Advertisement

ಚೆಂದ ಕಳೆದುಕೊಂಡಿದೆ ಚಿಟಗುಪ್ಪಿ ಪಾರ್ಕ್‌

01:42 PM Apr 25, 2019 | Team Udayavani |
ಹುಬ್ಬಳ್ಳಿ: ಮಹಾನಗರದ ಮೊದಲ ಹಾಗೂ ನೂರು ವರ್ಷ ಪೂರೈಸಿರುವ ಚಿಟಗುಪ್ಪಿ ಉದ್ಯಾನವನ ಮೂಲ ಅಸ್ತ್ತಿತ್ವ ಕಳೆದುಕೊಳ್ಳುತ್ತಿದ್ದು, ಉದ್ಯಾನದಲ್ಲಿ ಹತ್ತು ಹಲವು ಕಟ್ಟಡಗಳ ಒಕ್ಕರಿಸಿಕೊಳ್ಳುವುದರೊಂದಿಗೆ ಇದೀಗ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಡುತ್ತಿದೆ.

ಹೆಸರಿಗೆ ಮಾತ್ರ ಇದೊಂದು ಉದ್ಯಾನವಾಗಿ ಉಳಿದುಕೊಂಡಿದ್ದು, ಅಂದದ ಗಿಡಗಳಿಲ್ಲ. ಹಸಿರಂತೂ ಕಾಣುವುದೇ ಇಲ್ಲ. ನಗರದ ಕೇಂದ್ರ ಭಾಗದಲ್ಲಿ ಇಂದಿರಾ ಗಾಜಿನಮನೆ ಉದ್ಯಾನ ಹೊರತುಪಡಿಸಿದರೆ ಮತ್ತೂಂದು ಉದ್ಯಾನವಿಲ್ಲ. ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ನಗರದ ಇತಿಹಾಸ ಹೇಳುವ ಚಿಟಗುಪ್ಪಿ ಆಸ್ಪತ್ರೆ, ಸಂಸದರ ಕಚೇರಿ, ಪಾಲಿಕೆ ಆಯುಕ್ತರ ನಿವಾಸ ಇಲ್ಲೇ ಇದ್ದರೂ ಪುರಾತನ ಉದ್ಯಾನ ಉಳಿಸಿಕೊಳ್ಳುವ ಇಚ್ಛಾಶಕ್ತಿ ಯಾರಲ್ಲೂ ಇಲ್ಲ. ಹೀಗಾಗಿ ಪಾಲಿಕೆ ದಿವ್ಯ ನಿರ್ಲಕ್ಷ್ಯ ಪರಿಣಾಮ ಉದ್ಯಾನಕ್ಕಿಂತ ಇತರೆ ಕಾರ್ಯಗಳಿಗೆ ಇದು ಬಳಕೆಯಾಗುತ್ತಿದ್ದು, ಪಾಲಿಕೆ ಆಯುಕ್ತರ, ಅಧಿಕಾರಿಗಳ ಕಣ್ಣೆದುರೆ ಚಿಟಗುಪ್ಪಿ ಉದ್ಯಾನ ವಾಹನಗಳ ನಿಲುಗಡೆಯ ತಾಣವಾಗುತ್ತಿದೆ.

Advertisement

ಪಾರ್ಕಿಂಗ್‌ ಸ್ಥಳವಾಗುತ್ತಿದೆ: ಬಿಆರ್‌ಟಿಎಸ್‌ ರಸ್ತೆ ಅಗಲೀಕರಣಕ್ಕಾಗಿ ಪಾಲಿಕೆಯ ಕಾಂಪೌಡ್‌ ತೆರವುಗೊಳಿಸಿದ ನಂತರದಿಂದ ಈ ಉದ್ಯಾನ ಪಾರ್ಕಿಂಗ್‌ ಸ್ಥಳವಾಗಿ ರೂಪಗೊಂಡಿದೆ. ವಾಹನ ಓಡಾಟಕ್ಕೆ ಅಕ್ರಮವಾಗಿ ಪ್ರವೇಶ ದ್ವಾರ ಕೂಡ ಮಾಡಲಾಗಿದೆ. ದೊಡ್ಡ ಕಾಂಪೌಂಡ್‌, ಮಹಾದ್ವಾರ ನಿರ್ಮಿಸಿದ ಪಾಲಿಕೆ ಅಧಿಕಾರಿಗಳು ಉದ್ಯಾನದ ಕಾಂಪೌಂಡ್‌ ನಿರ್ಮಾಣ ಮಾಡದಿರುವುದು ವಾಹನಗಳ ನಿಲುಗಡೆಗೆ ಅನುವು ಮಾಡಿಕೊಟ್ಟಂತಾಗಿದೆ. ಪಾಲಿಕೆ ಅಧಿಕಾರಿಗಳ ಹಾಗೂ ಸಿಬ್ಬಂದಿಯ ವಾಹನಗಳ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದೆ. ಇನ್ನೂ ಬೇರೆಡೆಗೆ ತೆರಳುವವರು ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಇದಕ್ಕಾಗಿ ಓರ್ವ ಭದ್ರತಾ ಸಿಬ್ಬಂದಿಯೂ ಕೆಲಸ ನಿರ್ವಹಿಸುತ್ತಿರುವುದು ಪಾಲಿಕೆ ಮೂರಾಬಿಟ್ಟಿಯ ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಾಹನಗಳ ಓಡಾಟದಿಂದ ಉದ್ಯಾನದ ಒಂದು ಭಾಗ ಸಂಪೂರ್ಣ ಹಾಳಾಗಿದೆ.

