Advertisement

ಜನಪ್ರಿಯ ಗಾಲ್ಫ್ ಬಗ್ಗೆ ನೀವೆಷ್ಟು ತಿಳಿದಿದ್ದೀರಿ ? ಏಸ್, ಈಗಲ್, ಬರ್ಡಿ, ಪಾರ್ ಅಂದ್ರೇನು..?

06:25 PM Aug 08, 2021 | Team Udayavani |

ಗಾಲ್ಫ್ ಒಂದು ವೈಯುಕ್ತಿಕ ಕ್ರೀಡೆಯಾಗಿದ್ದು, ಗಾಲ್ಫ್ ಸ್ಟಿಕ್‌ ಮೂಲಕ ಚೆಂಡನ್ನು ಟೀ (ಆರಂಭ) ಯಿಂದ ನೇರವಾಗಿ ಮುಂದಿನ ರಂಧ್ರಕ್ಕೆ ಹೊಡೆಯುವ ಮೂಲಕ ಆಡಲಾಗುತ್ತದೆ. ಗಾಲ್ಫ್  ಕೋರ್ಸ್‌ನಲ್ಲಿ ಕನಿಷ್ಠ ಹೊಡೆತಗಳ ಮೂಲಕ (ಸ್ವಿಂಗ್ ಅಥವಾ ಸ್ಟ್ರೋಕ್)ಚೆಂಡನ್ನು ರಂಧ್ರದ ಒಳಗೆ ಹಾಕಬೇಕಾಗುತ್ತದೆ.

Advertisement

ಗಾಲ್ಫ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಎಲ್ಲಾ ವಯಸ್ಸಿನವರಿಗೂ ಇಷ್ಟ ಆಗುವ ಈ ಕ್ರೀಡೆ ಸಾಮಾನ್ಯವಾಗಿ, ವಿಶ್ರಾಂತಿಗಾಗಿ ಮತ್ತು ಫ್ರೀ ಟೈಮ್‌ನಲ್ಲಿ ಆನಂದಿಸಲು ಕೆಲವರು ಆಡುತ್ತಾರೆ. ಅದಲ್ಲದೆ, ಗಾಲ್ಫ್ ಸ್ಪರ್ಧೆಯೂ ನಡೆಯುತ್ತದೆ. ಗಾಲ್ಫ್ ಆಡುವ ಪ್ರದೇಶವನ್ನು ಗಾಲ್ಫ್ ಕೋರ್ಸ್ ಎಂದು ಕರೆಯಲಾಗುತ್ತದೆ. ಆದರೆ ವಿಶೇಷವೇನೆಂದರೆ, ಇತರ ಕ್ರೀಡೆಗಳಂತೆ, ಗಾಲ್ಫ್ ಕೋರ್ಸ್‌ಗೆ ಒಂದು ನಿರ್ದಿಷ್ಟ ಪ್ರಮಾಣಿತ ಅಥವಾ ಸ್ಥಿರ ಗಾತ್ರವಿಲ್ಲ. ಕೋರ್ಸ್‌ಗಳು ಉದ್ದ ಮತ್ತು ಭಿನ್ನ ವಿನ್ಯಾಸದಲ್ಲಿರುತ್ತದೆ. ಅನೇಕರಿಗೆ, ಇದೇ ಕಾರಣಕ್ಕೆ ಗಾಲ್ಫ್ ಇಷ್ಟವಾಗುತ್ತದೆ. ಅನೇಕ ಗಾಲ್ಫ್ ಕೋರ್ಸ್ ಗಳು ತನ್ನ ಗಾತ್ರ, ವಿನ್ಯಾಸ ಹಾಗೂ ಸೌಂದರ್ಯಕ್ಕೆ ಹೆಸರುವಾಸಿ.

