Advertisement

‘ಸ್ಮಾರ್ಟ್ ಸಿಟಿ’ಗಾಗಿ ಸಿದ್ಧವಾಗುತ್ತಿದೆ

01:06 PM Oct 07, 2017 | Team Udayavani |

ಮಹಾನಗರ: ನಗರದ ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಸಿಸಿಕೆಮರಾಗಳು, ಸಂಚಾರ ವ್ಯವಸ್ಥೆಗೆ ಧಕ್ಕೆ ತಂದರೆ ಆಟೊ ಮೆಟಿಕ್‌ ಕ್ರಮ, ನಳ್ಳಿಯಲ್ಲಿ ನೀರು ಬಾರದಿದ್ದರೆ ಅದನ್ನು ಪತ್ತೆ ಹಚ್ಚಲು ತಂತ್ರಜ್ಞಾನದ ಕಣ್ಗಾವಲು, ನಳ್ಳಿ ಲೀಕೇಜ್‌ ಆದರೂ ತಂತ್ರಜ್ಞಾನದ ಮೂಲಕವೇ ಹುಡುಕಾಟ, ಬಸ್‌ಗಳ ಟ್ರ್ಯಾಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ, ತುರ್ತು ಪಬ್ಲಿಕ್‌ ರೆಸ್ಪಾನ್ಸ್‌ ಬಟನ್‌ ಅಳವಡಿಕೆ…!

Advertisement

ಇದು ಎಲ್ಲಿಯೋ ದೂರದ ಅಭಿವೃದ್ಧಿ ಹೊಂದಿದ ದೇಶದ ಮಾತಲ್ಲ, ನಮ್ಮಮಂಗಳೂರು ಇಂಥದ್ದೊಂದು ಬದಲಾವಣೆಗೆ ತೆರೆದುಕೊಳ್ಳಲಿದೆ!

ಇದಕ್ಕೆ ವೇದಿಕೆ ಒದಗಿಸುತ್ತಿರುವುದು ಕೇಂದ್ರ ಸರಕಾರದ ಕನಸಿನ ‘ಸ್ಮಾರ್ಟ್‌ ಸಿಟಿ’ ಯೋಜನೆ. ಇದರ ನಿರ್ವಹಣೆಯ ನೆಲೆಯಲ್ಲಿ ‘ಸೆಂಟ್ರಲ್‌ ಕಮಾಂಡ್‌ ಸೆಂಟರ್‌’ ಸುಮಾರು 60 ಕೋ.ರೂ. ವೆಚ್ಚದಲ್ಲಿ ಪಾಲಿಕೆಯ 3ನೇ ಮಹಡಿಯಲ್ಲಿ ಸಿದ್ಧಗೊಳ್ಳಲಿದೆ. ಈ ಸೆಂಟರ್‌ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಗೊಳಿಸಿ, ತಾಂತ್ರಿಕ ಒಪ್ಪಿಗೆಗಾಗಿ ಬೆಂಗಳೂರಿನ ಕೆಯುಐಡಿಎಫ್‌ಸಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿ ಒಪ್ಪಿಗೆ ದೊರೆತ ಬಳಿಕ, ಬೆಂಗಳೂರಿನ ಉನ್ನತ ಮಟ್ಟದ
ಸಮಿತಿಯಿಂದ ಆಡಳಿತಾತ್ಮಕ ಅನುಮತಿ ಪಡೆಯಬೇಕು. ಬಳಿಕ ಟೆಂಡರ್‌ ಕರೆದು ಈ ಸೆಂಟರ್‌ ಕಾರ್ಯಾರಂಭವಾಗಲಿದೆ. ಟೆಂಡರ್‌ ಪಡೆದವರು ಇದನ್ನು 5 ವರ್ಷಗಳವರೆಗೆ ನಿರ್ವಹಿಸಬೇಕು. ಬಳಿಕ ಪಾಲಿಕೆಗೆ ಹಸ್ತಾಂತರವಾಗಲಿದೆ. 

