ಕೆ.ಆರ್.ಪುರ: ವಾಹನ ಚಾಲನೆ ವೇಳೆ ವೇಗಕ್ಕಿಂತ ಸುರಕ್ಷತೆ ಮುಖ್ಯ. ವೇಗ ಆ ಕ್ಷಣಕ್ಕೆ ಮಾತ್ರ ಮುದ ನೀಡುತ್ತದೆ. ಆದರೆ ನಿಯಂತ್ರಣ ತಪ್ಪಿದರೆ ಜೀವನ ಪೂರ್ತಿ ನೋವನುಭವಿಸಬೇಕು,’ ಎಂದು ಪೂರ್ವ ವಿಭಾಗದ ಸಂಚಾರ ಎಸಿಪಿ ಆರ್.ಐ.ಖಾಸಿಂ ಎಚ್ಚರಿಸಿದರು.
ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಕ್ಷೇಮಾಭಿವೃದ್ಧಿ ಸಂಘ ಮತ್ತು ಸಂಚಾರ ಪೊಲೀಸರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಚಾರ ನಿಯಮಗಳ ಅರಿವು ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್, ವೀಲಿಂಗ್ ಮಾಡುವುದು ಅಪರಾಧ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಜೀವಕ್ಕೆ ಅಪಾಯ ಎದುರಾಗುತ್ತದೆ,’ ಎಂದರು. ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಆರಂಭವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಜಾಥಾದಲ್ಲಿ ವಿವಿಧ ಶಾಲೆಗಳ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು,
ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ, ಚಾಲನೆ ವೇಳೆ ಮೊಬೈಲ್ ಬಳಸಬೇಡಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ, ಸಿಗ್ನಲ್ ಪಾಲಲಿಸಿ, ವೀಲಿಂಗ್ ಬೇಡ ಎಂಬ ನಾಮಪಲಕಗಳನ್ನು ಹಿಡಿದು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಘೋಷಣೇಗಳನ್ನು ಕೂಗುತ್ತಾ ಸಾಗಿದರು.
ಇದೆ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಸಿದ್ದ ವಾಹನ ಸವಾರರಿಗೆ ವಿದ್ಯಾರ್ಥಿಗಳು ಹೂವು ನೀಡಿ ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ಪಾಲಿಸುವಂತೆ ಮನವರಿಕೆ ಮಾಡಿಕೊಟ್ಟರು. ಕೆಆರ್‌ಪುರ ಸಂಚಾರ ವೃತ್ತ ನಿರೀಕ್ಷಕ ಸಂಜೀವ್ ರಾಯಪ್ಪ, ಸಂಚಾರ ಸ್ವಯಂ ಸೇವಕರು, ಕೆ.ಆರ್.ಪುರ ವಿಧಾನಸಭೆ ಕ್ಷೇತ್ರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದ ಕೃಷ್ಣ, ಅರುಣ್ ಮೆನನ್, ಶಿಕ್ಷಕಕರು ಪಾಲ್ಗೊಂಡಿದ್ದರು.