ಪ್ರತಿಯೊಂದು ಗಾಲ್ಫ್ ಕೋರ್ಸ್, ಹಲವಾರು ಗಾಲ್ಫ್ ರಂಧ್ರಗಳಿಂದ ಮಾಡಲ್ಪಟ್ಟಿದೆ. 18 ರಂಧ್ರಗಳು ಸಾಮಾನ್ಯ. ಆದರೆ, ಕೆಲವು ಕೋರ್ಸ್ಗಳು ಕೇವಲ 9 ರಂಧ್ರಗಳನ್ನು ಹೊಂದಿರುತ್ತವೆ. ಆಗ 9ರ ಎರಡು ಸುತ್ತಿನಲ್ಲಿ ಆಡಲಾಗುತ್ತದೆ. ಗಾಲ್ಫ್ ಆಟಗಾರನು ಟೀ ಪ್ರದೇಶದಿಂದ ಪ್ರತಿ ರಂಧ್ರಕ್ಕೆ ಚೆಂಡನ್ನು ಹೊಡೆಯಬೇಕು. ಟೀ ಪ್ರದೇಶದಿಂದ ರಂಧ್ರದೊಳಗೆ ಚೆಂಡು ಸೇರಿಸಲು ಆಟಗಾರನು ಎಷ್ಟು ಹೊಡೆತಗಳನ್ನು ಹೊಡೆದಿರುತ್ತಾನೆ ಎಂಬುವುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಅತ್ಯಂತ ಕಡಿಮೆ ಹೊಡೆತದಲ್ಲಿ ಚೆಂಡನ್ನು ರಂಧ್ರದೊಳಗೆ ಸೇರಿಸುವವರು ಗೆಲುವು ಸಾಧಿಸುತ್ತಾರೆ.

ಸ್ಕೋರಿಂಗ್:

ಏಸ್ – ಒಂದೇ ಹೊಡೆತದಲ್ಲಿ ರಂಧ್ರದೊಳಗೆ ಚೆಂಡು

Advertisement

ಈಗಲ್ – ಪಾರ್‌ ಗಿಂತ ಎರಡು ಕಡಿಮೆ ಹೊಡೆತ

ಬರ್ಡಿ – ಪಾರ್‌ ಗಿಂತ ಒಂದು ಕಡಿಮೆ ಹೊಡೆತ

ಪಾರ್ – ಗಾಲ್ಫ್ ಚೆಂಡನ್ನು ಟೀ ನಿಂದ ರಂಧ್ರಕ್ಕೆ ಹೊಡೆಯಲು ತೆಗೆದುಕೊಳ್ಳಬೇಕಾದ ಒಂದು ನಿರ್ದಿಷ್ಟ ಪ್ರಮಾಣಿತ ಸಂಖ್ಯೆಯ ಹೊಡೆತಗಳು

