Advertisement

ರಿಯಾಯತಿ ದರದಲ್ಲಿ ಕಲ್ಲು-ಮರಳು ಸಿಗಲಿ

10:26 AM Jul 02, 2019 | Suhan S |

ಚಿತ್ರದುರ್ಗ: ಜಿಲ್ಲೆಯಲ್ಲಿ ಜನರು ನಿರ್ಮಿಸುವ ಆಶ್ರಯ ಮನೆಗಳಿಗೆ ರಿಯಾಯತಿ ದರದಲ್ಲಿ ಕಲ್ಲು ಮತ್ತು ಮರಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ರಾಜಶೇಖರ ಬಿ. ಪಾಟೀಲ್, ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದು, ಜನರು ಬರಗಾಲದಿಂದ ಬೆಂದು ಹೋಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದ ಜನರು ಆಶ್ರಯ ಮನೆ ನಿರ್ಮಿಸಿಕೊಳ್ಳಲು ಮರಳು ಮತ್ತು ಕಲ್ಲು ಅಗತ್ಯವಾಗಿದೆ. ಆದರೆ ಮರಳು ಮತ್ತು ಕಲ್ಲುಗಾರಿಕೆ ಮಾಲೀಕರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಹೆಚ್ಚು ದರವನ್ನು ನಿಗದಿಪಡಿಸದೆ ರಿಯಾಯತಿ ದರದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕೆಂದರು.

ಚಿತ್ರದುರ್ಗ ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಸಿಇಸಿ ವರದಿಯನ್ವಯ 3800 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಇದನ್ನು ಮುಂದಿನ 10 ವರ್ಷದ ಯೋಜನೆಗೆ ಮೀಸಲಿಡಲಾಗಿದೆ. ಯೋಜನೆಗಳನ್ನು ರೂಪಿಸುವಾಗ ಗಣಿ ಬಾಧಿತ ಪ್ರದೇಶಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಾನಿಯಾದ ಪ್ರದೇಶಗಳಲ್ಲಿ ಡಿಎಂಎಫ್‌ ನಿಧಿಯನ್ನು ಮಾರ್ಗಸೂಚಿಯನ್ವಯ ಬಳಸಬೇಕು. ಸರ್ಕಾರದಿಂದ ಕಾಲ ಕಾಲಕ್ಕೆ ಬಂದಂತಹ ಮಾರ್ಗಸೂಚಿಗಳನ್ನು ಶಾಸಕರು ಕೇಳಿದಾಗ ನೀಡಬೇಕು ಎಂದು ತಿಳಿಸಿದರು. ಮರಳು ಗಣಿಗಾರಿಕೆಯಲ್ಲಿ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳ

ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ಒಂದು ಸಭೆಯೂ ನಡೆದಿದೆ. ಜು. 3 ರಂದು ಮತ್ತೂಂದು ಸಭೆ ಇದ್ದು ಈ ಸಭೆಯಲ್ಲಿ ಕೆಲವೊಂದು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತದೆ ಮತ್ತು ತೆಲಂಗಾಣ ಮಾದರಿಯಲ್ಲಿ ಸಾರ್ವಜನಿಕರಿಗೆ ಮರಳು ನೀಡುವ ಯೋಚನೆಯೂ ಇದೆ ಎಂದು ಹೇಳಿದರು.

Advertisement

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಜಿಲ್ಲೆಯ 100 ವರ್ಷಗಳ ಇತಿಹಾಸದಲ್ಲಿ ಸುಮಾರು 76 ವರ್ಷಗಳ ಕಾಲ ಬರಗಾಲಕ್ಕೆ ತುತ್ತಾಗಿದೆ. ಆಶ್ರಯ ಮನೆ ನಿರ್ಮಿಸಲು ಮರಳು ಸಿಗದೆ ಜನರು ಪರದಾಡುತ್ತಿದ್ದಾರೆ. ಮರಳು ಖರೀದಿಸಲು ಬೇರೆಡೆ ಹೋದರೆ ದುಬಾರಿ ವೆಚ್ಚ ಭರಿಸಬೇಕಾಗುತ್ತದೆ. ಆದ್ದರಿಂದ ತಹಶೀಲ್ದಾರರ ಅನುಮತಿ ಮೇರೆಗೆ ಸ್ಥಳೀಯವಾಗಿ ಮರಳು ದೊರಕುವಂತೆ ಮಾಡಬೇಕು. ತಾಲೂಕು ಮಟ್ಟದಲ್ಲಿ ಮರಳು ಶೇಖರಣಾ ಯಾರ್ಡ್‌ ತೆರೆಯಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಮಾತನಾಡಿ, ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಶೇ. 25 ರಷ್ಟು ರಿಯಾಯತಿ ದರದಲ್ಲಿ ಮರಳು ನೀಡಬೇಕು. ಅಕ್ರಮವಾಗಿ ಮರಳು ಬೇರೆಡೆಗೆ ಸಾಗಿಸದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಕಾರಿ ವಿಜಯಕುಮಾರ್‌, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹಂತೇಶ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next