Advertisement
ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಬೆಳಗ್ಗೆ ಮಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ ಅಧಿಕಾರಿಗಳ ತಂಡ ನಂತೂರು, ಸುರತ್ಕಲ್ ಹೆದ್ದಾರಿ, ಕೂಳೂರು ಸೇತುವೆ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿತು. ಜತೆಗೆ ತುಂಬೆ ಡ್ಯಾಂನ ಪರಿಸ್ಥಿತಿಯನ್ನು ಅವಲೋಕಿಸಲಾಯಿತು. ಮಳೆಯ ಸಂದರ್ಭ ಸಮಸ್ಯೆ ಸೃಷ್ಟಿಸಿರುವ ಬೆಳ್ತಂಗಡಿ-ಚಾರ್ಮಾಡಿ ರಸ್ತೆಯ ಬಗ್ಗೆಯೂ ಚರ್ಚಿಸಲಾಯಿತು. ಬಳಿಕ, ಗುರುಪುರ ಸಮೀಪದ ಭೂಕುಸಿತ ಆಗುವ ಅಪಾಯದ ಕೆತ್ತಿಕಲ್ ಗುಡ್ಡ, ಹೆದ್ದಾರಿ ಸಮಸ್ಯೆ ಇರುವ ಬಂಟ್ವಾಳ, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ ಹಾಗೂ ಶಿರಾಡಿ ಭಾಗದ ಸಮಸ್ಯೆಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಯು.ಟಿ.ಖಾದರ್, ಶಿರಾಡಿ ಹಾಗೂ ಚಾರ್ಮಾಡಿಗಳಲ್ಲಿ ಪದೇಪದೆ ಮಣ್ಣು ಕುಸಿಯುತ್ತಿದ್ದು, ಸಂಚಾರಕ್ಕೆ ಆತಂಕವಾಗುತ್ತಿದೆ. ಗಂಭೀರ ಸನ್ನಿವೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಸಂಚಾರ ಸ್ಥಗಿತಗೊಳಿಸಬಾರದು. ಸಂಚಾರ ಸ್ಥಗಿತದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ದ.ಕ, ಕೊಡಗು, ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲಾಡಳಿತ ಸೇರಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು. ಶಿರಾಡಿ, ಚಾರ್ಮಾಡಿ ಹಾಗೂ ಮಂಗಳೂರಿನ ಕೆತ್ತಿಕಲ್ ಪ್ರದೇಶಗಳಲ್ಲಿ ಆಗಾಗ ಭೂಕುಸಿತ ಉಂಟಾಗುತ್ತಿರುವ ಬಗ್ಗೆ ಏನು ಮುಂಜಾಗ್ರತಾ ಕ್ರಮ ಏನು ಕೈಗೊಳ್ಳಬೇಕು ಎಂಬ ಬಗ್ಗೆಯೂ ತಂಡ ಪರಿಶೀಲಿಸಿ ವರದಿ ನೀಡಲಿದೆ ಎಂದರು.
Related Articles
Advertisement
ಹೆದ್ದಾರಿ ಕಾಮಗಾರಿಗೆ ಈಶಾನ್ಯ ಭಾರತ ಮಾದರಿ: ಖಾದರ್ಯು.ಟಿ.ಖಾದರ್ ಮಾತನಾಡಿ, ಈಶಾನ್ಯ ಭಾರತದಲ್ಲಿ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲೇ ತಡೆಗೋಡೆಯನ್ನೂ ಮಾಡುತ್ತಾರೆ. ಆದರೆ ಇಲ್ಲಿ ಹೆದ್ದಾರಿ ಕಾಮಗಾರಿ ಬಳಿಕ ತಡೆಗೋಡೆ ಪ್ರತ್ಯೇಕವಾಗಿ ಮಾಡುತ್ತಾರೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಇದು ಸರಿಯಾದ ಕ್ರಮವಲ್ಲ. ಹಾಗಾಗಿ ಈಶಾನ್ಯ ಭಾರತ ಮಾದರಿಯನ್ನು ಅನುಸರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಚನೆ ನೀಡಬೇಕಾಗಿದೆ ಎಂದರು.