ದೊಡ್ಡಬಳ್ಳಾಪುರ: “ಚರ್ಮಗಂಟು ರೋಗ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಗಾಣಿಕೆ ಮತ್ತು ಜಾನುವಾರುಗಳ ಜಾತ್ರೆ, ಸಂತೆ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದ್ದರೂ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ದನಗಳ ಜಾತ್ರೆ ಪ್ರಾರಂಭವಾಗಿದ್ದು ಸ್ವಯಂಪ್ರೇರಿತರಾಗಿ ರೈತರು ದನಗಳ ವ್ಯಾಪಾರಕ್ಕೆ ಸಜ್ಜು ಮಾಡಿ ಕೊಳ್ಳುತ್ತಿದ್ದಾರೆ. ಒಂದು ವೇಳೆ ಪೊಲೀಸರ ಮೂಲಕ ದನಗಳ ಜಾತ್ರೆ ನಿಲ್ಲಿಸಲು ಅಧಿಕಾರಿ ಗಳು ಕಠಿಣ ಕ್ರಮಕ್ಕೆ ಮುಂದಾದರೆ, ವಿಷ ಕುಡಿಯುತ್ತೇವೆ’ ಎಂದು ರೈತರು ಹೇಳುತ್ತಿದ್ದಾರೆ.
ಜ.23ರವರೆಗೆ ಜಾತ್ರೆ: ತಾಲೂಕಿನ ಘಾಟಿ ಕ್ಷೇತ್ರದಲ್ಲಿ ಪ್ರತಿವರ್ಷ ಭಾರೀ ದನಗಳ ಜಾತ್ರೆ ನಡೆಯುತ್ತದೆ. ಕಳೆದ ಡಿ.18ರಿಂದಲೇ ಜಾತ್ರೆ ಆರಂಭವಾಗಬೇಕಿತ್ತು. ಆದರೆ, ಈ ಬಾರಿ ಪಶುಗಳ ಆರೋಗ್ಯ ದೃಷ್ಟಿಯಿಂದ ಹಾಗೂ ಚರ್ಮಗಂಟು ರೋಗ ತಡೆಯುವ ಉದ್ದೇಶ ದಿಂದ ಜಿÇÉಾಡಳಿತದಿಂದ ಜ.30ರವರೆಗೆ ನಿಷೇಧಿಸಿ ಆದೇಶ ಹೊರಡಿಸಿತ್ತು. ಕಳೆದೊಂದು ತಿಂಗಳಿಂದ ಆದೇಶಕ್ಕೆ ಬೆಲೆ ಕೊಟ್ಟು ಸುಮ್ಮ ನಾಗಿದ್ದ ರೈತರು ಸ್ವಯಂ ಪ್ರೇರಿತರಾಗಿ ಜ.16 ರಿಂದ ಜ.23ರವರೆಗೂ ದನಗಳ ಜಾತ್ರೆಯನ್ನು ನಡೆಸಲು ಮುಂದಾಗಿದ್ದಾರೆ.
ತಾಲೂಕು ಆಡಳಿತಕ್ಕೆ ತಲೆ ಬಿಸಿ ಆರಂಭ: ದನಗಳ ಜಾತ್ರೆಗೆ ರೈತರ ಒತ್ತಡ ಹೆಚ್ಚಾದ ಹಿನ್ನೆಲೆ ನಿಷೇಧದ ನಡುವೆಯೂ ದನಗಳ ಜಾತ್ರೆ ಘಾಟಿ ಸುಬ್ರಹ್ಮಣ್ಯದಲ್ಲಿ ಪ್ರಾರಂಭವಾಗಿದೆ. ಜಾತ್ರೆ ನಿಷೇಧ ಕುರಿತಾದ ಜಿಲ್ಲಾಧಿಕಾರಿಗಳ ಆದೇಶದ ಅವಧಿ ಇನ್ನೂ 13 ದಿನ ಇದೆ. ದನಗಳ ಜಾತ್ರೆಯನ್ನು ಮುಂದು ವರಿಸುವುದು ಅಥವಾ ಬಿಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಈಗ ರೈತರು ರಾಸುಗಳ ಜಾತ್ರೆಗೆ ಸಿದ್ಧರಾಗುತ್ತಿರುವುದು ತಾಲೂಕು ಆಡಳಿತದ ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ.
ಹಲವು ರಾಜ್ಯ, ಜಿಲ್ಲೆಗಳಿಂದ ಆಗಮನ : ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿದೆ. ಘಾಟಿ ದನಗಳ ಜಾತ್ರೆ ತಮಿಳುನಾಡು, ಆಂಧ್ರಪ್ರದೇಶ ರೈತರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ದನಗಳ ವ್ಯಾಪಾರಕ್ಕೆ ರೈತರು ಬರುತ್ತಾರೆ. ವರ್ಷಕ್ಕೊಮ್ಮೆ ರೈತರು ತಮಗೆ ಬೇಕಾದ ದನಗಳನ್ನು ಖರೀದಿ ಮಾಡುತ್ತಾರೆ. ಜತೆಗೆ ತಾವು ಜೋಡಿ ಮಾಡಿದ ದನಗಳನ್ನು ಮಾರುವ ಮೂಲಕ ಲಾಭವನ್ನೂ ಗಳಿಸುತ್ತಾರೆ.
ಇಲಾಖೆ ಅಧಿಕಾರಿಗಳ ಮನವಿಗೂ ಜಗ್ಗದ ವಿವಿಧೆಡೆಯ ರೈತರು! : ಘಾಟಿಯಲ್ಲಿ ಪೆಂಡಾಲ್‌ಗಳನ್ನು ಹಾಕಿರುವ ರೈತರು, ದನಗಳ ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಜಾತ್ರೆಯಿಂದ ವಾಪಸ್ ತೆರಳುವಂತೆ ಪಶು ಆರೋಗ್ಯಾಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ. ಅಧಿಕಾರಿಗಳ ಮಾತಿಗೆ ಬಗ್ಗದ ರೈತರು, ದನಗಳ ಜಾತ್ರೆ ನಡೆಸುವುದಾಗಿ ಹಠ ತೊಟ್ಟಿದ್ದಾರೆ. ನಮಗೆ ಸರ್ಕಾರ ನೀಡುವ ನೀರು, ವಿದ್ಯುತ್ ಮೊದಲಾದ ಯಾವುದೇ ಸೌಕರ್ಯ ಬೇಡ. ನಮಗೆ ಜಾತ್ರೆ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಒಂದು ವೇಳೆ ಪೊಲೀಸರ ಮೂಲಕ ದನಗಳ ಜಾತ್ರೆ ನಿಲ್ಲಿಸಲು ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾದರೆ, ವಿಷ ಕುಡಿಯುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ.