ಬೆಳಗಾವಿ: ಹನಿ ನೀರಿಗಾಗಿ ಪರಿತಪಿಸುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಕೊನೆಗೂ ನೀರು ಸಿಗುತ್ತಿದೆ. ಅದು ಮಹಾರಾಷ್ಟ್ರದ ಜಲಾಶಯಗಳಿಂದಲ್ಲ. ಒಂದೇ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣೆಗೆ ಸಕಾಲದಲ್ಲಿ ಘಟಪ್ರಭೆ ಆಸರೆಯಾಗಿ ಬಂದಿದ್ದಾಳೆ.
ನೀರು ಬಿಡುಗಡೆ ಸಂಬಂಧ ಇದುವರೆಗೆ ಮಹಾರಾಷ್ಟ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ಅನಿವಾರ್ಯವಾಗಿ ನಮ್ಮ ಜಲಾಶಯದಲ್ಲಿರುವ ನೀರಿಗೇ ಮೊರೆ ಹೋಗಬೇಕಾಗಿದೆ. ಅದರಂತೆ ಹಿಡಕಲ್ ಜಲಾಶಯದಿಂದ ತಕ್ಷಣವೇ ಒಂದು ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಆದೇಶ ಮಾಡಿದ ನಂತರ ಅಧಿಕಾರಿಗಳು ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಈ ನೀರು ಅಥಣಿ ತಾಲೂಕಿನ ಕಟ್ಟಕಡೆಯ ಹಳ್ಳಿಯವರೆಗೆ ತಲುಪಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇದು ಸಾಧ್ಯವೆ?: ಹಿಡಕಲ್ ಜಲಾಶಯದ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಸುವ ನಿರ್ಧಾರ ಇದೇ ಮೊದಲು. ಇಂಥ ಹರಸಾಹಸದ ಅನುಷ್ಠಾನ ಸುಲಭದ ಮಾತಲ್ಲ. ಹಿಡಕಲ್ದಿಂದ ಬಿಡುಗಡೆ ಮಾಡುವ ನೀರು ಮೊದಲು 22 ಕಿಮೀ ಮುಖ್ಯ ಕಾಲುವೆ ಮೂಲಕ ಧೂಪದಾಳ ವೇರ್‌ನ್ನು ಸೇರಬೇಕು. ಅಲ್ಲಿಂದ 50 ಕಿಮೀ ಕಾಲುವೆ ಮೂಲಕ ಮುಗಳಖೋಡ ವಿತರಣಾ ಕೇಂದ್ರ ತಲುಪಬೇಕು. ನಂತರ ಮುಗಳಖೋಡ ಮತ್ತು ನಿಡಗುಂದಿ ವಿತರಣಾ ಕೇಂದ್ರದಿಂದ ಅಥಣಿ ತಾಲೂಕಿನ ಶೇಗುಣಸಿವರೆಗೆ ಮತ್ತೆ 22 ಕಿಮೀ ಈ ನೀರು ಸಾಗಬೇಕು. ಹೀಗೆ 94 ಕಿಮೀವರೆಗೂ ನೀರು ಸಾಗಿದರೆ ಘಟಪ್ರಭೆಯು ಯಾವ ಆತಂಕವಿಲ್ಲದೇ ಕೃಷ್ಣೆಯನ್ನು ಸೇರುತ್ತಾಳೆ ಎಂಬುದು ರೈತ ಮುಖಂಡರ ಅಭಿಪ್ರಾಯ.
ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಬಿಟ್ಟರೆ ಯಾವುದಕ್ಕೂ ಸಾಲುವುದಿಲ್ಲ. ಮುಖ್ಯವಾಗಿ ಅಥಣಿ ಭಾಗದವರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಬಹಳ ಕಡಿಮೆ. ಹೆಸ್ಕಾಂದಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಿದರೂ ದೊಡ್ಡ ಪ್ರಮಾಣದಲ್ಲಿ ಜನರೇಟರ್‌ಗಳಿವೆ. ಹೀಗಾಗಿ ಒಂದು ಟಿಎಂಸಿಯಲ್ಲಿ ಅರ್ಧ ಟಿಎಂಸಿ ನೀರು ದಾರಿಯಲ್ಲೇ ಖಾಲಿಯಾಗುತ್ತದೆ. ಒಂದು ಟಿಎಂಸಿ ಬದಲು ಸತತವಾಗಿ ಹೆಚ್ಚಿನ ಪ್ರಮಾಣದಲ್ಲಿ ಎರಡು ಟಿಎಂಸಿ ನೀರು ಬಿಟ್ಟರೆ ಮಾತ್ರ ಸ್ವಲ್ಪ ನೆಮ್ಮದಿ ಕಾಣಬಹುದು ಎನ್ನುತ್ತಾರೆ ಮಾಜಿ ಶಾಸಕ ಮೋಹನ ಶಾ.
Advertisement
ನೀರಿಗೆ ಪ್ರತಿಯಾಗಿ ನೀರೇ ಬೇಕು ಎಂದು ಮಹಾರಾಷ್ಟ್ರ ಸರ್ಕಾರ ಹಠ ಹಿಡಿದಿರುವುದರಿಂದ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಜಲಾಶಯದಿಂದ ನೀರಿನ ಆಸೆ ಬಿಟ್ಟು ನಮ್ಮಲ್ಲೇ ಇರುವ ಹಿಡಕಲ್ ಜಲಾಶಯದ ಮೊರೆ ಹೋಗಿದೆ. ಕೃಷ್ಣಾ ನದಿ ತೀರದ ಜನರ ತೀವ್ರ ಕುಡಿಯುವ ನೀರಿನ ದಾಹ ತಣಿಸಲು ಕರ್ನಾಟಕ ಸರ್ಕಾರ ಹಿಡಕಲ್ ಜಲಾಶಯದಿಂದ 94 ಕಿಮೀ ದೂರದ ಕೃಷ್ಣೆಗೆ ನೀರು ಹರಿಸಲು ನಿರ್ಧಾರ ಮಾಡಿದೆ. ಸೋಮವಾರದಿಂದ ಈ ನೀರು ಬಿಡುಗಡೆ ಕಾರ್ಯ ಆರಂಭವಾಗಲಿದೆ.
Related Articles
Advertisement
ಹಿಡಕಲ್ ಜಲಾಶಯದ ನೀರು ಅಥಣಿ ಹಾಗೂ ರಾಯಬಾಗ ತಾಲೂಕಿನ ಜನರಿಗೆ ಸಿಗಬೇಕಾದರೆ ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ಈ ನೀರು ಸಾಗುವಾಗ ಮಧ್ಯೆ ರೈತರು ಕಾಲುವೆಯ ಎರಡೂ ಬದಿಗೂ ನೀರು ಜಗ್ಗಲು ಹಾಕಿರುವ ಸಾವಿರಾರು ಪಂಪ್‌ಸೆಟ್‌ಗಳು ಮೌನವಾಗಿರಬೇಕು. ರೈತರು ಕಾಲುವೆ ಬಳಿಗೆ ಹಾಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಿಡಕಲ್ದಿಂದ ಮೊದಲ ಪ್ರಯತ್ನ: ಕೃಷ್ಣಾ ನದಿಗೆ ಇದೇ ಮೊದಲ ಬಾರಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಸೋಮವಾರದಿಂದ ಪ್ರತಿ ದಿನ ಸುಮಾರು ಒಂದು ಸಾವಿರ ಕ್ಯೂಸೆಕ್ಸ್‌ದಂತೆ 11 ದಿನಗಳ ಕಾಲ ಪೊಲೀಸ್ ರಕ್ಷಣೆಯಲ್ಲಿ ಒಂದು ಟಿಎಂಸಿ ನೀರು ಬಿಡಲಾಗುತ್ತದೆ. ಸೋಮವಾರ ಬಿಡುವ ನೀರು ಅಥಣಿ ಭಾಗಕ್ಕೆ ತಲುಪಲು ನಾಲ್ಕು ದಿನಗಳು ಬೇಕು. ಇದಲ್ಲದೆ ರೈತರು ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು ಎಂಬ ಉದ್ದೇಶದಿಂದ ಹೆಸ್ಕಾಂದವರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಅರವಿಂದ ಕಣಗಿಲ್ ತಿಳಿಸಿದ್ದಾರೆ.