ಕಮಾಂಡ್‌ ಸೆಂಟ್ರಲ್‌ನಲ್ಲಿ ಇರಬೇಕಾದ ಎಲ್ಲ ರೀತಿಯ ವಿಶ್ವದರ್ಜೆಯ ಸಾಫ್ಟ್ವೇರ್‌, ಎಲ್‌ಇಡಿ ಟಿವಿ ಸಹಿತ ಸರ್ವ ಬಗೆಯ ತಾಂತ್ರಿಕ ಉಪಕರಣಗಳನ್ನು, ಟೆಂಡರ್‌ ಪಡೆದು ಗುತ್ತಿಗೆ ವಹಿಸಿ ಕೊಂಡವರು ಸಿದ್ಧಪಡಿಸಬೇಕಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ನುರಿತ ತಾಂತ್ರಿಕ ಸಿಬಂದಿಯನ್ನು ಸಂಬಂಧಿತ ಗುತ್ತಿಗೆ ವಹಿಸಿದ ಸಂಸ್ಥೆಯೇ 5 ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ. ವಿದೇಶದಲ್ಲಿ ಸಂಚಾರ ವ್ಯವಸ್ಥೆ ಸಹಿತ ಒಟ್ಟು ನಗರದ ದಿನಚರಿಯನ್ನು ಇಂತಹ ‘ಸೆಂಟರ್‌’ ಮೂಲಕವೇ ನಿಯಂತ್ರಿಸಲಾಗುತ್ತದೆ. ಮಾನವ ಶಕ್ತಿಗೆ ಇಲ್ಲಿ ಹೆಚ್ಚಿನ ಒತ್ತು ನೀಡದೆ, ಎಲ್ಲವೂ ಆಟೋಮೆಟಿಕ್‌ ಆಗಿರಲಿದೆ.

ಲಿಂಕ್‌ ಆಗಲಿದೆ ಎಲ್ಲ ಸಿಸಿಕೆಮರಾ
ಹಂಪನಕಟ್ಟೆ, ಕಾರ್‌ಸ್ಟ್ರೀಟ್‌, ಬಂದರು ವ್ಯಾಪ್ತಿ ಸೇರಿದ ಒಟ್ಟು 1,628 ಎಕರೆ ಭೂಮಿಯಲ್ಲಿ ಸ್ಮಾರ್ಟ್‌ ಸಿಟಿ ಕನಸು ನನಸಾಗಲಿದೆ. ಪೂರಕವಾಗಿ ನಗರದ ಇತರ ಭಾಗಗಳನ್ನು ಇದರೊಳಗೆ ಜೋಡಿಸಿಕೊಳ್ಳಲಾಗುತ್ತದೆ. ವಿಶೇಷವೆಂದರೆ ಮಂಗಳೂರು ವ್ಯಾಪ್ತಿಯ ಬಹು ಮುಖ್ಯ ಸಾರ್ವಜನಿಕ ಸ್ಥಳಗಳ ಸಿಸಿಕೆಮರಾಗಳ ಲಿಂಕ್‌ ಈ ಸೆಂಟರ್‌ನ ಜತೆಗೆ ಜೋಡಣೆಯಾಗಲಿದೆ. ಬಳಿಕ, ನಗರದ ಮಾಲ್‌ಗ‌ಳು, ಪುರಭವನ, ಪಾಲಿಕೆ, ಪಾರ್ಕ್‌, ಅಂಗಡಿಗಳು, ಸಭಾಗೃಹ ಸಹಿತ ಸಾರ್ವಜನಿಕ ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಎಲ್ಲ ಸಿಸಿಕೆಮರಾದ ಲಿಂಕ್‌ ಕೂಡ ‘ಸೆಂಟರ್‌’ನ ಜತೆಗೆ ಲಿಂಕ್‌ ಆಗಲಿದೆ.

Advertisement

ಅಂಡರ್‌ಗ್ರೌಂಡ್‌ ಕೇಬಲ್‌
ಪ್ರಸ್ತುತ ನಗರದ ಎಲ್ಲೆಂದರಲ್ಲಿ ಕೇಬಲ್‌ಗಳೇ ನೇತಾಡುತ್ತಿವೆ. ಇದಕ್ಕೆ ಮುಕ್ತಿ ನೀಡಲು ಸ್ಮಾರ್ಟ್‌ಸಿಟಿ ಸಿದ್ಧವಾಗಲಿದ್ದು, ರಸ್ತೆಯ ಮೇಲ್ಭಾಗದಲ್ಲಿ ನೇತಾಡುವ ಎಲ್ಲ ಕೇಬಲ್‌ಗಳು ಮುಂದೆ ಭೂಮಿಯೊಳಗಿರಲಿದೆ. ಇಲ್ಲೂ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ‘ಸೆಂಟ್ರಲ್‌ ಕಮಾಂಡ್‌
ಸೆಂಟರ್‌’ ಕಾರ್ಯಾಚರಿಸಲಿದೆ.

ರಸ್ತೆಗಳು ಹೈಫೈ
ಸ್ಮಾರ್ಟ್‌ಸಿಟಿ ವ್ಯಾಪ್ತಿಯಲ್ಲಿ ಮೊದಲ ಆದ್ಯತೆಯಂತೆ ಸುಸಜ್ಜಿತ ರಸ್ತೆಗಳು ಹಾಗೂ ಯುಜಿಡಿಗೆ ಪ್ರತ್ಯೇಕ ಹಾಗೂ ಸುಸಜ್ಜಿತ ರೀತಿಯ ಹೊಸ ನೆಟ್‌ವರ್ಕ್‌ ರೂಪುಗೊಳ್ಳಲಿದೆ.

