Advertisement

Tirupati ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ತುಪ್ಪ ಗುಣಮಟ್ಟ ಪರಿಶೀಲನೆ ಆರಂಭ

12:26 AM Sep 24, 2024 | Team Udayavani |

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಮಲ ತಿರುಪತಿ ದೇಗುಲದಲ್ಲಿ ಲಡ್ಡು ತಯಾರಿಕೆಗೆ ದನ ಸಹಿತ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಸರಕಾರವು ರಾಜ್ಯಾದ್ಯಂತ ತುಪ್ಪದ ವಿವಿಧ ಬ್ರ್ಯಾಂಡ್‌ಗಳ ಮಾದರಿಯ ಗುಣಮಟ್ಟ ಪರಿಶೀಲನೆಗೆ ಸದ್ದಿಲ್ಲದೆ ಮುಂದಾಗಿದೆ.

Advertisement

ಇತ್ತೀಚೆಗೆ ರಾಜ್ಯದ ಧಾರ್ಮಿಕ ಇಲಾಖೆಯ ವ್ಯಾಪ್ತಿಗೊಳಪಡುವ ದೇವಾಲಯಗಳಲ್ಲಿ ವಿವಿಧ ಸೇವೆಗಳಿಗೆ, ದೀಪ ಹಾಗೂ ಎಲ್ಲ ವಿಧವಾದ ಪ್ರಸಾದ ತಯಾರಿಗೆ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು.

ಈಗ ರಾಜ್ಯ ಸರಕಾರವು, ರಾಜ್ಯದ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಇಲಾಖೆ ಮೂಲಕ ರಾಜ್ಯಾದ್ಯಂತ ವಿವಿಧ ಬ್ರ್ಯಾಂಡ್‌ಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿರುವ ತುಪ್ಪಗಳ ಸಮೀಕ್ಷೆ ನಡೆಸಿ, ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸುವಂತೆ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಜಿಲ್ಲಾ ಅಂಕಿತಾಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಮಾಲ್‌, ದಿನಸಿ ಅಂಗಡಿಗಳ ಮೇಲೆ ದಾಳಿ ನಡೆಸಿ ಆಹಾರ ಸುರಕ್ಷೆ ಅಧಿಕಾರಿಗಳು ತುಪ್ಪದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಜಿಲ್ಲೆಗೆ 5 ಬ್ರ್ಯಾಂಡ್‌ ಮಾದರಿ ಸಂಗ್ರಹ
ರಾಜ್ಯದ ಎಲ್ಲ ಜಿಲ್ಲಾ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿಗಳು ಪ್ರತೀ ಜಿಲ್ಲೆಗೆ ತಲಾ 5ರಂತೆ ಬ್ರ್ಯಾಂಡ್‌ಗಳ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ ಅವುಗಳ ವಿಶ್ಲೇಷಣೆಗಾಗಿ ತಮ್ಮ ವಿಭಾಗಕ್ಕೆ ಸಂಬಂಧಿಸಿದ ಸರಕಾರಿ ಆಹಾರ ಪ್ರಯೋಗಾಲಯ (ರಾಜ್ಯ ವಿಭಾಗೀಯ ಆಹಾರ ಪ್ರಯೋಗಾಲಯ)ಗಳಿಗೆ ಗುಣಮಟ್ಟದ ವಿಶ್ಲೇಷಣೆಗಾಗಿ ಎರಡು ದಿನಗಳ ಒಳಗೆ ಕಳುಹಿಸಿ ಕೊಡುವಂತೆ ಸೂಚಿಸಲಾಗಿದೆ. ಅಲ್ಲದೆ ಆಹಾರ ಮಾದರಿಯ ಸಂಗ್ರಹಣೆಯ ವಿವರಗಳನ್ನು ಪ್ರಯೋಗಾಲಯದ ಹೆಸರಿನೊಂದಿಗೆ foscoris (Food Safety Compliance through Regular Inspections and Sampling) ಆ್ಯಪ್‌ನಲ್ಲಿ ದಾಖಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ರಾಜ್ಯ ಸರಕಾರವು ಶುದ್ಧವಾದ ನಂದಿನಿ ತುಪ್ಪ ಹೊರತುಪಡಿಸಿ ಉಳಿದಂತೆ ಮಾರುಕಟ್ಟೆ ಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಹೆಸರಲ್ಲಿ ಮಾರಾಟವಾಗುತ್ತಿರುವ ತುಪ್ಪದ ಮಾದರಿ ಕಳುಹಿಸುವಂತೆ ಆದೇಶಿಸಿದೆ.

Advertisement

ರಾಜ್ಯ ಸರಕಾರವು ನಂದಿನಿ ಹೊರತುಪಡಿಸಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿರುವ ತಲಾ 5 ವಿವಿಧ ಬ್ರ್ಯಾಂಡ್‌ಗಳ ತುಪ್ಪವನ್ನು ಸರ್ವೇ ಮಾಡಿ, ಮಾದರಿಗಳನ್ನು ಸಂಗ್ರಹಿಸಿ ಅವುಗಳ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸಿದೆ.
-ಜಿ. ಹರೀಶ್‌, ಆಹಾರ ಸುರಕ್ಷೆ ಅಂಕಿತಾಧಿಕಾರಿಗಳು, ಚಿಕ್ಕಬಳ್ಳಾಪುರ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next