ಬಾಗಲಕೋಟೆಗೆ ನೀರು: ಹಿಡಕಲ್ ಜಲಾಶಯದಲ್ಲಿ ಈಗ ನಾಲ್ಕು ಟಿಎಂಸಿ ನೀರಿದೆ. ಅದರಲ್ಲಿ ಒಂದು ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತದೆ. ಇದರ ಹೊರತಾಗಿ ಸರ್ಕಾರದ ಆದೇಶದಂತೆ ಬಾಗಲಕೋಟೆ ಜಿಲ್ಲೆಗೆ ಎರಡು ಟಿಎಂಸಿ ನೀರನ್ನು ಬಿಡಲಾಗುವುದು. ಮೇ 24ರಿಂದ 12 ದಿನಗಳ ಕಾಲ ಒಟ್ಟು 2.1 ಟಿಎಂಸಿ ನೀರು ಬಾಗಲಕೋಟೆ ಜಿಲ್ಲೆಗೆ ಹರಿಯಲಿದೆ. ಇದೆಲ್ಲ ನೀರು ಬಿಟ್ಟ ಮೇಲೂ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.
ನೀರು ಬಿಡುಗಡೆ ಹಿನ್ನೆಲೆಯಲ್ಲಿ ಈಗಾಗಲೇ ಕೃಷಿ ಪಂಪ್‌ಸೆಟ್ ಬಳಸದಂತೆ ಜಿಲ್ಲಾಡಳಿತ ಹಾಗೂ ಹೆಸ್ಕಾಂ ಅಧಿಕಾರಿಗಳು ರೈತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪೊಲೀಸರು ಹಾಗೂ ಹೆಸ್ಕಾಂ ಇಲಾಖೆಯವರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಕಾಲುವೆಯಲ್ಲಿ ನೀರು ಹರಿಯುವಂತೆ ಮಾಡುವಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವುದು ಸರಿಯಲ್ಲ. ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆ ವ್ಯಾಪ್ತಿಯ ಸಾರ್ವಜನಿಕರು ಹಾಗೂ ರೈತರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವಾಗ ನಮ್ಮ ರೈತರಿಗೆ ಅನ್ಯಾಯ ಮಾಡಿ ಕೃಷ್ಣಾ ನದಿಗೆ ನೀರು ಬಿಡುವ ಕ್ರಮ ಖಂಡನೀಯ.
•ಬಾಲಚಂದ್ರ ಜಾರಕಿಹೊಳಿ, ಶಾಸಕ
ಹಿಡಕಲ್ ಜಲಾಶಯದಿಂದ ಬೀಡುವ ನೀರಿನಿಂದ ಮೊದಲು ಘಟಪ್ರಭಾ ಬಳಿಯ ಧೂಪದಾಳ ವೇರ್ ತುಂಬಿಸಲಾಗುವುದು. ನಂತರ ಮುಗಳಖೋಡ, ನಿಡಗುಂದಿ ವಿತರಣಾ ಕೇಂದ್ರಗಳಿಂದ ದಿನಕ್ಕೆ 480 ಕ್ಯೂಸೆಕ್ ಬಿಡುಗಡೆ ಮಾಡಲಾಗುವುದು. ಆಗ ಈ ನೀರು ಅಥಣಿ ಭಾಗಕ್ಕೆ ತಲುಪಲಿದೆ.
• ಅರವಿಂದ ಕಣಗಿಲ್, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್