Advertisement

ಯುವಜನತೆ ಕೌಶಲ್ಯಾಧಾರಿತ ತರಬೇತಿ ಪಡೆಯಿರಿ

09:26 PM Jun 22, 2019 | Lakshmi GovindaRaj |

ಚಾಮರಾಜನಗರ: ಯುವಕರು ಸರ್ಕಾರಿ ಹುದ್ದೆಗಳನ್ನು ಮಾತ್ರ ಪಡೆಯಲು ಮುಂದಾಗದೇ ಕೌಶಲ್ಯಾಧಾರಿತ ತರಬೇತಿ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಸಲಹೆ ಮಾಡಿದರು.

Advertisement

ನಗರದ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಅವರಣದಲ್ಲಿ ಕೌಶಲ್ಯ ವಿಕಾಸ ಯೋಜನೆಯಡಿ ಶನಿವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧೆಡೆ ಕೇಂದ್ರಗಳ ಸ್ಥಾಪನೆ: ಶಿಕ್ಷಣ ಮುಗಿಸಿದ ಎಲ್ಲರಿಗೂ ಸರ್ಕಾರ ಕೆಲಸ ನೀಡಲು ಸಾದ್ಯವಾಗುವುದಿಲ್ಲ. ಯುವಸಮೂಹ ಇದನ್ನು ಅರಿತು ವಿವಿಧ ಕೌಶಲ್ಯ ತರಬೇತಿ ಪಡೆದು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಪ್ರಧಾನಮಮತ್ರಿ ಕೌಶಲ್ಯ ಕೇಂದ್ರಗಳನ್ನು ದೇಶದ ವಿವಿಧಡೆ ಸ್ಥಾಪಿಸಿದೆ ಎಂದರು.

ಮೂಲಭೂತ ಸೌಲಭ್ಯಗಳಿಗೆ ಗಮನ ಹರಿಸಬೇಕು: ಈ ಭಾಗದಲ್ಲಿ ಕೈಗಾರಿಕಾ ಪ್ರದೇಶಗಳು ಕಡಿಮೆ ಇವೆ. ಕೈಗಾರಿಕೆಗಳನ್ನು ಹೆಚ್ಚಿನ ಮಟ್ಟದಲ್ಲಿ ನಮ್ಮ ಜಿಲ್ಲೆಯಲ್ಲೂ ತೆರೆಯಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ನಗರದ ಹೊರವಲಯದಲ್ಲಿರುವ ಬದನಗುಪ್ಪೆ, ಕೆಲ್ಲಂಬಳ್ಳಿಯಲ್ಲಿ ಕೈಗಾರಿಕಾ ವಲಯದ ಪ್ರಗತಿಯಾಗುತ್ತಿದೆ. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಮೊದಲು ಅಲ್ಲಿನ ಕುಡಿಯುವ ನೀರು, ರಸ್ತೆ, ವಿದ್ಯುತ್‌ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಿಗೆ ಗಮನ ಹರಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಸಮಸ್ಯೆ ನಿವಾರಣೆಗೆ ಸಾಧ್ಯ: ಕೌಶಲ್ಯಾಧಾರಿತ ತರಬೇತಿ ಪಡೆದ ಯುವಕ ಯುವತಿಯರಿಗೆ ಅನುಕೂಲವಾಗುವಂತೆ ಉದ್ಯೋಗ ಮೇಳಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಯುವಕರು ಇಂತಹ ಉದ್ಯೋಗ ಮೇಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

Advertisement

ಪ್ರಮುಖ ಯೋಜನೆ: ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ವ್ಯವಸ್ಥಾಪಕ ಎಂ.ಜಿ. ಚಂದನ್‌,ದೇಶದ ನಿರುದ್ಯೋಗ ನಿವಾರಿಸಲು ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಮಂತ್ರಾಲಯ ರೂಪಿಸಿರುವ ಪ್ರಮುಖ ಯೋಜನೆ ಇದಾಗಿದೆ. ದೇಶದಲ್ಲಿರುವ ಹೆಚ್ಚಿನ ಸಂಖ್ಯೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ವೃತ್ತಿ ಆಧಾರಿತ ಕೌಶಲ್ಯ ತರಬೇತಿ ನೀಡಿ ಅವರ ಜೀವನಮಟ್ಟ ಉತ್ತಮಪಡಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಯುವಜನತೆಗೆ ತರಬೇತಿ: ಚಾಮರಾಜನಗರದಲ್ಲಿ 2017ರಲ್ಲಿ ಆರಂಭವಾದ ಪ್ರಧಾನಮಂತ್ರಿ ಕೌಶಲ್ಯ ತರಬೇತಿ ಕೇಂದ್ರವು ರಿಟೇಲ್‌ ಸೇಲ್ಸ್‌ ಅಸೋಸಿಯೇಟ್ಸ್‌, ಅಸಿಸ್ಟೆಂಟ್‌ ಎಲೆಕ್ಟ್ರಿಷಿಯನ್‌ ಮತ್ತು ಫ‌ುಡ್‌ ಬೇವರೇಜಸ್‌ ವಿಷಯಗಳ ಕುರಿತು ತರಬೇತಿ ನೀಡುತ್ತಿದೆ. ಜೊತೆಗೆ ಬೇಸಿಕ್‌ ಕಂಪ್ಯೂಟರ್‌ ಹಾಗೂ ನ್ಪೋಕನ್‌ ಇಂಗ್ಲಿಷ್‌ ಕುರಿತು ತರಬೇತಿ ಸಹ ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ನೂರಾರು ಮಂದಿ ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು, ನಂಜನಗೂಡಿನ ವಿವಿಧ ಕಂಪನಿಗಳಲ್ಲಿ ಕೆಲಸ ಪಡೆದಿದ್ದಾರೆ. ಸಾಕಷ್ಟು ಗುಣಮಟ್ಟದ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ದೇಶದಲ್ಲೇ 2ನೇ ಸ್ಥಾನ: 2017-18ನೇ ಸಾಲಿನಲ್ಲಿ ಉತ್ತಮ ಕೌಶಲ್ಯ ತರಬೇತಿ ನೀಡಿ ವಿದ್ಯಾರ್ಥಿಗಳಿಗೆ ಸೂಕ್ತ ಕೆಲಸ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ನಗರದ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ದೇಶದಲ್ಲಿಯೆ 2ನೇ ಸ್ಥಾನ ಪಡೆದಿತ್ತು ಎಂದು ಚಂದನ್‌ ಹೇಳಿದರು.

ಮೈಸೂರಿನ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಕೇಂದ್ರದ ವ್ಯವಸ್ಥಾಪಕ ಪರಮೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಪಡೆದು ಉತ್ತಮ ಸಾಧನೆ ಮಾಡಿರುವ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕೇಂದ್ರದ ಸಂಯೋಜಕರು ತರಬೇತುದಾರರು, ಸಿಬ್ಬಂದಿ, ವಿದ್ಯಾರ್ಥಿಗಳು, ಉದ್ಯೋಗಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next