Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: ಉಚಿತ ಪುಸ್ತಕ ವಿತರಣೆ

05:18 PM Jun 26, 2018 | Team Udayavani |

ನವಿಮುಂಬಯಿ: ಯಾವುದೇ ಕೆಲಸ ಮಾಡಲು ಒಳ್ಳೆಯ ಮನಸ್ಸಿರಬೇಕು. ಮನಸ್ಸಿ ಲ್ಲದೆ ಮಾಡುವ ಯಾವುದೇ ಕಾರ್ಯ ಯಶಸ್ವಿಯಾಗುವುದಿಲ್ಲ. ಒಂದು ಸಂಸ್ಥೆ ಅಂದರೆ ಒಂದು ಮರ ಇದ್ದಂತೆ. ಮರ ಹೇಗೆ ಪ್ರಾಣಿ ಗಳಿಗೆ ಆಶ್ರಯ ನೀಡುತ್ತದೆ,  ಮನುಷ್ಯ ರಿಗೆ ಉಪಯೋಗಕ್ಕೆ ಬರುತ್ತದೆ, ಹಾಗೆಯೇ ಸಂಸ್ಥೆಯ ವತಿಯಿಂದ ಇಂತಹ ಸಾಮಾಜಿಕ ಕಾರ್ಯ ನಿರಂತರ ನಡೆಯತ್ತಿರಬೇಕು. ಸಂಸ್ಥೆಯ ಮುಖಾಂತರ ವಿದ್ಯಾದಾನ, ಅನ್ನ ದಾನ ಮೊದಲಾದ ಒಳ್ಳೆಯ ಕಾರ್ಯ ಮಾಡಬಹುದು. ಅದೇ ರೀತಿ ನಾವು ಕಳೆದ 15 ವರ್ಷಗಳಿಂದ ನಮ್ಮ ಸಂಸ್ಥೆಯ ಮುಖಾಂತರ ಇಂತಹ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಅದಕ್ಕೆ ದಾನಿಗಳ ಹಾಗೂ ಸಮಿತಿಯ ಸದಸ್ಯರ ಒಳ್ಳೆಯ ಸಹಕಾರವಿದೆ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.