ರೇಡಿಯೋಫ್ರಿ ಕ್ವೆನ್ಸಿ ಐಡೆಂಟಿಫಿಕೇಶನ್‌ ಅಳವಡಿಸಿ ಕಸದ ತೊಟ್ಟಿ, 400 ಸ್ವಯಂ ಚಾಲಿತ ತ್ಯಾಜ್ಯ ನಿರ್ವಹಣ ವಾಹನ, 100 ಸಾರ್ವಜನಿಕ ಶೌಚಗೃಹ, 350 ಸಿಸಿಕೆಮರಾ ಅಳವಡಿಸಿದ ಟ್ರಾಫಿಕ್‌ ವ್ಯವಸ್ಥೆ, 750 ಬಸ್‌ ಟ್ರ್ಯಾಕಿಂಗ್‌ ವ್ಯವಸ್ಥೆ, 150 ವೈಫೈ ಕೇಂದ್ರ, 200 ಮಾಹಿತಿ ಬೋರ್ಡ್‌, 20 ವಾಕ್‌ ವೇ, 30 ಅತ್ಯಾಧುನಿಕ ಸೌಲಭ್ಯದ ಆ್ಯಂಬುಲೆನ್ಸ್‌, 20 ಕಿ.ಮೀ ಸೈಕಲ್‌ ಪಥ, 100 ಸಾರ್ವಜನಿಕ ಶೌಚಗೃಹ ಸಹಿತ ಹಲವು ಕನಸುಗಳು ಸ್ಮಾರ್ಟ್‌ ಮಂಗಳೂರಿನ ಪ್ರಸ್ತಾವನೆಯಲ್ಲಿವೆ.

‘ಒಂದು ತಿಂಗಳ ಒಳಗೆ ಟೆಂಡರ್‌’
ಸ್ಮಾರ್ಟ್‌ಸಿಟಿಯ ಬಹುಮುಖ್ಯ ಅಂಶವಾಗಿರುವ ‘ಸೆಂಟ್ರಲ್‌ ಕಮಾಂಡ್‌ ಸೆಂಟರ್‌’ ನಿರ್ಮಾಣಕ್ಕೆ ಈ ತಿಂಗಳಿನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು. 60 ಕೋ.ರೂ. ವೆಚ್ಚದಲ್ಲಿ ಈ ಸೆಂಟರ್‌ ರಚನೆಯಾಗಲಿದೆ.ಸ್ಮಾರ್ಟ್‌ಸಿಟಿ ಯೋಜನೆಯ ಮುಂದಿನ ಸಭೆ ಈ ತಿಂಗಳಲ್ಲೇ ನಡೆಯಲಿದೆ.
ಮಹಮ್ಮದ್‌ ನಝೀರ್‌,
ಪಾಲಿಕೆ ಆಯುಕ್ತರು

ನಳಿಗಳೂ ಸ್ಮಾರ್ಟ್ ಆಗಲಿವೆ…!
ನಗರದ ಈಗಿನ ನಳ್ಳಿಗಳ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಆದರೆ, ಮುಂದೆ ಇಂತಹ ನಳ್ಳಿಗಳನ್ನು ಕೂಡ ಸ್ಮಾರ್ಟ್‌ ಮಾಡಲು ಸಿದ್ಧತೆ ನಡೆಯುತ್ತಿದ್ದು, ಎಲ್ಲ ನಳ್ಳಿಗಳ ಲಿಂಕ್‌ಗಳನ್ನು ತಂತ್ರಜ್ಞಾನದ ಮೂಲಕ ‘ಸೆಂಟ್ರಲ್‌ ಕಮಾಂಡ್‌ ಸೆಂಟರ್‌’ಗೆ ತಲುಪಿಸಲಾಗುತ್ತದೆ. ನೀರು ಪೋಲಾದರೆ, ಪೈಪ್‌ನಲ್ಲಿ ದೋಷ ಕಂಡುಬಂದರೆ ತತ್‌ಕ್ಷಣವೇ ಅದರ ಮಾಹಿತಿ ಸೆಂಟರ್‌ಗೆ ತಲುಪಲಿದ್ದು, ಅಲ್ಲಿಂದಲೇ ಸರಿಪ ಡಿಸಲಾಗುತ್ತದೆ. ಜತೆಗೆ, ಕುಡಿಯುವ ನೀರನ್ನು ಪ್ರತ್ಯೇಕ ನಳ್ಳಿಯ ಮೂಲಕ ನೀಡಿದರೆ, ಇತರ ಬಳಕೆಗೆ ಸಂಸ್ಕರಿತ ನೀರನ್ನು ನೀಡುವ ಪ್ರತ್ಯೇಕ ನಳ್ಳಿ ವ್ಯವಸ್ಥೆ ಜಾರಿಗೂ ಪ್ರಸ್ತಾವನೆಗಳು ಇವೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next