷವೆಂದರೆ, ಬಿಜೆಪಿ 25-35 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇ.31.21ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ ಕೇವಲ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.