ವ್ಯವಸ್ಥಿತ ತಂತ್ರಗಾರಿಕೆ!: ಚಿಟಗುಪ್ಪಿ ಎನ್ನುವ ದೊಡ್ಡ ಕುಟುಂಬ ಈ ಜಾಗವನ್ನು ಆಸ್ಪತ್ರೆ ಹಾಗೂ ಉದ್ಯಾನಕ್ಕಾಗಿ ದಾನ ಮಾಡಿದ್ದರು. 1980 ದಶಕದ ಸುಮಾರಿಗೆ ಸಿದ್ಧಾರೂಢಮಠದ ಬಳಿಯಲ್ಲಿ ಈ ಕುಟುಂಬ ದಾನ ನೀಡಿದ್ದ ಜಾಗವನ್ನು ಅಂದಿನ ಪಾಲಿಕೆ ಆಯುಕ್ತರೊಬ್ಬರು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದು ನಗರದ ಜನತೆಗೆ ತಿಳಿದಿರುವ ಸಂಗತಿಯಾಗಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ಜಾಗವನ್ನು ಮಾರಾಟ ಮಾಡಲು ಸಾಧ್ಯವಿಲ್ಲದ ಪರಿಣಾಮ ಸಾರ್ವಜನಿಕರ ಉಪಯೋಗಕ್ಕಾಗಿ ಎನ್ನುವ ಹೆಸರನಲ್ಲಿ ಈಗಾಗಲೇ ಹವಾಮಾನ ಇಲಾಖೆಯ ಕೇಂದ್ರ, ಹೊಟೇಲ್, ಜೈವಿಕ ಅನಿಲ ಉತ್ಪಾದನಾ ಘಟಕ, ಕುಡಿಯುವ ನೀರಿನ ಘಟಕ, ಶಿವಾಜಿ ಪ್ರತಿಮೆ ಸ್ಥಾಪನೆ, ಗುಜರಿ ಸಾಮಗ್ರಿಗಳ ಸಂಗ್ರಹ ಸ್ಥಳ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಂತಹಂತವಾಗಿ ಹಂಚಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ಉದ್ಯಾನ ಖಾಸಗಿಯವರ ಪಾಲಾದರೂ ಅಚ್ಚರಿಪಡಬೇಕಿಲ್ಲ.

ಪಾಲಿಕೆಯ ದಿವ್ಯ ನಿರ್ಲಕ್ಷ್ಯ: ಪಾಲಿಕೆ ಆಯುಕ್ತ, ಮಹಾಪೌರರಿಂದ ಹಿಡಿದು ಯಾರಿಗೂ ಈ ಉದ್ಯಾನದ ಕಾಳಜಿ ಬೇಡವಾಗಿದೆ. ಪಾಲಿಕೆ ಕೇಂದ್ರ ಕಚೇರಿ ಪಕ್ಕದಲ್ಲಿನ ಉದ್ಯಾನದ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಉಳಿದ ಉದ್ಯಾನವನಗಳ ದುಸ್ಥಿತಿ ಕಲ್ಪನೆ ಮಾಡಿಕೊಳ್ಳಲು ಅಸಾಧ್ಯ. ಪ್ರತಿ ವರ್ಷ ಉದ್ಯಾನಗಳ ನಿರ್ವಹಣೆಗೆ ಕೋಟಿಗಟ್ಟಲೆ ಹಣ ಸುರಿಯಲಾಗುತ್ತದೆ. ಇವುಗಳ ನಿರ್ವಹಣೆಗೆ ತೋಟಗಾರಿಕೆ ವಿಭಾಗ ಇರುವುದು ದಂಡಕ್ಕೆ ಎಂಬಂತಾಗಿದೆ. ಇವರ ದಿವ್ಯ ನಿರ್ಲಕ್ಷ ಪರಿಣಾಮ ನಗರದ ಮೊದಲ ಉದ್ಯಾನ ಇಂದು ಕುಡುಕರ, ವೇಶ್ಯಾವಾಟಿಕೆ ತಾಣವಾಗುತ್ತಿದೆ. ಕೊಳಗಳು ಕಸದ ತೊಟ್ಟಿಯಾಗಿ ಗಬ್ಬು ನಾರುತ್ತಿವೆ. ವಿವಿಧ ಯೋಜನೆಗಳ ಹೆಸರಲ್ಲಿ ಬೇಕಾಬಿಟ್ಟಿಯಾಗಿ ಉದ್ಯಾನದ ಜಾಗ ಬಿಕರಿಯಾಗುತ್ತಿದೆ.