Advertisement

ಜೂ. 24 ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳದ ವತಿ ಯಿಂದ ನಡೆದ 15ನೇ ವಾರ್ಷಿಕ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ತಾಯಿಯೇ ನಮ್ಮ ಮೊದಲ ಗುರು. ಅವರನ್ನು ಆಧರಿಸುವುದು ನಮ್ಮ ಕರ್ತವ್ಯ.  ಚಿಕ್ಕಂದಿನಿಂದಲೆ ಒಳ್ಳೆಯ ರೀತಿಯಲ್ಲಿ ಕಲಿತರೆ ಮುಂದೆ ಒಳ್ಳೆಯ ಉದ್ಯೋಗ ದೊರೆತು ಒಳ್ಳೆಯ ಜೀವನ ಸಾಧ್ಯವಿದೆ. ಅದಕ್ಕೆ ನಾವು  ಸಾಧ್ಯವಾದಷ್ಟು ಮೊಬೈಲ್‌ನಿಂದ  ದೂರವಿರಬೇಕು. ಅಗತ್ಯವಿದ್ದಷ್ಟೇ ಉಪಯೋಗಿಸಬೇಕು. ಕೆಲವು ಪಾಲಕರು ತಾವು ಎಷ್ಟೇ ಕಷ್ಟದಲ್ಲಿದ್ದರೂ ಸಾಲ ಮಾಡಿಯಾದರೂ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆ ಕಲಿಸು ತ್ತಾರೆ. ಆದರೆ ಅದೇ ಮಕ್ಕಳು ತಮ್ಮ ಮಾತಾ-ಪಿತರನ್ನು ವೃದ್ಧಾಶ್ರ ಮಕ್ಕೆ ಕಳುಹಿಸುತ್ತಾರೆ. ಹಾಗೆ ಮಾಡಬಾರದು. ನಾವು ನಮ್ಮ ತಂದೆ-ತಾಯಿಯನ್ನು ನಮ್ಮಿಂದ ದೂರ ಇಡಬಾರದು. ಅವರನ್ನು ಸಲಹುವುದು ನಮ್ಮ ಕರ್ತವ್ಯ. ನಿಮಗೆ ಇಂದು ದೇವಿಯ ಪ್ರಸಾದ ರೂಪದಲ್ಲಿ ನೀಡಿದ ಪುಸ್ತಕ ಹಾಗೂ ಪುರಸ್ಕಾರವನ್ನು ಪಡೆದು ಒಳ್ಳೆಯ ರೀತಿಯಲ್ಲಿ ಕಲಿತು ನಮ್ಮ ಸಮಾಜಕ್ಕೆ ನಮ್ಮ ದೇಶಕ್ಕೆ ಕೀರ್ತಿ ತರಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ, ನವಿಮುಂಬಯಿ ಮಹಾನಗರ ಪಾಲಿಕೆಯ ನಗರ ಸೇವಕಿ ಉಷಾ ತಾಯಿ ಪಾಟೀಲ್‌, ಉದ್ಯಮಿಗಳಾದ ಡಿ. ಎಸ್‌. ದೂಭೆ, ಸುಗಂಧ್‌ರಾಜ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ಉದ್ಯಮಿ ಸತೀಶ್‌ ಶೆಟ್ಟಿ, ಮಂಡಳದ ಉಪಾಧ್ಯಕ್ಷ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಹರೀಶ್‌ ಶೆಟ್ಟಿ ಪಡುಬಿದ್ರೆ, ಸಮಿತಿಯ ಸದಸ್ಯರುಗಳಾದ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಹರೀಶ್‌ ಶೆಟ್ಟಿ ಕುರ್ಕಾಲ್‌, ಪದ್ಮನಾಭ ಸಿ. ಶೆಟ್ಟಿ, ಸತೀಶ್‌ ಎಸ್‌. ಪೂಜಾರಿ, ಪ್ರಭಾಕರ ಆಳ್ವ, ಉಪ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ, ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಆಶಾ ವಿ. ಶೆಟ್ಟಿ ಮತ್ತು ರಾಘವೇಂದ್ರ ಎಂಟರ್‌ಪ್ರೈಸಸ್‌ನ ರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ದೇವಿಗೆ ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಹಿಳಾ ಮಂಡಳಿಯ ಸದಸ್ಯೆಯರು ಪ್ರಾರ್ಥನೆಗೈದರು. ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮೊದಲು ತಮಗೆ ಜನ್ಮ ನೀಡಿದ ತಾಯಿಗೆ ವಂದಿಸಿ ಅವರಿಗೆ ಗೌರವ ನೀಡಬೇಕು. ಅದೇ ರೀತಿ ವಿದ್ಯಾಮಾತೆ ಶಾರದೆಯನ್ನು ಸ್ಮರಿಸಿ ವಿದ್ಯೆ ಕಲಿತರೆ ಉನ್ನತಿಗೇರಲು ಸಾಧ್ಯ. ಆದರೆ ನೀವು ಮೊಬೈಲ್‌ನಿಂದ ದೂರವಿದ್ದು, ಕಲಿಯುವುದಕ್ಕೆ ಮಹತ್ವ ನೀಡಬೇಕು. ನಾವು ನಮ್ಮ ಸಂಸ್ಥೆಯ ಮುಖಾಂತರ ಕಳೆದ 15 ವರ್ಷಗಳಿಂದ ಉಚಿತ ಶಿಕ್ಷಣ ನೀಡುವ ಜತೆಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬಂದಿದ್ದೇವೆ. ದೇವಿಯ ಪ್ರಸಾದ ರೂಪದಲ್ಲಿ ಪಡೆದ ಈ ಪುಸ್ತಕ ಹಾಗೂ ಪುರಸ್ಕಾರದಿಂದ ಒಳ್ಳೆಯ ರೀತಿಯಲ್ಲಿ ಕಲಿತು ನಮ್ಮ ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂದರು.

ಮಂಡಳದ ಪದಾಧಿಕಾರಿಗಳು ಅತಿಥಿ-ಗಣ್ಯರುಗಳನ್ನು, ದಾನಿಗಳನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಸಿಯಲ್ಲಿ ಶೇ. 96.80 ಅಂಕಗಳನ್ನು ಪಡೆದ ಕು| ಸನಿ¾ತಾ ಸದಾನಂದ ಶೆಟ್ಟಿ ಮತ್ತು ಎಚ್‌ಎಸ್‌ಸಿಯಲ್ಲಿ ಶೇ. 94.46 ಅಂಕಗಳನ್ನು ಪಡೆದ ವೈಭವ್‌ ಆನಂದ್‌ ಕದಂ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು. ಆನಂತರ ಎಸ್‌ಎಸ್‌ಸಿಯಲ್ಲಿ ಶೇ. 85 ಮತ್ತು ಎಚ್‌ಎಸ್‌ಸಿಯಲ್ಲಿ ಶೇ. 80 ಅಂಕಗಳನ್ನು ಗಳಿಸಿದ ಸುಮಾರು 125 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. 1ರಿಂದ 10ನೇ ತರಗತಿಯವರೆಗಿನ ಸುಮಾರು ಒಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

Advertisement

ಪ್ರತಿಭಾ ಪುರಸ್ಕಾರದ ಯಾದಿಯನ್ನು ಹರೀಶ್‌ ಶೆಟ್ಟಿ ಪಡುಬಿದ್ರಿ ವಾಚಿಸಿದರು. ಮಂಡಳದ ಉಪಾಧ್ಯಕ್ಷ ಸುರೇಶ್‌ ಎಸ್‌. ಕೋಟ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಅನ್ನಪ್ರಸಾದ ನಡೆಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್‌, ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next