ಗಂಗೊಳ್ಳಿ: ನಮ್ಮ ದೈನಂದಿನ ಜೀವನದಲ್ಲಿ ಇಂಗ್ಲಿಷ್ ಆವಶ್ಯಕತೆ ಇದೆ ಎಂದು ಕನ್ನಡ ಭಾಷೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ಮಾತೃ ಭಾಷೆಯ ಮೇಲೆ ಎಲ್ಲರಿಗೂ ಪ್ರೀತಿ, ಅಭಿಮಾನವಿರಬೇಕು ಎಂದು ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್ ಹೇಳಿದರು.
ಮೇಲ್ಗಂಗೊಳ್ಳಿ ಸರಕಾರಿ ಕಿ.ಪ್ರಾ. (ಹವೇ) ಶಾಲೆಯಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಎಲ್ಲರೂ ಪ್ರಯತ್ನಿಸಬೇಕು. ಮಕ್ಕಳ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಲು ಪೂರ್ವ ಪ್ರಾಥಮಿಕ ತರಗತಿಗಳು ಸಹಕಾರಿಯಾಗುತ್ತವೆೆ ಎಂದರು.
ಗಂಗೊಳ್ಳಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಶಿವಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್‌ಐ ವಾಸಪ್ಪ ನಾಯ್ಕ ಮತ್ತು ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ. ಮಕ್ಕಳಿಗೆ ಪಠ್ಯ ಪುಸ್ತಕ, ನೋಟ್ ಪುಸ್ತಕ ಹಾಗೂ ಸ್ಕೂಲ್ ಬ್ಯಾಗ್ ವಿತರಿಸಿದರು.
ಗ್ರಾ.ಪಂ. ಸದಸ್ಯ ಬಿ. ರಾಘವೇಂದ್ರ ಪೈ, ಶಿಕ್ಷಕಿ ಸುನೀತಾ ದಿನೇಶ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಎಸ್‌ಆರ್‌ಜಿ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಈಶ್ವರ, ಉಪಾಧ್ಯಕ್ಷ ನಾಗರಾಜ್ ಎಂ.ಜಿ. ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ರಮೇಶ ಮಹಾಲೆ ಸ್ವಾಗತಿಸಿದರು. ಸುಂದರ ಜಿ. ನಿರ್ವಹಿಸಿದರು.