Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ: ಕ್ರಿಕೆಟ್‌, ಹಗ್ಗಜಗ್ಗಾಟ 

05:19 PM Oct 31, 2018 | Team Udayavani |

ನವಿಮುಂಬಯಿ: ಕ್ರೀಡೆಯಿಂದ ನಮ್ಮ ಶಾರೀರಿಕ ಕ್ಷಮತೆ ಹೆಚ್ಚುವುದರಿಂದ ಕ್ರೀಡಾಮನೋಭಾವ ಬೆಳೆಯುತ್ತದೆ. ಹಿಂದಿನ ಕಾಲದಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ ನಮ್ಮ ಆರೋಗ್ಯಕ್ಕೆ ವ್ಯಾಯಾಮ ನೀಡುತ್ತಿದ್ದವು. ಆದರೆ ಇಂದಿನ ಆಧುನಿಕ ಯುಗದಲ್ಲಿ ನಮಗೆ ಶಾರೀರಿಕ ವ್ಯಾಯಾಮವು ದೊರೆಯಲು ನಾವು ಕ್ರೀಡೆ ಹಾಗೂ ಇತರ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವ ಜನರನ್ನು ಒಂದುಗೂಡಿಸುವ ಕೆಲಸ ಅಭಿನಂದ ನೀಯವಾಗಿದೆ ಎಂದು ಸ್ಥಳೀಯ ನೆರೂಲ್‌ ಶ್ರೀ ಶನೀಶ್ವರ  ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು  ನುಡಿದರು.

Advertisement

ಅ.28 ರಂದು ಘನ್ಸೋಲಿ ಮೂಕಾಂಬಿಕಾ ಮಂದಿರದಲ್ಲಿ ಮೂಕಾಂಬಿಕಾ ದೇವಾಲಯದ ಉಪಸಮಿತಿ ಆಯೋಜಿಸಿದ್ದ ಮೂಕಾಂಬಿಕಾ ಟ್ರೋಫಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿ ತರಿದ್ದು ಮಾತನಾಡಿದ ಅವರು, ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಬಹಳ ಮುಖ್ಯ ವಾಗುತ್ತದೆ ಎಂದು ನುಡಿದು ವಿಜೇತ ತಂಡಗಳನ್ನು ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ಶ್ರೀ ಕ್ಷೇತ್ರದ ಉಪಸಮಿತಿಯ ಯುವಕರು ಕಠಿಣ ಪರಿಶ್ರಮದಿಂದ ಇಂದಿನ ಕ್ರೀಡಾಕೂಟವನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ. ಅವರ ಕಾರ್ಯ ನಿಜವಾಗಿಯೂ ಅಭಿನಂದನೀಯವಾಗಿದೆ. ಶ್ರೀ ಕ್ಷೇತ್ರದಲ್ಲಿ ನಡೆರುವ ಕಾರ್ಯಗಳಿಗೆ ಇದು ಪ್ರೇರಣೆ ಯಾಗಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಯುವ ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಇಂತಹ ಕ್ರೀಡೋತ್ಸವಗಳು ನಮ್ಮನ್ನು ಜಾತಿ, ಮತ, ಧರ್ಮವನ್ನು ಮರೆತು ಒಂದುಗೂಡಿಸುವ ಕಾರ್ಯವನ್ನು ಮಾಡುತ್ತದೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಅತಿಥಿಯಾಗಿ ಆಗಮಿಸಿದ ಭಾಂಡೂಪ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಇವರು ಮಾತನಾಡಿ, ಕ್ಷೇತ್ರದ ತುಳು-ಕನ್ನಡಿಗರು ಸಂಘಟಿತರಾಗಿ ಇಂತಹ ಕಾರ್ಯಕ್ರಮವನ್ನು ನೋಡುವಾಗ ಸಂತೋಷವಾಗುತ್ತಿದೆ. ನಾವು ಸಂಘಟಿತರಾದಾಗ ನಮ್ಮ ಶಕ್ತಿ ಹೆಚ್ಚುತ್ತದೆ. ಕ್ರೀಡೆಯಿಂದಾಗಿ ಇಲ್ಲಿ ಯುವ ಜನತೆ ಒಟ್ಟು ಸೇರುತ್ತಾರೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ನುಡಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಮೂಕಾಂಬಿಕಾ ಮಂದಿರದ ಉಪಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು, ಉದ್ಯಮಿ ಸತೀಶ್‌ ಆರ್‌. ಶೆಟ್ಟಿ, ಶ್ರೀ ಗಣೇಶೋತ್ಸವ ಸಮಿತಿ ಅಲೆವೂರು ಅಧ್ಯಕ್ಷ ಉಮೇಶ್‌ ಜಿ. ಶೆಟ್ಟಿ, ಉದ್ಯಮಿಗಳಾದ  ಮೋಹನ್‌ ಮಜ್ಜಾರ್‌, ಪ್ರಮೋದ್‌ ಕರ್ಕೇರ, ಉದ್ಯಮಿ, ರಾಜಕೀಯ ನೇತಾರ ಜಯಪ್ರಕಾಶ್‌ ಶೆಟ್ಟಿ, ಉದ್ಯಮಿ ಗಿರೀಶ್‌ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ.  ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಕ್ಷೇತ್ರದ ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಮೂಕಾಂಬಿಕಾ ಚಾರಿಟೇಬಲ್‌ ಟ್ರಸ್ಟ್‌ನ ಕಾರ್ಯದರ್ಶಿ ಹರೀಶ್‌ ಶೆಟ್ಟಿ ಪಡುಬಿದ್ರೆ ವಿಜೇತ ತಂಡಗಳ ಹೆಸರು ಘೋಷಿಸಿದರು. ಉತ್ತಮ ಎಸೆತಗಾರರಾಗಿ ಸಂಜಯ್‌, ಉತ್ತಮ ದಾಂಡಿಗರಾಗಿ ವಿನೀತ್‌, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನಿಕಿಲ್‌ ಹಾಗೂ ಸರಣಿ ಶ್ರೇಷ್ಟ ಪುರಸ್ಕಾರವನ್ನು ಸಂಕೇತ್‌ ಅವರು ಪಡೆದುಕೊಂಡರು. ಸಮಾರಂಭದಲ್ಲಿ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉದ್ಯಮಿ ಸತೀಶ್‌ ಶೆಟ್ಟಿ ದಂಪತಿ, ಉಪಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್‌ ಕೆ. ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. 

ಬಾಕ್ಸ್‌ ಕ್ರಿಕೆಟ್‌ನಲ್ಲಿ ಸಾನ್ವಿ ಸ್ಟಾರ್‌ ಪ್ರಥಮ, ಶ್ರೀ ಗಣೇಶ್‌ ಎ. ತಂಡ ದ್ವಿತೀಯ ಬಹುಮಾನ ಪಡೆಯಿತು. ಮಹಿಳೆಯರ ಹಗ್ಗಜಗ್ಗಾಟ ವಿಭಾಗದಲ್ಲಿ ಟೀಮ್‌ ರುದ್ರ ಭಾಂಡೂಪ್‌ ತಂಡ ಪ್ರಥಮ, ಬಂಟ್ಸ್‌ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ ದ್ವಿತೀಯ, ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಬಂಟರ ಸಂಘ ಮುಂಬಯಿ ಯುವ ವಿಭಾಗ ಪ್ರಥಮ, ದೇವಾಡಿಗ ಜವನೆರ್‌ ದ್ವಿತೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next