ಚಿಟಗುಪ್ಪಿ ಉದ್ಯಾನವನ್ನು ಬೇಕಾಬಿಟ್ಟಿ ಬಳಕೆಯಿಂದ ಮುಕ್ತಿಗೊಳಿಸುವ ಕಾರ್ಯ ಅಧಿಕಾರಿಗಳಿಂದ ಆಗಬೇಕಿದ್ದು, ಸ್ಮಾರ್ಟ್‌ ಸಿಟಿ ಯೋಜನೆಯನ್ನು ಕೇವಲ ಕಾಂಕ್ರೀಟೀಕರಣಕ್ಕೆ ಮಾತ್ರ ಸೀಮಿತಗೊಳಿಸದೆ ಇಂತಹ ಉದ್ಯಾನಗಳ ಅಭಿವೃದ್ಧಿಗೆ ಚಿಂತನೆಯಾಗಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

ಬೇರೆಡೆಯಿಂದ ಬರುವ ಅಧಿಕಾರಿಗಳು ಒಂದೆರೆಡು ವರ್ಷವಿದ್ದು ಹೋಗುತ್ತಾರೆ. ಆದರೆ ಈ ನಗರದ ಜನಪ್ರತಿನಿಧಿಗಳಿಗೆ ಇತಿಹಾಸ ಸಾರುವ ಉದ್ಯಾನ ಉಳಿಸಿಕೊಳ್ಳಬೇಕು ಎನ್ನುವ ಮನಸ್ಥಿತಿಯಿಲ್ಲ. ಅಧಿಕಾರಿಗಳ ವೈಫ‌ಲ್ಯ ಒಂದೆಡೆಯಾದರೆ, ಜನಪ್ರತಿನಿಧಿಗಳಾದ ನಮ್ಮಲ್ಲಿ ನಗರದ ಮೊದಲ ಉದ್ಯಾನ ಅಭಿವೃದ್ಧಿಯ ಚಿಂತನೆಯಿಲ್ಲ. ವಾಣಿಜ್ಯಕರಣಕ್ಕೆ ನೀಡಿದಷ್ಟು ಉತ್ಸಾಹ, ಉದ್ಯಾನ ಅಭಿವೃದ್ಧಿ ಯಾರಲ್ಲೂ ಇಲ್ಲ.
• ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರರು
ನಗರದ ಜನತೆ ಉದ್ಯಾನದ ಪರಿಕಲ್ಪನೆ ನೀಡಿದ್ದ ಈ ಉದ್ಯಾನ ಇತರೆ ಕಾರ್ಯಗಳಿಗೆ ಹೆಚ್ಚು ಬಳಕೆಯಾಗುತ್ತಿದೆ. ಗಿಡ, ಹೂಬಳ್ಳಿ ಬೆಳೆಸಿ ಅಂದ ಹೆಚ್ಚಿಸಬೇಕಿದ್ದ ಪಾಲಿಕೆ ಉದ್ಯಾನದಲ್ಲಿ ಹಲವು ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ. ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದ್ದರೂ ನಗರದಲ್ಲಿ ಒಂದೂ ಉದ್ಯಾನ ಚೆನ್ನಾಗಿಲ್ಲ. ಹಂತ ಹಂತವಾಗಿ ಈ ಉದ್ಯಾನವನ್ನು ವಾಣಿಜ್ಯ ಬಳಕೆಗೆ ನೀಡುವ ಕುತಂತ್ರ ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ.
• ವಿ.ಎಂ.ಸೋಮಶೇಖರ, ವಾಯುವಿಹಾರಿ
•ಹೇಮರಡ್ಡಿ ಸೈದಾಪುರ
Advertisement
Advertisement

Udayavani is now on Telegram. Click here to join our channel and stay updated with the latest news.

Next