ಭಾರತೀನಗರ: ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಸತತ 5 ತಿಂಗಳ ಕಾಲ ಹೋರಾಡಿದ್ದ ವ್ಯಕ್ತಿಗೆ ಮದ್ದೂರು ತಾಲೂಕು ಭಾರತೀನಗರದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಮರು ಜೀವ ನೀಡಿದ್ದಾರೆ.
ಕೊನೆ ಪ್ರಯತ್ನ: ಮೂಲತಃ ಜಿಲ್ಲೆಯ ಗಡಿ ಗ್ರಾಮ ಮುತ್ತತ್ತಿಯ 32 ವರ್ಷದ ಯುವಕ ರಘು ಎಂಬಾತನಿಗೆ ಕಳೆದ ವರ್ಷ ನವೆಂಬರ್ ನಲ್ಲಿ ತನ್ನ ಬೈಕ್‌ನಲ್ಲಿ ಬನ್ನೂರು ಕಡೆ ತೆರಳುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದ ರಭಸದಲ್ಲಿ ಗಂಭೀರ ಗಾಯಗೊಂಡಿದ್ದ ರಘು ಮಂಡ್ಯ ಆಸ್ಪತ್ರೆ, ಮೈಸೂರಿನ ಖಾಸಗಿ ಆಸ್ಪತೆಗಳಲ್ಲಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೋಮಾ ಸ್ಥಿತಿಗೆ ತೆರಳಿದ್ದ ರಘುನನ್ನು ಉಳಿಸಿಕೊಳ್ಳ ಬೇಕೆಂದು ಸಹೋದರ ರಕ್ಷಿತ್ ಕೊನೆಗೆ ಭಾರತೀನಗರದಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಕೊನೆಯ ಪ್ರಯತ್ನ ನಡೆಸಿದ್ದರು.
ಇಲ್ಲಿನ ವೈದ್ಯ ಸಮೂಹ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ರಘುವಿನ ಟೆಂಪೋರಲ್‌ಭಾಗದಲ್ಲಿ (ತಲೆಯ ಭಾಗ) ಎರಡು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿ ಕೊನೆಗೂ ಆತನಿಗೆ ಪ್ರಜ್ಞೆ ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ತನ್ನ ಸಹೋದರ ಬದುಕುತ್ತಾನೆಯೇ ಎಂದು ತನ್ನೊಳಗೇ ಪ್ರಶ್ನಿಸಿಕೊಂಡಿದ್ದ ಸಹೋದರನ ಮುಖದಲ್ಲಿ ನಗುತರಿಸಿವೈದ್ಯೋನಾರಾಯಣ ಹರಿ ಎಂಬುವುದನ್ನು ಸಾಬೀತುಪಡಿಸಿದ್ದಾರೆ.ಈಗ ರಘು ತನ್ನವರನ್ನು ಗುರುತಿಸುವುದಲ್ಲದೇ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ವೈದ್ಯರಿಗೂ ಸಮಾಧಾನ ತರಿಸಿದೆ.
ಹಲವರು ಗುಣಮುಖರಾಗಿ ಮನೆಗೆ :
ರಘುನಂತಹ ಹಲವಾರು ಪ್ರಕರಣಗಳು ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿವೆ. ರಘುವಿನಂತಹ ಹಲವಾರು ರೋಗಿಗಳು ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ. ಗ್ರಾಮೀಣ ಭಾಗ ದಲ್ಲಿ ತಲೆಎತ್ತಿರುವ ಆಸ್ಪತ್ರೆ ಇಂತಹ ರೋಗಿಗಳನ್ನು ಉಳಿಸುವಲ್ಲಿಯಶಸ್ವಿ ಕಂಡಿದೆ ಎಂದು ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಸುನೀಲ್ ತಿಳಿಸಿದ್ದಾರೆ.
ನಮ್ಮ ಅಣ್ಣ ರಘು ಬದುಕುಳಿದಿರುವುದು ಒಂದು ಪವಾಡ. ನಾವು ಹಲವು ಕಡೆ ಚಿಕಿತ್ಸೆ ಕೊಡಿಸಿದೆವು. 5 ತಿಂಗಳಿಂದ ನಮ್ಮ ಅಣ್ಣ ಬದುಕುತ್ತಾನೆ ಎಂಬ ನಂಬಿಕೆಯೇ ಇರಲಿಲ್ಲ. ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ
-ರಕ್ಷಿತ್, ರೋಗಿಯ ಸಹೋದರ