ಹುಣಸೂರು: ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹರನ್ನು ಬೆಳೆಗಾರರು ತರಾಟೆಗೆ ತೆಗೆದು ಕೊಂಡರು. ತಾಲೂಕಿನ ಕಟ್ಟೆಮಳಲವಾಡಿ ಮಾರುಕಟ್ಟೆ ಯಲ್ಲಿ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾರುಕಟ್ಟೆಯಿಂದ ಹೊರ ಬರುತ್ತಿದ್ದಂತೆ ಸಂಸದರನ್ನು ಸುತ್ತುವರೆದ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣೇಗೌಡ, ಉಪಾಧ್ಯಕ್ಷ ಅಶೋಕ್, ಶಶಿಧರ, ಸೋಮಶೇಖರ್, ವಿಶ್ವನಾಥ್ ಮತ್ತಿತರರು ನಿಮಗೆ ಬೆಳೆಗಾರರ ಸಮಸ್ಯೆ ಕೇಳುವ ಸೌಜನ್ಯವೂ ಇಲ್ಲ, ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದ್ದರೂ ಕೆ.ಜಿ.ಗೆ ಕೇವಲ 5 ರೂ. ಹೆಚ್ಚಿಸಿದ್ದಾರೆ. ನಿಮ್ಮದೇ ಸರ್ಕಾರವಿದ್ದರೂ ವಾಣಿಜ್ಯಮಂತ್ರಿಯನ್ನು ಕರೆತರುವಲ್ಲಿ ವಿಫಲರಾಗಿದ್ದೀರೆಂದು ಆರೋಪಿಸಿದರು.
ಎಲ್ಲ ಸಂಸದರಿಗಿಂತ ತಂಬಾಕು ಬೆಳೆಗಾರರ ಸಮಸ್ಯೆಗಳಿಗೆ ನಾನು ಹೆಚ್ಚು ಸ್ಪಂದಿಸಿದ್ದೇನೆ. ಸಕಾಲದಲ್ಲಿ ಗೊಬ್ಬರ
ಕೊಡಿಸಿದ್ದೇನೆ. ಉತ್ತಮ ಬೆಲೆ ಕೊಡಿಸಲು ಕಂಪನಿಗಳಿಗೆ ಸೂಚಿಸಿದ್ದೇನೆಂದು ಸಮಜಾಯಿಸಿ ನೀಡಿದರೂ ಕೇಳದ
ಬೆಳೆಗಾರರು ಹಾಗೂ ಸಂಸದರ ನಡುವೆ ಕೆಲಹೊತ್ತು ಏರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಕೊನೆಗೆ ತಮ್ಮ
ಅಸಹಾಯಕತೆ ವ್ಯಕ್ತಪಡಿಸಿದರು.
ವಿಶ್ವ ಮಾರುಕಟ್ಟೆಯಲ್ಲಿ ಮೈಸೂರು ತಂಬಾಕಿಗೆ ಬೇಡಿಕೆ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಮೈಸೂರು ಹೊಗೆಸೊಪ್ಪಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಶಾಸಕ ಎಚ್. ವಿಶ್ವನಾಥ್ ಹೇಳಿದರು.
ತಾಲೂಕಿನ ಕಟ್ಟೆಮಳಲವಾಡಿ ಹಾಗೂ ಚಿಲ್ಕುಂದದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಂಪನಿಗಳು ರೈತರಿಗೆ ಸೂಕ್ತ ಬೆಲೆ ನೀಡಬೇಕು, ಸರಾಸರಿ ಬೆಲೆ ಕೊಡಿಸುವಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳೆರಡರ ಪಾತ್ರವಿದೆ. ಯಾವುದೇ ಸಮಸ್ಯೆ ಇದ್ದಲ್ಲಿ ತಾವು
ಹಾಗೂ ಸಂಸದರು ಜೊತೆಗೂಡಿ ಸ್ಪಂದಿಸುತ್ತೇವೆ ಎಂದರು.
ಮಾರುಕಟ್ಟೆ-2ರಲ್ಲಿ ತಂಬಾಕು ಬೇಲ್ ಗಳಿಗೆ ಪೂಜೆ ಸಲ್ಲಿಸಿದ ಬಳಿಕ ಇ-ಹರಾಜಿನ ಮೂಲಕ ವಿವಿಧ ಕಂಪನಿಗಳು ಬಿಡ್ ನಡೆಸಿ, ಹೊಗೆಸೊಪ್ಪು ಬೇಲ್‌ಗಳನ್ನು ಖರೀದಿಸಿದರು. ಈ ವೇಳೆ ತಂಬಾಕು ಮಂಡಳಿ ಸದಸ್ಯ ಕಿರಣ್ ಕುಮಾರ್, ಹರಾಜು ನಿರ್ದೇಶಕ ಬಿಪಿನ್ ಚೌದರಿ, ಐಟಿಸಿ ಕಂಪನಿಯ ಮುಖ್ಯಸ್ಥ ರವೀಶ್, ತಾಪಂ ಅಧ್ಯಕ್ಷೆ ಪದ್ಮಮ್ಮ,
ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಹರಾಜು ಅಧೀಕ್ಷಕರಾದ ಪುರುಷೋತ್ತಮ ರಾಜೇಅರಸ್, ದಿನೇಶ್, ವೀರಭದ್ರ,
ಜಿಪಂ ಮಾಜಿ ಸದಸ್ಯರಾದ ರಮೇಶ್ ಕುಮಾರ್, ನಾಗರಾಜ ಮಲ್ಲಾಡಿ, ಶಿವಣ್ಣೇಗೌಡ, ನಾಗರಾಜಪ್ಪ ಇದ್ದರು.
ತಂಬಾಕು ಉತ್ಪಾದನೆಗೆ ಕನಿಷ್ಠ 1.5 ಲಕ್ಷ ರೂ. ಉತ್ಪಾದನಾ ವೆಚ್ಚ ತಗಲುತ್ತಿದೆ. ಎರಡು ವರ್ಷದ ಹಿಂದೆ ಕೆ.ಜಿ.ಗೆ 180 ರೂ ಸಿಕ್ಕಿತ್ತು. 2022ಕ್ಕೆ ಕೃಷಿ ಉತ್ಪನ್ನ ಬೆಲೆ ದುಪ್ಪಟ್ಟಾಗುತ್ತವೆಂದು ಸರ್ಕಾರ ಹೇಳುತ್ತಿದೆ. ಈಗಿನ ಬೆಲೆ ಗಮನಿಸಿದಲ್ಲಿ ರೈತರಿಗೆ ದೊಡ್ಡ ಹೊಡೆತ ಬೀಳಲಿದೆ. ಸರಾಸರಿ 180 ರೂ.ಗಿಂತ ಹೆಚ್ಚು ಸಿಗದಿದ್ದಲ್ಲಿ ಹೋರಾಟ ನಡೆಸಲಾಗುವುದು.
ನಾಗರಾಜಪ್ಪ, ತಂಬಾಕು ಬೆಳೆಗಾರ