ಬೋಗಿ – ಪಾರ್‌ ಗಿಂತ ಒಂದು ಜಾಸ್ತಿ ಹೊಡೆತ

ಡಬಲ್ ಬೋಗಿ – ಪಾರ್‌ ಗಿಂತ ಎರಡು ಜಾಸ್ತಿ ಹೊಡೆತ

ಟ್ರಿಪಲ್ ಬೋಗಿ – ಪಾರ್‌ ಗಿಂತ ಮೂರು ಜಾಸ್ತಿ ಹೊಡೆತ

ಈ ಸ್ಕೋರಿಂಗ್ ಅನ್ನು ಸರಳವಾಗಿ ವಿವರಿಸುವುದಾದರೆ, ಗಾಲ್ಫ್ ಆಟಗಾರನು ಟೀ ಯಿಂದ ರಂಧ್ರಕ್ಕೆ ಚೆಂಡನ್ನು ಹಾಕಬೇಕು. ಇದು ಸಾಮಾನ್ಯವಾಗಿ 100, 150 ಅಥವಾ 200 ಯಾರ್ಡ್ (90-180 ಮೀಟರ್) ದೂರದಲ್ಲಿರುತ್ತದೆ. ಒಂದು ನಿರ್ದಿಷ್ಟ ಸಂಖ್ಯೆಯ ಹೊಡೆತ ಬೇಕಾಗುತ್ತದೆ ಎಂದು ಪೂರ್ವವಾಗಿಯೇ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಟೀ ಯಿಂದ ರಂಧ್ರದೊಳಗೆ ಚೆಂಡು ಸೇರಿಸಲು 4 ಹೊಡೆತ ಬೇಕು ಎಂದು ಫಿಕ್ಸ್ ಮಾಡಿಡಲಾಗುತ್ತದೆ. ಆಟಗಾರನು ಪಾರ್, ಬರ್ಡಿ, ಈಗಲ್ ಹೊಡೆದಷ್ಟು ಆಟದಲ್ಲಿ ಉತ್ತಮ ಸ್ಥಿತಿಯಲ್ಲಿರುತ್ತಾನೆ. ಅದೇ ಬೋಗಿ, ಡಬಲ್ ಬೋಗಿ, ಟ್ರಿಪಲ್ ಬೋಗಿ ಹೊಡೆದರೆ, ಗೆಲ್ಲುವ ಸಾಧ್ಯತೆ ಅತ್ಯಂತ ಕಡಿಮೆ. ಏಸ್ (ಒಂದೇ ಹೊಡೆತದಲ್ಲಿ ರಂಧ್ರದೊಳಗೆ ಚೆಂಡು ಸೇರಿಸುವುದು) ಯಾವುದೇ ಆಟಗಾರನಿಗೂ ಕಷ್ಟಸಾಧ್ಯ.

ಇದೂ ಗೊತ್ತಿರಲಿ:

  • ಎಲ್ಲಿ ಚೆಂಡು ನಿಂತಿರುತ್ತೋ, ಅಲ್ಲಿಂದಲೇ ಮುಂದಿನ ಹೊಡೆತವನ್ನು ಹೊಡೆಯಬೇಕು. ಹಾಕಿಯಲ್ಲಿ ಮಾಡುವಂತೆ, ಚೆಂಡನ್ನು ಮುಂದೆ ಸರಿಸಿ, ಹೊಡೆಯುವಂತಿಲ್ಲ.
  • ನಿಂತಿರುವ ಚೆಂಡನ್ನು ಮಾತ್ರ ಹೊಡೆಯಬೇಕು. ಚೆಂಡು ನೀರಿನಲ್ಲಿ ಇರುವುದನ್ನು ಹೊರತುಪಡಿಸಿ, ಉಳಿದಕಡೆ ಚಲಿಸುವ ಚೆಂಡನ್ನು ಹೊಡೆಯುವಂತಿಲ್ಲ. ಹೀಗೆ ಮಾಡಿದರೆ, ಪೆನಾಲ್ಟಿ ಬೀಳುತ್ತದೆ.
  • ನೀವು ಆಡುವ ಮೊದಲು ನಿಮ್ಮ ಚೆಂಡು ಯಾವುದು ಎಂದು ಗುರುತಿಸಿ. ಇತರರ ಚೆಂಡನ್ನು ಹೊಡೆಯುವಂತಿಲ್ಲ.
  • ಡಬಲ್ ಹಿಟ್‌ ಗೆ (ಒಂದೇ ಕಡೆಯಿಂದ ಎರಟು ಬಾರಿ ಹೊಡೆಯುವುದು) ಅವಕಾಶವಿಲ್ಲ. ಉದ್ದೇಶಪೂರ್ವಕವಲ್ಲದ, ಆಕಸ್ಮಿಕವಾಗಿ ನಡೆದರೆ ಅದಕ್ಕೆ ದಂಡ/ಪೆನಾಲ್ಟಿ ವಿಧಿಸಲಾಗುವುದಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ಡಬಲ್ ಹಿಟ್ ಮಾಡುವಂತಿಲ್ಲ.

-ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಶಿಕ್ಷಣವನ್ನು ನಿರ್ಲಕ್ಷಿಸಿದರೆ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next