Advertisement

ವಸ್ತುಗಳು ಖರೀದಿಸುವಾಗ ಬಿಲ್‌ ಕಡ್ಡಾಯವಾಗಿ ಪಡೆಯಿರಿ

07:43 AM Mar 17, 2019 | Team Udayavani |

ಕೊಳ್ಳೇಗಾಲ: ವೈಜ್ಞಾನಿಕ ಯುಗದಲ್ಲಿ ಐಶಾರಾಮಿ ವಸ್ತುಗಳನ್ನು ಖರೀದಿಸುವಾಗ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಬಿಲ್‌ ಪಡೆದುಕೊಳ್ಳಬೇಕೆಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಎಸ್‌.ಜೆ.ಕೃಷ್ಣ ಸಲಹೆ ನೀಡಿದರು.

Advertisement

ನಗರದ ಮುಡಿಗುಂಡ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯ್ತಿ, ಜಿಲ್ಲಾಡಳಿತ, ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಏರ್ಪಡಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸುವಾಗ ಎಚ್ಚರವಹಿಸಬೇಕು, ವ್ಯಾಪಾರದಲ್ಲಿ ಮೋಸವಾದಾಗ ವಸ್ತುಗಳ ಖರೀದಿಯಲ್ಲಿ ನಿಮಗೆ ಮೋಸವಾಗಿದ್ರೆ ತಮ್ಮ ಹಕ್ಕುಗಳನ್ನು ಚಲಾಯಿಸಲು ರಶೀದಿ ಇರಲೇಬೇಕು. ಆಗ ವಸ್ತುಗಳು ನಿಷ್ಕ್ರಿಯವಾದಾಗ ಅಂಗಡಿ ಮಾಲಿಕ ನೀಡಿದ ಬಿಲ್‌ನ ಆಧಾರದ ಮೇಲೆ ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿ, ನ್ಯಾಯ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. 

ತೂಕ ಮತ್ತು ಅಳತೆ: ಅಂಗಡಿ ಮತ್ತು ಮಾರುಕಟ್ಟೆಗಳಲ್ಲಿ ಸಾಮಗ್ರಿಗಳನ್ನು ಖರೀದಿಸುವಾಗ ಅದರ ಗುಣಮಟ್ಟ ಮತ್ತು ಅಳತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಳತೆಯಲ್ಲಿ ಏರುಪೇರಾದಲ್ಲಿ ಕೂಡಲೇ ಸಂಬಂಧಿಸಿದ ಸರ್ಕಾರಿ ಆಹಾರ ಇಲಾಖೆ ಅಥವಾ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ಗಮನ ಸೆಳೆಯಬೇಕು ಎಂದು ಹೇಳಿದರು. 

ತೆರಿಗೆ: ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೆ ತಂದಿದ್ದು, ಇದರಿಂದ ತಪ್ಪಿಸಿಕೊಳ್ಳಲು ಬಿಲ್‌ ಪಡೆಯದೇ ವಸ್ತುಗಳನ್ನು ಖರೀದಿಸಿದಾಗ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಗ್ರಾಹಕರು ಕಡ್ಡಾಯವಾಗಿ ಬಿಲ್‌ ಪಡೆದು ಸಾಮಗ್ರಿಗಳ ಖರೀದಿ ಮೂಲಕ ಸರ್ಕಾರಕ್ಕೆ ತೆರಿಗೆ ನೀಡಬೇಕು ಎಂದು ಹೇಳಿದರು.

Advertisement

ಸುಳ್ಳು ಭರವಸೆಗಳಿಗೆ ವ್ಯಾಮೋಹಕ್ಕೆ ಒಳಗಾಗಬಾರದು. ಇದನ್ನು ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಮಾರುಕಟ್ಟೆಯ ಸಾಮಗ್ರಿಗಳನ್ನು ಖರೀದಿಸುವಂತಾಗಬೇಕು. ಆಗ ಮಾತ್ರ ಗ್ರಾಹಕರ  ಹೋರಾಟ ಸಾರ್ಥಕವಾಗಲಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್‌.ಬಸವರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ರೀತಿಯಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸುತ್ತಿದೆ. ಯಾವುದೇ ವಸ್ತುಗಳನ್ನು ಖರೀದಿಸುವ ವೇಳೆ ತೆರಿಗೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬಾರದು.

ರಶೀದಿಯನ್ನು ಕಡ್ಡಾಯವಾಗಿ ಪಡೆದುಕೊಂಡಾಗ ಮಾತ್ರ ಗ್ರಾಹಕರ ದಿನಾಚರಣೆ ಸಾರ್ಥಕವಾಗಲಿದೆ ಎಂದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ಟಿ.ಶ್ರೀಕಾಂತ್‌, ಜಿಲ್ಲಾ ಆಹಾರ ಸಹಾಯಕ ನಿರ್ದೇಶಕ ಲಿಂಗರಾಜು, ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ಗೋವಿಂದರಾಜು, ಸರ್ಕಾರಿ ಅಭಿಯೋಜಕ ನಾಗೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next