Advertisement
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ವರಂಗ ಕೆರೆ ಬಸದಿ ನನ್ನ ಮೆಚ್ಚಿನ ತಾಣ. ಅದೊಂದು ಮುಂಜಾನೆ ಕೆರೆಯ ಎಡ ಅಂಚಿನಲ್ಲಿ ಕೂತು ಫೋಟೋ ತೆಗೀತಿದ್ದೆ. ಹಿಂದೆ ಯಾರೋ ನಿಂತಿದ್ದಂತೆ ಅನ್ನಿಸಿ, ಹಿಂತಿರುಗಿದೆ. ಹೌದು ಮಿಂಜಿರ. ಹಿಂದಿನಿಂದ ಬಗ್ಗಿ ನಿಂತು ನನ್ನ ಮೊಬೈಲ್ ಸ್ಕ್ರೀನ್ ನೋಡಲು ಯತ್ನಿಸುತ್ತಿದ್ದ.
Related Articles
Advertisement
ನೇರವಾಗಿ ವಯಸ್ಸು ಹೇಳ್ಳೋದು ಬಿಟ್ಟು, ಊರ ಹಿರಿಯರ ಹೆಸರು ಹೇಳಿ “ಅವರಿಗಿಂತ 2 ವರುಷ ದೊಡ್ಡವನು. ಇವರಿಗಿಂತ 4 ವರುಷ ಸಣ್ಣವನು. ಮತ್ತೆ ಆ ಅಂಗಡಿಯವರಿಗಿಂತ…’ ಅಂತ ರಾಗ ಎಳೆದು ತನ್ನ ವಯಸ್ಸನ್ನು ಒಗಟಾಗಿಸಿಯೇ ಅಡಗಿಸಿಟ್ಟ. ಆ ಒಗಟಿನಿಂದಾಗಿಯೇ ಮಿಂಜಿರ ನನ್ನವನಾದ. ಸಲುಗೆಯಿಂದ ಮತ್ತಷ್ಟು ಮಾತು ಮತ್ತು ಕಥೆಯಾಯಿತು. ಆದರೆ, ಒಮ್ಮಿಂದೊಮ್ಮೆಲೆ ಮಿಂಜಿರನ ಏರು ಧ್ವನಿ ಪಾತಾಳಕ್ಕಿಳಿಯಿತು. ಅವನ ಕಣ್ಣು ನನ್ನ ಮೊಬೈಲನ್ನೇ ಇಣುಕಿತು.
“ನಾನೊಂದು ಪಿಚ್ಚರ್ ತೆಗೀಲಾ?’ ಅಂತ ಕೈ ಮುಂಚಾಚಿದ. “ತಮ್ಮನ ಮಕ್ಳತ್ರ ಮೊಬೈಲ್ ಇದೆ. ಆದ್ರೆ ನನಗದು ಗೊತ್ತಾಗಲ್ಲ. ಒಂದು ಪಿಚ್ಚರ್ ತೆಗೀತೇನೆ. ಕಲಿಸಿಕೊಡ್ತೀರಾ?’ ಅಂದಾಗ ನನಗೆ ತಪ್ಪಿಸಿಕೊಳ್ಳಲು ಮನಸ್ಸಾಗಲಿಲ್ಲ. ಕೊಟ್ಟೆ. ಕ್ಲಿಕ್ ಮಾಡೋದನ್ನು ಕಲಿಸಿದೆ. “ಮೋಡ ತುಂಬಾ ಇದೆ. ಎಲ್ಲಾ ಕಪ್ಪು ಕಪ್ಪು ಕಾಣಿ¤ದೆ’ ಅಂತ ದೂರಿದ. ಲೆನ್ಸ್‌ಗೆ ಅಡ್ಡಹಿಡಿದ ಬೆರಳನ್ನು ಸರಿಸಿ, ಮೊಬೈಲ್ ಹಿಡಿಯುವುದು ಕಲಿಸಿದೆ. “ಈಗ ಲಾಯಕ್ ಕಾಣಿಸ್ತಾ ಉಂಟು ಮಾರ್ರೆ’ ಎಂದು ಉತ್ಸಾಹಗೊಂಡ.
