ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿಯ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಸೋಮವಾರ ಎಣಿಕೆ ಮಾಡ ಲಾಯಿತು. ಹುಂಡಿಯಲ್ಲಿ ಒಟ್ಟು 55,18,188 ರೂ. ಮೊತ್ತ ಸಂಗ್ರಹವಾಗಿದೆ. ಈ ಬಾರಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಮಹಿಳಾ ಭಕ್ತರ ದಂಡು ಘಾಟಿಗೆ ಆಗಮಿಸುತ್ತಿರುವುದರಿಂದ ಹುಂಡಿಯಲ್ಲಿ ಬರೋಬ್ಬರಿ ಅರ್ಧ ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ.
55,18,188 ರೂ. ನಗದು ಸೇರಿದಂತೆ 1 ಕೆ.ಜಿ 450 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ. ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿ ಸಿದ್ದರು.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಜಿಲ್ಲಾ ಸಹಾಯಕ ಆಯುಕ್ತೆ ಜಿ.ಜೆ. ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಸಿಬ್ಬಂದಿ ನಂಜಪ್ಪ ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.
42 ದಿನಗಳಲ್ಲಿ 55 ಲಕ್ಷ ರೂ. ಸಂಗ್ರಹ: ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಜೂ.5ರಂದು ಎಣಿಕೆ ಕಾರ್ಯ ನಡೆದಿದ್ದು, ಅಂದು ಮೂರು ತಿಂಗಳ ಹಿಂದೆ ಸಂಗ್ರಹವಾಗಿದ್ದ ಹುಂಡಿಯ ಮೊತ್ತವನ್ನು ಎಣಿಕೆ ಮಾಡಲಾಗಿತ್ತು. ಆದರೆ ಸೋಮವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 42 ದಿನಗಳಲ್ಲಿ 55 ಲಕ್ಷ ರೂ ಸಂಗ್ರಹವಾಗಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಂದಾಗಿ ದೇವಾಲಯಕ್ಕೆ ಮಹಿಳಾ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಹುಂಡಿ ಮೊತ್ತ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.