ಪಿರಿಯಾಪಟ್ಟಣ: ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡು ಘೇರಾವ್ ಹಾಕಿದ ಘಟನೆ ಶುಕ್ರವಾರ ನಡೆಯಿತು.
ಇಂದು ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸೆ.26 ರಂದು ಹರಾಜು ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದರೂ ಸಂಸದ ಪ್ರತಾಪ್ ಸಿಂಹ ಶುಕ್ರವಾರ ಬೆಳಗ್ಗೆ 7.30ಕ್ಕೆ ಹರಾಜು ಪ್ರಕ್ರಿಯೆ ಆರಂಭಿಸುವಂತೆ ತಂಬಾಕು ಮಂಡಳಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಂತೆ ಅಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ತರಾತುರಿಯಲ್ಲಿ ಆರಂಭಿಸಿದರು. ಆರಂಭದಲ್ಲಿ ರೂ.185 ಕ್ಕೆ ನಿಗದಿ ಮಾಡಿ ನಂತರದ ಬೇಲುಗಳಿಗೆ ರೂ.182-183 ನಿಗದಿ ಮಾಡಿದಾಗ ಕೋಪಗೊಂಡ ರೈತರು ಸಂಸದ ಮತ್ತು ತಂಬಾಕು ಹರಾಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರ ವಿರೋಧದಿಂದ ಕುಪಿತಗೊಂಡ ಸಂಸದರು ಯಾವುದೇ ಪ್ರತಿಕ್ರಿಯೆ ನೀಡದೆ ಹರಾಜು ಪ್ರಕ್ರಿಯೆಯಿಂದ ಹೊರ ನಡೆದರು.
ನಂತರ ಮಾರುಕಟ್ಟೆಯ ಹೊರಭಾಗದಲ್ಲಿ ಸಂಸದರನ್ನು ಸುತ್ತುವರಿದ ರೈತರು, ತರಾತುರಿ ಹರಾಜು ಪ್ರಕ್ರಿಯೆ ಏಕೆ. ರೈತರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಕೋಪದಿಂದ ಉತ್ತರಿಸಿದ ಸಿಂಹ, ಇಂದು ಶುಭ ಶುಕ್ರವಾರ ಅದಕ್ಕಾಗಿ ಇಂದೇ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದರು. ಸಂಸದರ ಈ ಉತ್ತರಕ್ಕೆ ಮತ್ತಷ್ಟು ಕುಪಿತಗೊಂಡ ರೈತರು, ವೈಜ್ಞಾನಿಕ ಯುಗದಲ್ಲೂ ನಿಮಗೆ ಇಂಥ ಮೂಡನಂಭಿಕೆಗಳು ಬೇಕೆ, ನಿಮ್ಮ ಮೂಡನಂಬಿಕೆಯಿಂದ ರೈತರಿಗೆ ಹೊಟ್ಟೆ ತುಂಬುವುದಿಲ್ಲ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಗುಂಟೂರು ಶಾಸಕ ಮುಸ್ತಫಾ, ಮಾಜಿ ಸಂಸದ ವಿಜಯಶಂಕರ್, ತಂಬಾಕು ಮಂಡಳಿಯ ಚೇರ್ಮೆನ್ ರಘುನಾಥ್ ಬಾಬು, ಮೈಮುಲ್ ಅಧ್ಯಕ್ಷ ಪ್ರಸನ್ನ, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ, ಹರಾಜು ಅಧೀಕ್ಷಕ ಅಮಲ್ ಡಿ. ಶಾಮ್, ಪ್ರಭಾಕರನ್, ಸಿದ್ದರಾಜು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್‌ರಾಜೇ ಅರಸ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಸಿ.ವೀರಭಧ್ರ, ಬೆಮ್ಮತ್ತಿಚಂದ್ರು, ಮುಖಂಡರಾದ ಕೌಲನಹಳ್ಳಿ ಸೋಮಶೇಖರ್, ಆರ್.ಟಿ. ಸತೀಶ್, ಬಿ.ವಿ.ಜವರೇಗೌಡ, ಚೌತಿಶಂಕರ್, ಕಗ್ಗುಂಡಿ ಶಿವರಾಂ, ಈಚೂರು ಲೋಕೇಶ್, ಪ್ರಕಾಶ್‌ರಾಜ್ ಅರಸ್ ಹಾಜರಿದ್ದರು.