Advertisement

ದುಬಾಯಿ: ಭಾರತೀಯ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ ದಿನವೇ ತತ್ಕಾಲ್ ನೀಡುವ ವಿಶೇಷ ಆಫರ್

09:58 AM Jan 13, 2020 | Hari Prasad |

ದುಬಾಯಿ: ಯುನೈಟೆಡ್ ಅರಬ್ ಎಮಿರೇಟ್ಸ್ ಗಳಲ್ಲಿ (UAE) ವಾಸಿಸುತ್ತಿರುವ ಅನಿವಾಸಿ ಭಾರತೀಯರಿಗಾಗಿ ಭಾರತದ ರಾಯಭಾರ ಕಛೇರಿ ಹೊಸ ಕೊಡುಗೆಯ ಘೋಷಣೆಯೊಂದನ್ನು ಮಾಡಿದೆ. ರವಿವಾರದಿಂದ ಭಾರತೀಯ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವ ಅನಿವಾಸಿ ಭಾರತೀಯರಿಗೆ ಅದೇ ದಿನ ತತ್ಕಾಲ್ ಪಾಸ್ ಪೋರ್ಟ್ ಗಳನ್ನು ನೀಡುವುದಾಗಿ ದುಬಾಯಿಯಲ್ಲಿ ಭಾರತೀಯ ದೂತವಾಸ ಅಧಿಕಾರಿಯಾಗಿರುವ ವಿಪುಲ್ ಅವರು ಘೋಷಿಸಿದ್ದಾರೆ.

Advertisement

ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿಪುಲ್ ಅವರು ಈ ಘೋಷಣೆಯನ್ನು ಮಾಡಿದರು. ಭಾರತೀಯ ಪಾಸ್ ಪೋರ್ಟ್ ಮತ್ತು ವೀಸಾ ಅರ್ಜಿಗಳ ವಿಲೇವಾರಿಗಾಗಿರುವ ಹೊರಗುತ್ತಿಗೆ ಸಂಸ್ಥೆ ಬಿ.ಎಲ್.ಎಸ್. ಇಂಟರ್ ನ್ಯಾಷನಲ್ ಕಛೇರಿಯಲ್ಲಿ ಅರ್ಜಿಸಲ್ಲಿಸುವ ಮೂಲಕ ಈ ಸೌಲಭ್ಯವನ್ನು ಅನಿವಾಸಿ ಭಾರತೀಯರು ಪಡೆದುಕೊಳ್ಳಬಹುದಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬುರ್ ದುಬಾಯಿಯಲ್ಲಿರುವ ಅಲ್ ಖಲೀಜಾ ಸೆಂಟರ್ ನಲ್ಲಿ ಬಿ.ಎಲ್.ಎಸ್. ಇಂಟರ್ ನ್ಯಾಷನಲ್ ನ ಕಛೇರಿ ಇದೆ. ಆಯಾ ದಿನ ಮಧ್ಯಾಹ್ನ 12 ಗಂಟೆಗಳೊಳಗಾಗಿ ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸುವವರಿಗೆ ತತ್ಕಾಲ್ ಪಾಸ್ ಪೋರ್ಟನ್ನು ಅದೇ ದಿನ ನೀಡಲಾಗುತ್ತದೆ. ಭಾರತೀಯ ಪಾಸ್ ಪೋರ್ಟ್ ಮತ್ತು ವೀಸಾ ಸೇವೆಗಳಿಗಾಗಿ ಯು.ಎ.ಇ.ಯಾದ್ಯಂತ 17 ಬಿ.ಎಲ್.ಎಸ್. ಕೇಂದ್ರಗಳಿವೆ.

ತತ್ಕಾಲ್ ಪಾಸ್ ಪೋರ್ಟ್ ಪಡೆದುಕೊಳ್ಳಲು ತಗಲುವ ವೆಚ್ಚ:
– 36 ಪುಟಗಗಳಿಗೆ 855 ಧಿರ್ಹಾಮ್ (16,524 ರೂಪಾಯಿಗಳು)

– 60 ಪುಟಗಳಿಗೆ 950 ಧಿರ್ಹಾಮ್ (18,359 ರೂಪಾಯಿಗಳು)

Advertisement

ಮತ್ತು ಇದಕ್ಕೆ ಹೊರತಾಗಿ ಹೆಚ್ಚುವರಿ ಸೇವಾ ಶುಲ್ಕಗಳು ಮತ್ತು ಭಾರತೀಯ ಸಮುದಾಯ ಕಲ್ಯಾಣ ನಿಧಿ ಶುಲ್ಕಗಳೂ ಅನ್ವಯವಾಗುತ್ತವೆ.

ಇನ್ನು ಪ್ರಿಮಿಯರ್ ಲಾಂಜ್ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಪಾಸ್ ಪೋರ್ಟ್ ವೆಚ್ಚ 1,212 ಧಿರ್ಹಾಮ್ ಗಳಾಗಲಿವೆ (23,423 ರೂಪಾಯಿಗಳು). ಪ್ರಿಮಿಯಮ್ ಲಾಂಜ್ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಅಲ್ ಖಲೀಜಾ ಸೆಂಟರ್ ನ ಸೇವಾ ನಿಯಮಗಳಲ್ಲಿ ಒಂದಾದ ಕಾಯುವಿಕೆ ಅವಧಿಯನ್ನು ತಪ್ಪಿಸಬಹುದಾಗಿರುತ್ತದೆ.

ಯಾವೆಲ್ಲಾ ದಾಖಲೆಗಳು ಅಗತ್ಯವಿದೆ?

– ಮೂಲ ಪಾಸ್ ಪೋರ್ಟ್

– ಎಮಿರೇಟ್ಸ್ ಗುರುತಿನ ಪತ್ರ

– 2×2 ಗಾತ್ರದ 2 ಪಾಸ್ ಪೋರ್ಟ್ ಗಾತ್ರ ಭಾವ ಚಿತ್ರಗಳು

ಭಾವ ಚಿತ್ರಗಳ ಹಿನ್ನಲೆ ಬಿಳಿ ಬಣ್ಣದಲ್ಲೇ ಇರಬೇಕು ಮತ್ತು ಭಾವಚಿತ್ರದಲ್ಲಿರುವ ವ್ಯಕ್ತಿ ಗಾಢ ಬಣ್ಣದ ಬಟ್ಟೆ ಧರಿಸಿರಬೇಕು. ಹಾಗೂ ಈ ಭಾವಚಿತ್ರ ಮೂರು ತಿಂಗಳುಗಳಿಗಿಂತ ಹಿಂದಿನದ್ದಾಗಿರಬಾರದು.

Advertisement

Udayavani is now on Telegram. Click here to join our channel and stay updated with the latest news.

Next