Advertisement

ಬೆಳ್ಳಗೆ ಹರಿಯುತ್ತಿದ್ದ ಘಟಪ್ರಭೆಗೆ ಕಪ್ಪುಕಳಂಕ

08:36 PM Jul 04, 2021 | Team Udayavani |

ವರದಿ: ಚಂದ್ರಶೇಖರ ಹಡಪದ

Advertisement

ಕಲಾದಗಿ: ನಿರಂತರವಾಗಿ ಬೆಳ್ಳಗೆ, ಮಳೆಯಾದರೆ ನಸು ಕೆಂಪಾಗಿ (ರಾಡಿನೀರು) ಹರಿಯುತ್ತಿದ್ದ, ಅನೇಕ ಹಳ್ಳಿಗಳ ಜನ-ಜಾನುವಾರು, ರೈತರಿಗೆ ಜೀವನಾಡಿ ಘಟಪ್ರಭೆ ಯಾಕೋ ಏನೋ ಕಳೆದ ಮೂರು ದಿನಗಳಿಂದ “ಕಪ್ಪಾಗಿ’ ಹರಿಯುತ್ತಿದ್ದು, ಈ ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಿಂದೆಂದೂ ಕಪ್ಪಾಗಿ ಹರಿಯದ ಘಟಪ್ರಭೆ ಇತ್ತೀಚಿನ ದಿನಗಳಲ್ಲಿ ಕಪ್ಪಾಗಿ ಮಲೀನಗೊಂಡು ಹರಿಯುತ್ತಿರುವುದಕ್ಕೆ ಕಾರ್ಖಾನೆಗಳಿಂದ ನದಿಗೆ ಬಿಡುತ್ತಿರುವ ತ್ಯಾಜ್ಯವೇ ಕಾರಣ ಎನ್ನಲಾಗುತ್ತಿದೆ.

ಉದಗಟ್ಟಿ, ಶಾರದಾಳ, ಅಂಕಲಗಿ, ಕಲಾದಗಿ, ಚಿಕ್ಕಸಂಶಿ ಮುಂತಾದ ಊರುಗಳ ಸಮೀಪ ಘಟಪ್ರಭೆಯ ನದಿಯ ಹರಿವಿನಲ್ಲಿ ಕಣ್ಣು ಹಾಯಿಸಿದರೆ ನೀರು ಕಪ್ಪು ಕಪ್ಪಾಗಿ ಕಾಣುತ್ತಿದೆ. ಇದರಿಂದಾಗಿ ನದಿ ನೀರನ್ನು ಜಾನುವಾರುಗಳಿಗೆ ಕುಡಿಸಲು ಜನ ಹಿಂದೇಟು ಹಾಕುತ್ತಿದ್ದಾರೆ.

ಒದ್ದಾಡಿ ಸಾಯುತ್ತಿವೆ ಜಲಜೀವಿಗಳು: ನದಿ ನೀರು ಕಪ್ಪಾಗಿರುವುದರಿಂದ ಮೀನು, ಕಪ್ಪೆ, ಹಾವು, ಏಡಿ ಇನ್ನಿತರೆ ಜಲಜೀವಿಗಳು ವಿಲ ವಿಲ ಒದ್ದಾಡಿ ಸಾಯುತ್ತಿವೆ. ಸಣ್ಣ ಸಣ್ಣ ಮೀನುಗಳು, ಏಡಿಗಳು ಸತ್ತು ನದಿ ದಂಡೆ ಬಳಿ ಬಿದ್ದಿವೆ. ಇವುಗಳನ್ನು ನೋಡಿ ಜನ ಮತ್ತಷ್ಟು ಆತಂಕಗೊಂಡಿದ್ದಾರೆ. ಕುಡಿಯುವ ನೀರೂ ವಿಷ: ನದಿ ನೀರು ಕಪ್ಪಾಗಿ ಹರಿಯುತ್ತಿರುವುದರಿಂದ ಅಂತರ್ಜಲ ವಿಷಕಾರಿಯಾಗುವುದನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ನದಿ ಪಾತ್ರದ ಜನ.

ನದಿ ಪಾತ್ರದ ಗ್ರಾಮದಲ್ಲಿ ಕುಡಿಯುನ ನೀರಿನ ಕೊಳವೆ ಬಾವಿಗಳು ನದಿ ಜಲಮೂಲದಿಂದಲೇ ಅಂತರ್ಜಲ ಮಟ್ಟ ಹೆಚ್ಚಿಸಕೊಳ್ಳುತ್ತವೆ. ಬಾವಿಗಳಿಂದ ನದಿ ಸ್ವಲ್ಪ ದೂರದಲ್ಲಿಯೇ ಇದೆ. ಇದರಿಂದ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ತಾಜ್ಯ ವಿಷಯುಕ್ತ ನೀರು ಮಿಶ್ರಣವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

Advertisement

ಎಚ್ಚೆತ್ತುಕೊಳ್ಳಬೇಕಿದೆ: ಘಟಪ್ರಭೆಯ ನೀರಿನಿಂದ ಏನಾದರೂ ಜನ-ಜಾನುವಾರುಗಳಿಗೆ ಅನಾಹುತಗಳು ಸಂಭವಿಸುವ ಮೊದಲೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಮುಖ್ಯವಾಗಿ ಜಲ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು ಘಟಪ್ರಭೆಯ ಒಡಲು ಹೀಗೆ ಕಪ್ಪಾಗಿರುವುದಕ್ಕೆ ಕಾರಣ ಗುರುತಿಸಬೇಕು. ಕಾರ್ಖಾನೆ ತ್ಯಾಜ್ಯ ನದಿಗೆ ಬಿಡುತ್ತಿರುವುದೇ ನಿಜವಾದರೆ ಕೂಡಲೆ ಅದನ್ನು ತಡೆಯುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next