Advertisement
ಕೃಷಿ ಚಟುವಟಿಕೆ ಹಿನ್ನಡೆ ಆಗುತ್ತಿರುವ ಇಂದಿನ ದಿನಗಳಲ್ಲಿ ಟ್ರ್ಯಾಕ್ಟರ್ ಬೆಲೆಗೆ ಎತ್ತುಗಳು ಮಾರಾಟವಾ ಗುತ್ತಿರುವುದು ಹುಬ್ಬೇರುವಂತೆ ಮಾಡಿವೆ. ಒಂದು ಕಡೆ ಕೃಷಿಗಾಗಿ ರಾಸು ಖರೀದಿಸುತ್ತಿದ್ದರೆ, ಇನ್ನೊಂದೆಡೆ ಘನತೆಗಾಗಿ ಅಲಂಕಾರದ ಎತ್ತುಗಳ ವ್ಯಾಪಾರ ನಡೆಯುತ್ತಿದೆ. ಈ ಬಾರಿ ಬರಗಾಲವಿರುವುದರಿಂದ ಉತ್ತರ ಕರ್ನಾಟಕದ ರೈತರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದು ವ್ಯಾಪಾರ ಅಷ್ಟೊಂದು ಬಿರುಸಾಗಿಲ್ಲ.
Related Articles
Advertisement
ಸುಮಾರು 10 ವರ್ಷಗಳಿಂದ ಘಾಟಿ ದನಗಳ ಜಾತ್ರೆಗೆ ಬರುತ್ತಿದ್ದೇವೆ. ಜಾತ್ರೆಯಲ್ಲಿ ಸಾಕಷ್ಟು ರಾಸು ಬಂದಿದ್ದು ನಾವು 2.5 ಲಕ್ಷ ರೂ., ಬೆಲೆಯ ರಾಸು ಖರೀದಿಸಿದ್ದೇವೆ. ಬೆಲೆ ಕೊಂಚ ಹೆಚ್ಚಾಯಿತು, ಅನ್ನಿಸಿದರೂ ಕೃಷಿಗೆ ರಾಸುಗಳು ಅಗತ್ಯವಿದೆ ಎನ್ನುತ್ತಾರೆ ಹಾಸನದ ರೈತ ಶ್ರೀನಿವಾಸ್. ಜ.16ರಂದು ಶ್ರೀಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ. ಆದರೆ, ದನಗಳ ಜಾತ್ರೆ ಇನ್ನೂ 3-4 ದಿನ ಮಾತ್ರ ಇರುತ್ತದೆ. ದನಗಳ ಜಾತ್ರೆಯ ಆನಂದವನ್ನು ಸವಿಯಲು ಜಾತ್ರೆಗೆ ಬೇಗ ಆಗಮಿಸುವುದು ಒಳಿತು.
ಕ್ರೇಜ್‌ಗಾಗಿ ರಾಸು ಖರೀದಿ: ಕೆಂಪಣ್ಣ :
ದೇವನಹಳ್ಳಿ ತಾಲೂಕಿನ ವಿಜಯಪುರದ ಮರವೆ ನಾರಾಯಣಪ್ಪ ಅವರ ಕುಟುಂಬದವರು ಬೃಹತ್ ಪೆಂಡಾಲ್ ಹಾಕಿ ಮಾರಾಟಕ್ಕೆ ಇಟ್ಟಿರುವ ಹಳ್ಳಿಕಾರ್ ತಳಿಯ ರಾಸುಗಳ ಬೆಲೆ ಬರೋಬ್ಬರಿ 9 ಲಕ್ಷ ರೂ., ಇದಕ್ಕೆ ಟಗರು ಉಚಿತ. ಇವರ ಬೇರೆ ರಾಸುಗಳು 6.5 ಲಕ್ಷ ರೂ.,ಗಳವರೆಗೆ ಇವೆ. 2.5 ಲಕ್ಷ ರೂ.ನಿಂದ 3.5ಲಕ್ಷದವರೆಗಿನ ರಾಸುಗಳೂ ಮಾರಾಟವಾಗಿವೆ. ಎತ್ತುಗಳಿಗೆ ಮೇವಿನೊಂದಿಗೆ ವಿವಿಧ ಬಗೆಯ ಧಾನ್ಯಗಳು ಸೇರಿದಂತೆ ಮೇವು ನೀಡಿ ಬಹಳ ಜೋಪಾನವಾಗಿ ಸಾಕುತ್ತೇವೆ. ಇದಕ್ಕಾಗಿ ದಿನಕ್ಕೆ ಸಾವಿರಾರು ರೂ., ಖರ್ಚು ಮಾಡುತ್ತೇವೆ. ಕ್ರೇಜ್ ಇರುವವರು ಎಷ್ಟೇ ದರ ವಿದ್ದರೂ ರಾಸುಗಳನ್ನು ಖರೀದಿ ಸುತ್ತಾರೆ. ನಮ್ಮ ತಾತ ಹನುಮಂತಪ್ಪ ಅವರ ಕಾಲದಿಂದ ಅಂದರೆ ಸುಮಾರು 60 ವರ್ಷ ಗಳಿಂದಲೂ ಘಾಟಿ ಜಾತ್ರೆಗೆ ಬರುತ್ತಿದ್ದೇವೆ. ಕಡಿಮೆ ಆಗುತ್ತಿರುವ ದೇಸಿ ತಳಿ ಹಳ್ಳಿಕಾರ್ ಉಳಿಯಬೇಕಿದೆ ಎಂದು ಮರವೆ ನಾರಾಯಣಪ್ಪ ಅವರ ಮಗ ಕೆಂಪಣ್ಣ ತಿಳಿಸಿದ್ದಾರೆ.
ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮನ :
ಸಾಧಾರಣ ರಾಸು ಬೆಲೆ 60 ಸಾವಿರದಿಂದ 2.5ಲಕ್ಷ ರೂ.,ಗಳವರೆಗೂ ಇದೆ. ಬಳ್ಳಾರಿ, ರಾಯಚೂರು, ಉತ್ತರ ಕರ್ನಾಟಕ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಮತ್ತಿತರ ಜಿಲ್ಲೆಗಳ ರೈತರು ಹಾಗೂ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ರೈತರೂ ರಾಸುಗಳ ಖರೀದಿಗೆ ಆಗಮಿಸಿದ್ದಾರೆ. ಇನ್ನು ತಮಿಳುನಾಡಿನ ಸೇಲಂ, ಹೊಸೂರು, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಸೇರಿ ವಿವಿಧ ಕಡೆಗಳಿಂದಲೂ ರೈತರು ಬರುವ ನಿರೀಕ್ಷೆಯಿದೆ. ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಿಂದಲೂ ರಾಸುಗಳ ಜಾತ್ರೆ ನಡೆದಿರಲಿಲ್ಲ. 2022ರ ಡಿಸೆಂಬರ್‌ನಲ್ಲಿ ಚರ್ಮ ಗಂಟು ರೋಗ ರಾಸುಗಳನ್ನು ಕಾಡಿದ್ದರಿಂದ ಜಾತ್ರೆಯನ್ನು ನಿಷೇಧಿಸಲಾಗಿತ್ತು. ಅಲ್ಲದೇ, ರಥೋತ್ಸವ ಮಾತ್ರ ನಡೆದಿತ್ತು. ಆದರೆ ಈ ಬಾರಿ ಭಾರೀ ದನಗಳ ಜಾತ್ರೆ ಯಾವುದೇ ವಿಘ್ನವಿಲ್ಲದೇ ಆರಂಭವಾಗಿದೆ.
ದನಗಳ ಜಾತ್ರೆ ವಿಶೇಷತೆ ಏನೇನು? :
ರಾಸುಗಳ ಮಾರಾಟಗಾರರು, ಜಾತ್ರೆ ನೋಡಲು ಬರುವ ಜನಜಂಗುಳಿ. ಇದು ಘಾಟಿ ಸುಬ್ರಹ್ಮಣ್ಯ ಭಾರೀ ದನಗಳ ಜಾತ್ರೆಯ ವಿಶೇಷ. ಬಹುತೇಕ ರೈತರು ತಮ್ಮ ರಾಸುಗಳ ಮಾರಾಟಕ್ಕೂ ಮುನ್ನ ಹೂವುಗಳಿಂದ ಶೃಂಗರಿಸಿ ಮಂಗಳ ವಾದ್ಯಗಳೊಂದಿಗೆ ದೇವಾಲಯದವರೆಗೂ ಮೆರವಣಿಗೆಯಲ್ಲಿ ತೆರಳಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಜಾತ್ರೆಯಲ್ಲಿ ರಾಸುಗಳಿಗೆ ಕುಡಿವ ನೀರು, ವಿದ್ಯುತ್ ದೀಪ, ಪಶು ಇಲಾಖೆ ವತಿಯಿಂದ ತಾತ್ಕಾಲಿಕ ಪಶು ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಕೃಷಿ ಚಟುವಟಿಕೆಗೆ ಬೇಕಾಗುವ ಪರಿಕರಗಳ ಮಾರಾಟವೂ ಭರದಿಂದ ನಡೆಯುತ್ತಿದೆ. ಮೂಗುದಾರದ ಹಗ್ಗ, ಬಾರು ಗೋಲು, ರಾಸುಗಳ ಕೊರಳಿಗೆ ಕಟ್ಟುವ ಗೆಜ್ಜೆ, ಕಣದಲ್ಲಿ ಉಪಯೋಗಿಸುವ ಸಾಮಗ್ರಿ, ನೇಗಿಲು, ಗಾಡಿಗಳಿಗೆ ಬೇಕಾದ ಬಿಡಿಭಾಗ ಜಾತ್ರೆಯಲ್ಲಿ ದೊರೆಯುತ್ತಿವೆ.
-ಡಿ.ಶ್ರೀಕಾಂತ