ಕಲಬರಗಿ: ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಪತ್ರ ವ್ಯವಹಾರ ಮತ್ತು ನಿರ್ಲಕ್ಷ್ಯದಿಂದಾಗಿ ಸರಕಾರಿ ಪ್ರೌಢ ಶಾಲೆಯ ಮಕ್ಕಳ ಕಲಿಕೆ ಹಳ್ಳ ಹಿಡಿದಿದೆ. ಅಲ್ಲದೆ, ತಾತ್ಕಾಲಿಕ ಶಾಲೆಯಲ್ಲಿ ಘತ್ತರಗಿ ಭಾಗ್ಯವಂತಿ ದೇವತೆ ದರ್ಶನಕ್ಕೆ ಬರುವ ಭಕ್ತರ ದಂಡಿನಿಂದಾಗಿ ಶಾಲೆಯ ಪರಿಸರ ಮಾಯವಾಗಿದೆ. ಇದರಿಂದ ಮಕ್ಕಳು ಹೈರಾಣಾಗುತ್ತಿದ್ದಾರೆ.
ಇದಿಷ್ಟು ಕಥೆ ಅಫಜಲಪುರ ತಾಲೂಕಿನ ಘತ್ತರಗಿಯ ಸರಕಾರಿ ಪ್ರೌಢ ಶಾಲೆಯದ್ದು. ಈ ಶಾಲೆಯ ಕಟ್ಟಡ ಬಹಳ ಹಳೆಯದು. ಮಳೆಗಾಲದಲ್ಲಿ ಸೋರಿ ನೀರಿನಿಂದ ತೊಯ್ದು ತೊಪ್ಪೆ ಎದ್ದಿದೆ. ಆದ್ದರಿಂದ ಮಕ್ಕಳ ಪಾಠಕ್ಕೆ ತೊಂದರೆ ಆಗದಂತೆ ಯಾತ್ರಿಕ ನಿವಾಸದ ಕೋಣೆಗಳಲ್ಲಿ ತಾತ್ಕಾಲಿಕ ಶಾಲೆಯನ್ನು ಆರಂಭಿಸಲಾಗಿದೆ. ಮಕ್ಕಳ ದುರಾದೃಷ್ಟವೆಂದರೆ ಅಲ್ಲಿ ಭಕ್ತರ ಕಾಟ ಶುರುವಾಗಿದೆ.
ಪ್ರತಿ ದಿನಾಲು ಘತ್ತರಗಿ ಭಾಗ್ಯವಂತಿ ದೇವರ ದರ್ಶನಕ್ಕೆ ಬರುವ ಭಕ್ತರು ಯಾತ್ರಿಕ ನಿವಾಸದಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲಿಯೇ ಅಡುಗೆ, ಊಟ ಮತ್ತು ಕಾರ್ಯಕ್ರಮ ಮಾಡುತ್ತಾರೆ. ಇದರಿಂದ ಮಕ್ಕಳಿಗೆ ಪಾಠಗಳನ್ನು ಮಾಡುವುದು ಶಿಕ್ಷಕರಿಗೂ ಸಾಧ್ಯವಾಗುತ್ತಿಲ್ಲ. ಕೇಳಲು ಮಕ್ಕಳಿಗೂ ಆಗುತ್ತಿಲ್ಲ. ಅಷ್ಟು ಗಲಾಟೆ ಎಂದರೆ ಗಲಾಟೆ.
ಕಿವಿಗೊಡದ ಜಿಲ್ಲಾಡಳಿತ: ಈ ಮಧ್ಯೆ ಶಾಲೆಯ ಸಮಸ್ಯೆ, ಯಾತ್ರಿಕ ನಿವಾಸ ಸಮಸ್ಯೆ ಕುರಿತು ನಮ್ಮ ಗ್ರಾಪಂ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆ ಪರಿಸ್ಥಿತಿ ಹೀಗಾಗಿದೆ ಎಂದು ಘತ್ತರಗಿ ಗ್ರಾಪಂ ಸೆ.12 ಮತ್ತು 19 ರಂದು ಎರಡು ಬಾರಿ ಪತ್ರ ಬರೆದಿದೆ. ಅಲ್ಲದೆ, ಶಿಕ್ಷಣ ಇಲಾಖೆಯ ತಾಲೂಕು (ಅಫಜಲಪುರ) ಅಧಿಕಾರಿಗಳನ್ನು, ಶಿಕ್ಷಣ ಇಲಾಖೆಯ ಅಪರ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಆದರೂ ಜಿಲ್ಲಾಡಳಿತವಾಗಲಿ, ಅಪರ ಆಯುಕ್ತರಾಗಲಿ ಮಕ್ಕಳ ಕುರಿತು ಕಾಳಜಿ ತೋರಲು ಸುತ್ತರಾಮ್ ತಯಾರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಪಾಠಕ್ಕೆ ತೊಂದರೆಯಾಗುತ್ತಿದೆ.
ನಮ್ಮ ಮಕ್ಕಳ ಈ ಬಾರಿ ಮೆಟ್ರಿಕ್ ಪರೀಕ್ಷೆ ಬರೆಯಬೇಕು. ಶಾಲೆಯಲ್ಲಿ ವ್ಯವಸ್ಥೆ ಸರಿ ಇಲ್ಲದೆ ಹೋದರೆ, ಪಾಠಗಳು ನಡೆಯದೇ ಇದ್ದರೆ ನಮ್ಮ ಮಕ್ಕಳ ಗತಿ ಏನು ಎನ್ನುವುದು ಪಾಲಕರು ಗೋಳಾಗಿದೆ.ಸರಕಾರವೇ ಕುಳಿತು ಮಕ್ಕಳ ಶಾಲೆಯ ದೈನಂದಿನ ಪಾಠಗಳು, ಆಟಗಳಿಗೆ ಕಡಿವಾಣ ಹಾಕುವುದೆಂದರೆ ಏನರ್ಥ. ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ ಅಪರ ಆಯುಕ್ತರು ನಮ್ಮ ಸಮಸ್ಯೆ ಕೇಳುತ್ತಲೇ ಇಲ್ಲ. ಮಕ್ಕಳಿಗೆ ಯಾತ್ರಿಕ್ ನಿವಾಸದಲ್ಲಿ ಸರಿಯಾದ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ ಮಕ್ಕಳ ಗತಿ ಏನು ಎಂದು ಪಾಲಕರು ಗೋಳಾಡುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿಸುವವರು ಯಾರು. ಸೆ.17ರಂದು ಮುಖ್ಯಮಂತ್ರಿಗಳ ಭೇಟಿ ಮಾಡಬೇಕಾಗುತ್ತದೆ
.- ವಿಠ್ಠಲ ನಾಟೀಕಾರ ಗ್ರಾಪಂ ಅಧ್ಯಕ್ಷರು.
-ಸೂರ್ಯಕಾಂತ ಎಂ.ಜಮಾದಾರ