Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ

03:46 PM Mar 01, 2019 | |

ನವಿ ಮುಂಬಯಿ: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡಬಾರದು. ಅದನ್ನು ದಿಟ್ಟತನದಿಂದ ಎದುರಿಸಬೇಕು. ಮೊದಲು ನಮ್ಮಲ್ಲಿರುವ ದುರ್ಗುಣಗಳನ್ನು ದೂರಮಾಡಬೇಕು. ನಾರಿ ಪ್ರತೀ ಮನೆಯಲ್ಲಿ ಲಕ್ಷ್ಮೀಯ ರೂಪದಲ್ಲಿ ನೆಲೆಸಿದ್ದಾಳೆ. ನಾವು ಸದಾ ಸತ್ಯವನ್ನು ಪಾಲಿಸಬೇಕು. ನಮ್ಮಲ್ಲಿ ಸಹನಶೀಲತೆ ಇರಬೇಕು. ನಮ್ಮಲ್ಲಿರುವ ಕ್ರೋಧವನ್ನು ದೂರ ಮಾಡಿದಲ್ಲಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಎಲ್ಲಿ ಶಾಂತಿ ಇರುತ್ತದೋ ಅಲ್ಲಿ ಲಕ್ಷ್ಮೀ ನೆಲೆಸು ತ್ತಾಳೆ, ಶ್ರೀ ರಾಮನಿಗೂ ಶಕ್ತಿ ನೀಡಿದವಳು ಸೀತೆ. ಶಿವಾಜಿ ಮಹಾರಾಜನಿಗೂ ಪ್ರೋತ್ಸಾಹ ನೀಡಿದ
ವಳು ಅವನ ತಾಯಿ. ಇದರಿಂದ ನಮಗೆ ಸ್ತ್ರೀಯರ ಶಕ್ತಿಯ ಬಗ್ಗೆ ಅರಿವಾಗುತ್ತದೆ ಎಂದು ಪ್ರಜಾಪಿತಬ್ರಹ್ಮಕುಮಾರಿ ಶೀಲಾ ದೀದಿ ನುಡಿದರು.

Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸನ್ನಿಧಿಯಲ್ಲಿ ನಡೆಯುತ್ತಿರುವ ದೇವಾಲಯದ 16ನೇ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ನಡೆದ ಮಹಿಳಾ ಮಂಡಳಿಯ ಅರಸಿನ ಕುಂಕುಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಅವರು, ಇಂದು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಜರಗಿದ ಈ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಎಲ್ಲ ಮಹಿಳೆಯರು ತಮ್ಮಲ್ಲಿರುವ ಸೇಡಿನ ಭಾವನೆಯನ್ನು ತೊರೆದು ಎಲ್ಲರಲ್ಲೂ ಪ್ರೀತಿಯ ಭಾವನೆ ಬೆಳೆಸಿಕೊಳ್ಳುವ ಪ್ರತಿಜ್ಞೆ ಮಾಡಬೇಕು. ನಮ್ಮ ಜೀವನದಲ್ಲಿ ಎಲ್ಲರಲ್ಲೂ ಪ್ರೀತಿಯ ಭಾವನೆ ಮೂಡಬೇಕು ಎಂದು ನುಡಿದು ಶುಭ ಹಾರೈಸಿದರು.

ದೇವಾಲಯದ ಮಹಿಳಾ ಮಂಡಲಿಯ ಅಧ್ಯಕ್ಷೆ ವೀಣಾ ಸಿ. ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಸ್ಥಳೀಯ ನಗರ ಸೇವಕಿ ಉಷಾತಾಯಿ ಪಾಟೀಲ್‌, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್‌. ಶೆಟ್ಟಿ, ನೆರೂಲ್‌ ಶ್ರೀ ಶನೀಶ್ವರ ಮಂದಿರದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ, ನೆರೂಲ್‌ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಎಸ್‌. ಶೆಟ್ಟಿ, ತುಳುಕೂಟ ಐರೋಲಿಯ ಸದಸ್ಯೆ ಶೈಲಾ ಎ. ಶೆಟ್ಟಿ, ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಯ ಸದಸ್ಯೆಯರಾದ ಇಂದಿರಾ ಎ. ಶೆಟ್ಟಿ, ವಸಂತಿ ಸಿ. ಶೆಟ್ಟಿ,  ಪ್ರೇಮಾ ಎಸ್‌. ಶೆಟ್ಟಿ, ವಾಣಿ ಬಿ. ಶೆಟ್ಟಿ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಧಾ ಎಸ್‌. ಪೂಜಾರಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಮಂಡಳಿಯ ಸದಸ್ಯೆಯರು ಅತಿಥಿಗಳನ್ನು ಗೌರವಿಸಿದರು.

