Advertisement

ಚಿಕಿತ್ಸೆ ಪಡೆದರಷ್ಟೇ ಕೋವಿಡ್ ದಿಂದ ಮುಕ್ತಿ

11:08 AM May 24, 2020 | mahesh |

ಕಾರವಾರ: ಕೋವಿಡ್‌ -19 ಒಂದು ಸಹಜ ರೋಗ ಲಕ್ಷಣವಾಗಿದ್ದು, ವೈದ್ಯರಿಂದ ಚಿಕಿತ್ಸೆಗೊಳಪಟ್ಟಲ್ಲಿ ಗುಣಮುಖರಾಗಲು ಸಾಧ್ಯವಿದ್ದು, ಜನರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ  ಡಾ| ಹರೀಶಕುಮಾರ್‌ ಹೇಳಿದರು. ಶನಿವಾರ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್‌ -19
ವಾರ್ಡ್‌ನಿಂದ 20 ಗುಣಮುಖರನ್ನುಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಕೋವಿಡ್‌ -19 ಗೆ ಸಂಬಂಧಿಸಿದಂತೆ ಜನರಲ್ಲಿ ತಿಳಿವಳಿಕೆ ಇರಬೇಕು, ಅಷ್ಟೇ. ಶನಿವಾರ ಕಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಎಲ್ಲಾ ವಯೋಮಾನ ಮತ್ತು ವರ್ಗದವರಿದ್ದು, ಎಲ್ಲರೂ ಚಿಕಿತ್ಸೆಗೆ ಸಹಕಾರ ನೀಡಿದ್ದಾರೆ. ಇವರು ಮುಂದಿನ 14 ದಿನ ಕೂಡ ಅರೋಗ್ಯಾಧಿಕಾರಿಗಳ ನಿಗಾದಲ್ಲಿರುವರು. ಜೋಯಿಡಾ
ತಾಲೂಕಿನ ಯುವಕ ಗೋವಾದಲ್ಲಿ ಕೋವಿಡ್‌ -19 ಪರೀಕ್ಷೆಗೊಳಗಾಗಿ ಆಸ್ಪತ್ರೆಯಲ್ಲಿದ್ದು, ಆತನ ವರದಿಯೂ ನೆಗಟಿವ್‌ ಬಂದಿದೆ. ಆ ಯುವಕನೂ ಶನಿವಾರ ಬಿಡುಗಡೆ ಆಗುತ್ತಿದ್ದಾನೆ. ಯಾರೂ ಆತಂಕ ಪಡಬೇಕಿಲ್ಲ. ಎಲ್ಲ ಸೋಂಕಿತರಿಗೆ ಮನೋಸ್ಥೈರ್ಯ ತುಂಬಿದರು.

ಎಸ್ಪಿ ಶಿವಪ್ರಕಾಶ್‌ ದೇವರಾಜ ಮಾತನಾಡಿ, ಮೇ 25ರಂದು ರಂಜಾನ್‌ ಹಬ್ಬ ಇದ್ದು, ಈ ಸಂದರ್ಭದಲ್ಲಿ ಯಾರೂ ಗುಂಪು – ಗುಂಪಾಗಿ ಪ್ರಾರ್ಥನೆ ಸಲ್ಲಿಸಬಾರದು. ಯಾರೇ ಆಗಲಿ ಜನರು ಗುಂಪಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿದಾಗ ಕೊರೊನಾ ಸೋಂಕು ಹರಡುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಜನರು ಗುಂಪಾಗಿ ಸೇರುವುದು ಸರಕಾರ ನಿರ್ಬಂಧಿಸಿದ್ದು ಇದಕ್ಕೆ ಜನರು ಸ್ಪಂದಿಸಬೇಕೆಂದರು. ಪಿಜಿಷಿಯನ್‌ ಡಾ| ರಾಜು ಹಾಗೂ ಚಿಕ್ಕ ಮಕ್ಕಳ ತಜ್ಞರು ತಾವು ಸೋಂಕಿತರಿಗೆ ಚಿಕಿತ್ಸೆ ನೀಡಿದ ಅನುಭವ ಹಂಚಿಕೊಂಡರು. ಜಿಪಂ ಸಿಇಒ ಎಂ. ರೋಶನ್‌, ಕಾರವಾರ ವೈದ್ಯಕೀಯ ವಿಜ್ಞಾಗಳ ಸಂಸ್ಥೆ ನಿರ್ದೇಶಕ ಡಾ| ಗಜಾನನ ನಾಯ್ಕ, ಡಿಎಚ್‌ಒ ಡಾ| ಜಿ.ಎನ್‌. ಅಶೋಕಕುಮಾರ್‌ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next