ಕಲಬುರಗಿ: ಕಲಿಕೆ ಹಂತದಲ್ಲೇ ಪರಿಪೂರ್ಣರಾಗಿ ಓದು ಮುಗಿದ ಬಳಿಕ ವೃತ್ತಿ ಸಾಮರ್ಥ್ಯ ಕೌಶಲ್ಯಕ್ಕೆ ಅನುಗುಣವಾಗಿ
ಉದ್ಯೋಗ ಪಡೆಯಿರಿ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕರೆ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ (ಎಸ್‌ಬಿಆರ್) ಕಾಲೇಜಿನ ಮಿನಿ ಘಟಿಕೋತ್ಸವ ಹಾಗೂ ಎನ್‌ಇಇಟಿ, ಜೆಇಇ, ಕೆ. ಸೆಟ್ ಹಾಗೂ ಪಿಯುಸಿಯಲ್ಲಿ ಟಾಪರ್ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳು ನಗದು ಪುರಸ್ಕಾರ ನೀಡಿ ಅವರು ಮಾತನಾಡಿದರು.
ಕಲಿಕಾ ಹಂತದ ನಂತರ ಪ್ರಶ್ನೆಗಳು ಇರಬಾರದು. ಓದುವಾಗಲೇ ಅರ್ಥೈಯಿಸಿಕೊಂಡು ವಿಷಯ ಮನನ ಮಾಡಿಕೊಳ್ಳಬೇಕು. ಮುಖ್ಯವಾಗಿ ಗುರುವಿನ ಮೇಲೆ ಹಾಗೂ ಓದುವ ವಿಷಯದ ಮೇಲೆ ಪ್ರೀತಿ, ಗೌರವ ಇರಬೇಕು. ಪಾಲಕರ ಮನಸ್ಸಿಗೆ ನೋವು ಮಾಡದಂತೆ ನಡೆದುಕೊಳ್ಳಿ ಜತೆಗೆ ಅವರ ಕನಸು ಸಾಕಾರಗೊಳಿಸುವ ಮುಖಾಂತರ ಓದಿದ ಶಾಲೆ ಹಾಗೂ ಕಾಲೇಜು, ಕುಟುಂಬಕ್ಕೆ ಕೀರ್ತಿ ತರಬೇಕು ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಗುಣಾತ್ಮಕ ಶಿಕ್ಷಣ ನೀಡುವುದೇ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರಮುಖ ಧ್ಯೇಯವಾಗಿದೆ. ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹಿಂದಿನಿಂದಲೂ ಗುಣಾತ್ಮಕ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ಪರಿಣಾಮ ಸಂಸ್ಥೆ ಬೆಳೆಯಲು
ಕಾರಣವಾಗಿದೆ. ಶರಣಬಸವೇಶ್ವರ ಸಂಸ್ಥಾನವು ಅನೇಕ ಶತಮಾನಗಳಿಂದ ದಾಸೋಹ ಕೈಂಕರ್ಯ ಮಾಡುತ್ತಾ ಬಂದಿದೆ. ಅನ್ನ ದಾಸೋಹದಿಂದ ಪ್ರಾರಂಭವಾದ ಸೇವೆ ಶಿಕ್ಷಣ ದಾಸೋಹದವರೆಗೆ ಸಾಗಿ ಬಂದಿದೆ ಎಂದು
ಹೇಳಿದರು.
ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ| ಎನ್.ಎಸ್. ದೇವರಕಲ್, ರಾಮಕೃಷ್ಣರೆಡ್ಡಿ ಮುಂತಾದವರಿದ್ದರು.