ಒಂದೆರಡು ಕ್ಲಿಕ್ ಆದ ಮೇಲೆ ಮತ್ತಷ್ಟು ಹುರುಪುಗೊಂಡು, ನನ್ನ ಫೋಟೋ ತೆಗೀತೇನೆ ಅಂತ ಬೆನ್ನುಬಿದ್ದ. ದೂರದಲ್ಲಿದ್ದ ದೋಣಿಯ ಹತ್ತಿರ ಓಡಿಸಿದ. ದೋಣಿ ಹತ್ತಿಸಿದ. ಕೂತ ನನ್ನನ್ನು ದೋಣಿಯ ತುದಿಗೆ ಹೋಗಿ ನಿಲ್ಲಲು ಆಜ್ಞೆ ಕೊಟ್ಟ.ಮಿಂಜಿರನ ಉತ್ಸಾಹಕ್ಕೆ ಬೆರಗಾದೆ. ಆದರೆ, ಆತನ ಬೆರಳುಗಳು ಮಾತ್ರ ಮತ್ತೆ ಮತ್ತೆ ಲೆನ್ಸ್‌ಗಳನ್ನು ಮುಚ್ಚುತ್ತಲೇ ಇದ್ದವು.
ಹೊತ್ತು ಮೀರಿತು. “ಕಾಲೇಜಿಗೆ ಲೇಟ್ ಆದ್ರೆ ಕಷ್ಟ. ಇನ್ನೊಮ್ಮೆ ಸಿಗೋಣ. ಇಂದಿಗೆ ಸಾಕು’ ಎಂದೆ. ಅವನಿಗೆ ನಿರಾಸೆಯಾಯಿತು. ಆದರೇನು ಮಾಡೋದು? ಎಕ್ಸಾಂ ಡ್ನೂಟಿ ಬೇರೆ. ಹೊತ್ತು ಆಚೀಚೆ ಆಗುವಂತಿಲ್ಲ. “ಇನ್ನು ಹೊರಡ್ತೇನೆ’ ಅಂದೆ. “ಆಯ್ತು’ ಅಂದವ ಮೊಬೈಲ್ ಕೊಟ್ಟ. ಧನ್ಯವಾದ ಹೇಳಿ ಹತ್ತು ಹೆಜ್ಜೆ ಇಟ್ಟೆನಷ್ಟೆ. ನನ್ನ ಬೆನ್ನ ಹಿಂದೆಯೇ ಬೀಸಿ ಬಂದ. ಕಾಸುಗೀಸೇನಾದರೂ ಕೇಳುತ್ತಾನಾ? ಪರ್ಸು ಅಕ್ಕನ ಮನೆಯಲ್ಲಿತ್ತು. ಕೊಡೋಣವೆಂದರೆ ಬಿಡಿಗಾಸೂ ಆಗ ಇರಲಿಲ್ಲ.
ಆದರೆ, ಆತ ಬಂದದ್ದು ಹಣಕ್ಕಲ್ಲ. “ಇಲ್ಲೇ ಮುಂದೆ, ದಾರಿಯಲ್ಲೇ, ಗದ್ದೆಯ ಅಂಚಿನಲ್ಲಿ ಸಣ್ಣ ಮೀನುಗಳು ತುಂಬಾ ಇವೆ. ಅದ್ರದೊಂದು ಪಿಚ್ಚರ್ ತೆಗೀರಿ’ ಅಂತ ಹೇಳಲು. “ನಂಗೆ ಲೇಟ್ ಆಗುತ್ತಲ್ಲಾ ಮಂಜಿರಾ, ಇನ್ನೊಮ್ಮೆ…’
“ಅಯ್ಯೋ, ನೀವು ಇನ್ನೊಮ್ಮೆ ಬರೋವಾಗ ಮೀನುಗಳು ಇರುತ್ತೋ ಯಾರಿಗೊತ್ತು? ಮಳೆ ಬೇರೆ ಬರ್ತಿಲ್ಲ. ಗದ್ದೆ ಒಣಗುತ್ತಿದೆ. ಎಂಥ ಬರಗಾಲ ಕಾದಿದೆಯೋ? ಈಗ್ಲೆà ತೆಗೆದು ಬಿಡಿ’ ಎಂದು ಹಠ ಹಿಡಿದ.
ಆತ ಹೇಳಿದ್ದು ಸತ್ಯ ಅನಿಸಿತು. ಅವಸರವಿದ್ದರೂ ಮೀನಗುಂಪಿನ ಫೋಟೋ ತೆಗೆದೆ. ತೋರಿಸಿದೆ. ಬಿಳಿ ಹಲ್ಲುಗಳು ಮಿನುಗಿದವು. ಮಿಂಜಿರ ತೆಗೆದ ನನ್ನ ಫೋಟೋಗಳನ್ನು ಎಡಿಟ್ ಮಾಡದೇ ಇಲ್ಲಿ ಕೊಟ್ಟಿದ್ದೇನೆ. ಚಂದ ತೋರಿದರೆ ವರಂಗಕ್ಕೆ ನೀವೂ ಬಂದಾಗ ಅವನಿಂದ ಒಂದು ಕ್ಲಿಕ್ ಮಾಡಿಸಿಕೊಳ್ಳಿ. – ಮಂಜುನಾಥ ಕಾಮತ್