ನಗರ ಸೇವಕಿ ಉಷಾತಾಯಿ ಪಾಟೀಲ್‌ ಅವರು ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ನಾನು ಇಲ್ಲಿ ನಗರ ಸೇವಕಿಯಾಗಿದ್ದೇನೆ. ನಿಮಗೆಲ್ಲರಿಗೂ ನಾನು ಚಿರಋಣಿ. ಈ ದೇವಾಲಯಕ್ಕೆ ನನ್ನಿಂದಾದ ಸಹಕಾರ ಸದಾಯಿದೆ ಎಂದರು.

ವೀಣಾ ಪೂಜಾರಿ ಅವರು ಮಾತನಾಡಿ, ಶೀಲಾ ದೀದಿಯವರ ಹಿತನುಡಿ ಕೇಳಿ ಮನಸ್ಸು ಪುಳಕಿತವಾಯಿತು. ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ನನ್ನನ್ನು ಕರೆದು ಈ ಸಂದರ್ಭದಲ್ಲಿ ಗೌರವಿಸಿದ್ದೀರಿ. ನಿಮಗೆಲ್ಲರಿಗೂ ಅಭಿನಂದನೆಗಳು. ನವಿಮುಂಬಯಿಯಲ್ಲಿ ಕಳೆದ ಒಂದು ತಿಂಗಳಿಂದ ಜಾತ್ರೆ ನಡೆಯುತ್ತಿದ್ದು, ಇಲ್ಲಿ ಬಂದು ನನಗೆ ತುಂಬಾ ಸಂತೋಷವಾಗಿದೆ ಎಂದರು.

Advertisement

ಶಾರದಾ ಎಸ್‌. ಶೆಟ್ಟಿ ಇವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ನನ್ನನ್ನು ಕರೆದು ಗೌರವಿಸಿದ ನಿಮಗೆಲ್ಲರಿಗೂ ವಂದನೆಗಳು. ನಗರದ ಎಲ್ಲಾ ಸಂಘ-ಸಂಸ್ಥೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ಅರಸಿನ ಕುಂಕುಮ ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಬಹಳಷ್ಟು ಒಳ್ಳೆಯದು. ತಾಯಿ ಮೂಕಾಂಬಿಕೆ ನಮ್ಮನ್ನೆಲ್ಲ ಅನುಗ್ರಹಿಸಲಿ ಎಂದು ನುಡಿದು ಶುಭ ಹಾರೈಸಿದರು.

ಶೈಲಾ ಶೆಟ್ಟಿ ಇವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಪೇಶ್ವೆಯವರ ಕಾಲದಲ್ಲಿ ಈ ಅರಸಿನ ಕುಂಕುಮ ಕಾರ್ಯಕ್ರಮ ಆರಂಭವಾಗಿದೆ. ಅಂದಿನ ಕಾಲದಲ್ಲಿ ಪುರುಷರು ಯುದ್ಧದಲ್ಲಿ ನಿರತರಾಗಿರುವ ಸಂದರ್ಭ ಮಹಿಳೆಯರೆಲ್ಲರೂ ಒಟ್ಟಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ಅರಸಿನ ಕುಂಕುಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ನುಡಿದರು.

ಇಂದಿರಾ ಶೆಟ್ಟಿ ಅವರು ಮಾತನಾಡಿ, ಇಲ್ಲಿ ವರ್ಷವಿಡೀ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅರಸಿನ ಕುಂಕುಮ ಪ್ರಸಾದ ರೂಪದಲ್ಲಿ ದೊರಕಿದೆ. ನವಿಮುಂಬಯಿಯ ಮೂರು ದೇವಾಲಯಗಳಲ್ಲೂ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.

ವೀಣಾ ಕರ್ಕೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿ ಸಂಘಟನಾತ್ಮಕ ಶಕ್ತಿ ಬರುತ್ತದೆ. ನಮ್ಮ ಕರ್ಮಭೂಮಿಯಾದ ಮಹಾರಾಷ್ಟ್ರದಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಈ ಅರಸಿನ ಕುಂಕುಮ ಕಾರ್ಯಕ್ರಮವನ್ನು ನಾವು ಆಯೋಜಿಸುವುದರಿಂದ ಇಲ್ಲಿನ ಸಂಸ್ಕೃತಿಗೆ ಇಲ್ಲಿನ ಮಣ್ಣಿಗೆ ಗೌರವ ನೀಡಿದಂತಾಗುತ್ತದೆ. ನಾವು ಸದಾ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಬೇಕು ಎಂದರು. ಶಕುಂತಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರತ್ನಾ ಟಿ. ಗೌಡ ವಂದಿಸಿದರು. ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next